Advertisement

Anganwadi; ಘೋಷಣೆಯಾದರೂ ಕೈಸೇರದ “ಗ್ರಾಚುಯಿಟಿ’!

12:19 AM Oct 15, 2023 | Team Udayavani |

ಮಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಜನವರಿಯಲ್ಲಿ ನಡೆಸಿದ್ದ ಪ್ರತಿಭಟನೆಗೆ ಮಣಿದು ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದ್ದ ಗ್ರಾಚುಯಿಟಿ (ಉಪಧನ) ನೀಡಲು ಸರಕಾರ ಒಪ್ಪಿಗೆ ಸೂಚಿಸಿತ್ತು. ಬಳಿಕ ಬಜೆಟ್‌ನಲ್ಲೂ ಈ ಬಗ್ಗೆ ಪ್ರಸ್ತಾವಿಸಿ ಸುಮಾರು 40 ಕೋ.ರೂ. ಮೀಸಲಿರಿಸಲಾಗಿತ್ತು. ಆದರೆ ಯಾವೊಬ್ಬ ನಿವೃತ್ತರಿಗೂ ಇಲ್ಲಿಯವರೆಗೆ ಗ್ರಾಚುಯಿಟಿ ಪಾವತಿಯಾಗಿಲ್ಲ.

Advertisement

ಎಲ್ಲ ಅರ್ಹ ಅಂಗ ನವಾಡಿ ಕಾರ್ಯ ಕರ್ತೆಯರು ಮತ್ತು ಸಹಾ ಯಕಿಯರಿಗೆ ಗ್ರಾಚುಯಿಟಿ ನೀಡುವ ಬಗ್ಗೆ 2022ರ ಎಪ್ರಿಲ್‌ 25ರಂದು ಸುಪ್ರೀಂ ಕೋರ್ಟ್‌ ಗುಜರಾತ್‌ ಸರಕಾರಕ್ಕೆ ಆದೇಶ ನೀಡಿತ್ತು. ಗ್ರಾಚುಯಿಟಿ ಕಾಯ್ದೆಯಲ್ಲಿ ನಮೂದಿಸಿರುವಂತೆ ವಾರ್ಷಿಕ ಶೇ. 10ರ ಸರಳ ಬಡ್ಡಿಯನ್ನು ನೀಡುವಂತೆ ಸೂಚಿಸಿತ್ತು.

ಸುಪ್ರೀಂ ಕೋರ್ಟ್‌ನ ಈ ಆದೇಶದಂತೆ ರಾಜ್ಯದಲ್ಲಿಯೂ ಗ್ರಾಚುಯಿಟಿ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಜನವರಿಯಲ್ಲಿ 10 ದಿನ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆಗೆ ಮಣಿದ ಆಗಿನ ಸರಕಾರ 2023-24ನೇ ಸಾಲಿನಿಂದ ನಿವೃತ್ತರಾಗುವವರಿಗೆ ಗ್ರಾಚುಯಿಟಿಗೆ ಒಪ್ಪಿಗೆ ನೀಡಿತ್ತು. ಬಳಿಕ ಬಜೆಟ್‌ನಲ್ಲಿ ಜಾರಿಗೊಳಿಸಿ 2023ರ ಎಪ್ರಿಲ್‌ನಿಂದ ಯಾರೆಲ್ಲ ನಿವೃತ್ತರಾಗುತ್ತಾರೆ ಅವರಿಗೆ ಗ್ರಾಚುಯಿಟಿ ನೀಡುವುದಾಗಿ ಘೋಷಿಸಿತ್ತು. ಸದ್ಯ ಸರಕಾರದ ಮಟ್ಟದಲ್ಲಿ ಹೆಚ್ಚಿನ ಬೆಳವಣಿಗೆಯಾದಂತಿಲ್ಲ. ಜಿಲ್ಲಾ ಉಪನಿರ್ದೇಶಕರಿಗೆ ಗ್ರಾಚುಯಿಟಿ ಕುರಿತಂತೆ ಯಾರಾದರೂ ಅರ್ಜಿ ನೀಡಿದರೆ ತೆಗೆದುಕೊಳ್ಳುವಂತೆ ಮಾತ್ರ ಸೂಚನೆ ನೀಡಿದೆ. ಎಷ್ಟು ಮಂದಿ ನಿವೃತ್ತರಿದ್ದಾರೆ ಎನ್ನುವ ಮಾಹಿತಿಯೂ ಇಲಾಖೆಯಲ್ಲಿ ಇಲ್ಲ. ಅಂದಾಜಿನ ಪ್ರಕಾರ ಉಭಯ ಜಿಲ್ಲೆಗಳಲ್ಲಿ ಸುಮಾರು 75-80 ಮಂದಿ ನಿವೃತ್ತಿಯಾಗಿದ್ದಾರೆ.

