ತೆಕ್ಕಟ್ಟೆ: ಕುಂದಾಪುರ ತಾ|ನ ಮೊಳಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಮಾಸ್ತಿಕಟ್ಟೆ ಎಂಬಲ್ಲಿ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲದೇ ಹಳೆದಾದ ಮನೆಯೊಂದರಲ್ಲಿ ಕಳೆದ ಹಲವು ವರ್ಷಗಳಿಂದಲೂ ಕಾರ್ಯ ನಿರ್ವಹಿಸುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಗ್ರಾ.ಪಂ. ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ
ತಹಶೀಲ್ದಾರ್ ಅವರ ಗ್ರಾಮ ವಾಸ್ತವ್ಯದ ಕಾರ್ಯಕ್ರಮದ ಸಂದರ್ಭದಲ್ಲಿ ಗಮನಕ್ಕೆ ತಂದಾಗ, ಸ್ಥಳ ಪರಿಶೀಲಿಸಿದರಾದರೂ ಕೂಡಾ ಸ.ನಂ. 251ರಲ್ಲಿ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಗೆ ಬರುತ್ತದೆ ಎನ್ನುವ ಕಾರಣಕ್ಕೆ ನಿವೇಶ ಮಂಜೂರು ಮಾಡುವಲ್ಲಿ ತಾಂತ್ರಿಕವಾಗಿ ಸಮಸ್ಯೆಯಾಗಿದೆ. ಪರಿಣಾಮ ಅಂಗನವಾಡಿ ಸ್ವಂತ ಕಟ್ಟಡ ನಿರ್ಮಾಣವೆನ್ನುವುದು ಕನಸಾಗಿ ಉಳಿದಿರುವುದು ಮಾತ್ರ ವಿಪರ್ಯಾಸ.
ಈಗಾಗಲೇ ಗ್ರಾಮೀಣ ಭಾಗದ ಮಾಸ್ತಿಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ಬೆಳಗೋಡು, ಹುಂತ್ರಮಕ್ಕಿ, ಹೊರ್ನಾಡಿ, ಕಾಕಿಕೂಡ್ಲ ಸೇರಿದಂತೆ ಪರಿಸರದ ಸುಮಾರು 17 ಪುಟಾಣಿಗಳು ವ್ಯಾಸಂಗ ಮಾಡುತ್ತಿದ್ದು, ಕೇಂದ್ರದಲ್ಲಿ ಅನುಭವಿ ಅಂಗನವಾಡಿ ಕಾರ್ಯಕರ್ತರನ್ನು ಒಳಗೊಂಡಿದೆ. ಹಳೆಯದಾದ ಮನೆಯ ಕೋಣೆಯನ್ನೇ ತರಗತಿಯನ್ನಾಗಿಸಿಕೊಂಡು ಪುಟಾಣಿಗಳ ಕಲಿಕಾ ಚಟುವಟಿಕೆಗಳಿಗೆ ಪೂರಕವಾದ ವಾತಾವರಣ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ.
ಆದರೂ ಮಳೆಗಾಲದ ಸಂದರ್ಭ ಗಿಡಗಂಟಿಗಳು ಆವರಿಸಿ ಅಪಾಯದ ನಡುವೆಯೇ ಕಲಿಕೆಗೆ ಅವಕಾಶ ಕಲ್ಪಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇಲ್ಲಿಯದ್ದು. ಪ್ರಸ್ತುತ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆ ಕುಸುಮಾವತಿ ಅವರು ಕಾರ್ಯನಿರ್ವಹಿಸುತ್ತಿದ್ದು, ಸಹಾಯಕಿ ಹುದ್ದೆ ಖಾಲಿ ಇರುವ ಪರಿಣಾಮ ಪುಟಾಣಿಗಳ ಕಲಿಕಾ ಕಾರ್ಯಚಟುವಟಿಕೆಯ ಜವಾಬ್ದಾರಿ ಗಳ ಜತೆಗೆ ಅಡುಗೆ ಕಾರ್ಯಗಳ ಒತ್ತಡ ವನ್ನೂ ನಿಭಾಯಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.
ವಿದ್ಯುತ್ ಸಂಪರ್ಕ ಕಲ್ಪಿಸಿದ ಗ್ರಾ.ಪಂ. ಅಂಗನವಾಡಿ ಹಳೆಯ ಕಟ್ಟಡದಲ್ಲಿ ವಿದ್ಯುತ್ ಸಂಪರ್ಕಗಳಿಲ್ಲದೆ ಇರುವ ಪರಿಣಾಮ ಇತ್ತೀಚೆಗಷ್ಟೇ ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಯು. ಶೆಟ್ಟಿ ಹಾಗೂ ಸರ್ವ ಸದಸ್ಯರು ವಿಶೇಷವಾಗಿ ಮುತುವರ್ಜಿ ವಹಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವ ಜತೆಗೆ ಪರಿಸರದಲ್ಲಿ ಬೆಳದು ನಿಂತು ಗಿಡಗಂಟಿಗಳನ್ನು ಸ್ವಚ್ಚಗೊಳಿಸುವಲ್ಲಿ ಸಹಕರಿಸಿದ್ದಾರೆ.
Related Articles
ಮಕ್ಕಳ ಸಂಖ್ಯೆ ಹೆಚ್ಚಳ
ಗ್ರಾಮೀಣ ಭಾಗದ ಪುಟಾಣಿಗಳಿಗೆ ಕಲಿಕೆಗೆ ಪೂರಕವಾದ ವಾತಾವರಣ ಕಲ್ಪಿಸುವ ನಿಟ್ಟಿನಿಂದ ಸಂಬಂಧಪಟ್ಟ ಇಲಾಖೆ ಸ.ನಂ. 251ರಲ್ಲಿ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಗೆ ಬಂದರೂ ಕೂಡ ಸಾರ್ವಜನಿಕ ಉದ್ದೇಶಕ್ಕಾಗಿ ನಿಯಮವನ್ನು ಸಡಿಲಗೊಳಿಸಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕಾಗಿದೆ. ಈಗಾಗಲೇ ವಿದ್ಯಾರ್ಥಿಗಳಿಗೆ ವ್ಯವಸ್ಥಿತವಾದ ಶೌಚಾಲಯ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಪೂರಕವಾದ ವಾತಾವರಣಗಳ ಕೊರತೆಗಳಿದೆ. ಮುಂದಿನ ದಿನಗಳಲ್ಲಿ ಸುವ್ಯವಸ್ಥಿತವಾದ ಹೊಸ ಕಟ್ಟಡ ನಿರ್ಮಾಣವಾದರೆ ಮತ್ತಷ್ಟು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲಿದ್ದು ಗ್ರಾಮೀಣ ಭಾಗದ ಅದೆಷ್ಟೋ ಬಡ ವಿದ್ಯಾರ್ಥಿಗಳ ಪಾಲಿಗೆ ಈ ಅಂಗನವಾಡಿ ಕೇಂದ್ರವು ಆಶಾಕಿರಣವಾಗಲಿದೆ.
– ಅಶ್ವಿನಿ, ಅಧ್ಯಕ್ಷರು, ಬಾಲವಿಕಾಸ ಸಮಿತಿ
ಡೀಮ್ಡ್ ಫಾರೆಸ್ಟ್ ಸಮಸ್ಯೆ
ಮಾಸ್ತಿಕಟ್ಟೆ ಅಂಗನವಾಡಿ ಕೇಂದ್ರದ ಸ್ವಂತ ಕಟ್ಟಡ ನಿರ್ಮಾಣ ಮಾಡಬೇಕು ಎನ್ನುವ ನಿಟ್ಟಿನಿಂದ ಗ್ರಾ.ಪಂ.ನಿವೇಶನ ಕಾದಿರಿಸಿದೆ. ಈ ಕುರಿತು ಕುಂದಾಪುರ ತಹಶೀಲ್ದಾರ್ ಅವರು ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾವಿಸಿದಾಗ , ಸ್ಥಳ ಪರಿಶೀಲಿಸಿ ನಿವೇಶನ ಮಂಜೂರು ಮಾಡುವ ಬಗ್ಗೆ ಭರವಸೆ ನೀಡಿದರಾದರೂ ಕೂಡ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಗೆ ಬರುತ್ತದೆ ಎನ್ನುವ ಕಾರಣಕ್ಕಾಗಿ ಸ್ವಂತ ಕಟ್ಟಡ ನಿರ್ಮಾಣ ಯೋಜನೆಗೆ ಹಿನ್ನಡೆಯಾಗಿದೆ. ಪ್ರಸ್ತುತ ಅಭಿವೃದ್ಧಿ ಹೊಂದುತ್ತಿರುವ ಈ ಗ್ರಾಮಗಳಲ್ಲಿ ಗ್ರಾಮದ ಮೂಲ ಆವಶ್ಯಕತೆಗಳಿಗೆ ಸರಕಾರ ನಿಯಮಗಳ ಸಡಿಲಿಕೆ ಮಾಡಬೇಕಾದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಗಮನಹರಸಿ ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ.
– ದಿನೇಶ್ ಹೆಗ್ಡೆ ಮೊಳಹಳ್ಳಿ, ಸದಸ್ಯರು, ಗ್ರಾ.ಪಂ. ಮೊಳಹಳ್ಳಿ
*ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