ಅಂಗನವಾಡಿ ನೌಕರರಿಗೆ ನಿವೃತ್ತಿ ಅಧಿಕೃತವಾಗಿ ಜಾರಿಗೆ ಬಂದಿರುವುದು 2011ರಲ್ಲಿ. 60 ವರ್ಷಕ್ಕೆ ನಿವೃತ್ತರಾಗುತ್ತಾರೆ. ತಿಂಗಳ ಗೌರವಧನ ಪಡೆಯುತ್ತಿದ್ದವರಿಗೆ ನಿವೃತ್ತಿಯ ಬಳಿಕ ಏಕಾಏಕಿ ಆರ್ಥಿಕ ಮೂಲವೇ ಇಲ್ಲದಂತಾಗುತ್ತದೆ. ನಿತ್ಯ ಖರ್ಚು, ವೈದ್ಯಕೀಯ ವೆಚ್ಚ ಇತ್ಯಾದಿಗಳಿಗೆ ಮನೆಯವರನ್ನು ಅವಲಂಬಿಸಬೇಕಾಗುತ್ತದೆ. ಗ್ರಾಚುಯಿಟಿ ಸಿಕ್ಕಿದರೆ ಒಂದಷ್ಟು ಕಾಲ ತಮ್ಮ ಖರ್ಚು ವೆಚ್ಚಗಳನ್ನು ತಾವೇ ನೋಡಿಕೊಳ್ಳಲು ಸಾಧ್ಯವಾಗಲಿದೆ. ಈ ನಡುವೆ ಸರಕಾರ 2023-24ನೇ ಸಾಲಿನಿಂದ ಗ್ರಾಚುಯಿಟಿ ನೀಡುವುದಾಗಿ ತಿಳಿಸಿದ್ದು, 2023ರ ಮಾರ್ಚ್‌ ತಿಂಗಳಿನಲ್ಲಿ ನಿವೃತ್ತರಾದವರು ಏನು ತಪ್ಪು ಮಾಡಿದ್ದಾರೆ ಎಂದು ಪ್ರಶ್ನಿಸುತ್ತಾರೆ ಉಡುಪಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯ ಸಂಘದ ಕಾರ್ಯದರ್ಶಿ ಸುಶೀಲಾ ನಾಡ.

ಏನಿದು ಗ್ರಾಚುಯಿಟಿ?
ತಮ್ಮಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಉದ್ಯೋಗದಾತ ನೀಡುವ ಹಣಕಾಸಿನ ಅಂಶವಾಗಿದೆ. ಗ್ರಾಚುಯಿಟಿ ಕಾಯ್ದೆ 1972ರ ಪ್ರಕಾರವೇ ಇದನ್ನು ನೀಡಲಾಗುತ್ತದೆ. ಉದ್ಯೋಗಿ ಪಡೆಯುವ ಸಂಬಳದ ಒಂದು ಭಾಗವಾಗಿದ್ದು, ನಿವೃತ್ತಿಗೆ ಸಹಾಯ ಮಾಡಲು ವಿನ್ಯಾಸ ಮಾಡಲಾದ ಲಾಭದ ಯೋಜನೆಯಾಗಿದೆ. ಕನಿಷ್ಠ 5 ವರ್ಷಗಳ ಕಾಲ ಒಂದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ಉದ್ಯೋಗವನ್ನು ತೊರೆದಾಗಲೂ ಗ್ರಾಚುಯಿಟಿ ಪಾವತಿಸಬೇಕು.

Advertisement

*ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರಿಗೆ ಗ್ರಾಚುಯಿಟಿ ಸೌಲಭ್ಯ ಒದಗಿಸುವ ಸಂಬಂಧ ಸರಕಾರ ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹ. ಆದರೆ 2011ರಿಂದ ನಿವೃತ್ತಿ ಅಧಿಕೃತವಾಗಿ ಜಾರಿಗೆ ಬಂದಿದ್ದು, ಅಂದಿನಿಂದಲೇ ಅನ್ವಯವಾಗುವಂತೆ ನೀಡಬೇಕು ಎನ್ನುವುದು ನಮ್ಮ ಬೇಡಿಕೆ. ಸರಕಾರ ಈ ನಿಟ್ಟಿನಲ್ಲಿ ಗಮನ ಹರಿಸಿ ಎಲ್ಲರಿಗೂ ಅನುಕೂಲವಾಗುವಂತೆ ನೋಡಿಕೊಳ್ಳಬೇಕು.
– ಜಯಲಕ್ಷ್ಮೀ ಬಿ.ಆರ್‌.,
ಗೌರವಾಧ್ಯಕ್ಷೆ, ಅಂಗನವಾಡಿ ಕಾರ್ಯಕರ್ತೆಯರು- ಸಹಾಯಕಿಯರ ಸಂಘ

 

Advertisement

Udayavani is now on Telegram. Click here to join our channel and stay updated with the latest news.

Next