Advertisement

ಉದ್ಘಾಟನೆ ಭಾಗ್ಯ ನಿರೀಕ್ಷೆಯಲ್ಲಿ ಅಂಗನವಾಡಿ:4 ಕೇಂದ್ರಗಳು ಬಾಡಿಗೆ ಮನೆಯಲ್ಲಿ ಕಾರ್ಯನಿರ್ವಹಣೆ

03:06 PM Dec 25, 2024 | Team Udayavani |

ಉದಯವಾಣಿ ಸಮಾಚಾರ
ದೋಟಿಹಾಳ: ಹಿರೇಮನ್ನಾಪೂರ ಗ್ರಾಮದ 2ನೇ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣಗೊಂಡು 2-3 ತಿಂಗಳುಗಳೇ ಕಳೆದಿದೆ. ಆದರೂ ಇದುವರೆಗೂ ಉದ್ಘಾಟನೆ ಭಾಗ್ಯ ಸಿಗದಾಗಿದೆ. “ದೇವರ ವರ ನೀಡಿದರೂ ಪೂಜಾರಿ ವರ ನೀಡುತ್ತಿಲ್ಲ’ ಎಂಬಂತಾಗಿದೆ ಈ ಅಂಗನವಾಡಿ ಕಟ್ಟಡ ಸ್ಥಿತಿ. ಹಿರೇಮನ್ನಾಪೂರ ಗ್ರಾಮದ 7 ಅಂಗನವಾಡಿ ಕೇಂದ್ರಗಳಲ್ಲಿ 4 ಕೇಂದ್ರಗಳು ಬಾಡಿಗೆ ಮನೆಯಲ್ಲಿಯೇ ಕಾರ್ಯ ನಿರ್ವಹಿಸುತ್ತಿವೆ.

Advertisement

ಸುಮಾರು 15-16 ವರ್ಷಗಳಾಯ್ತು ಇಕ್ಕಟ್ಟಿನ ಪ್ರದೇಶ ಹಾಗೂ ಬಾಡಿಗೆ ಮನೆಗಳಲ್ಲಿಯೇ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಇವುಗಳ ಬಗ್ಗೆ “ಉದಯವಾಣಿ’ಯಲ್ಲಿ ಸುದ್ದಿ ಪ್ರಕಟಗೊಂಡ ಮೇಲೆಯೇ ಗ್ರಾಮ ಪಂಚಾಯಿತಿಯವರು ನಾಲ್ಕೂ ಅಂಗನವಾಡಿ ಕೇಂದ್ರಗಳಿಗೆ ನಿವೇಶನ ನೀಡಿದ್ದಾರೆ. ಗ್ರಾಮದ 2ನೇ ಅಂಗನವಾಡಿ ಕೇಂದ್ರವನ್ನು 2022-23ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆ(ಮೆಗಾ ಮೈಕ್ರೋ) ಯೋಜನೆಯಲ್ಲಿ ಸುಮಾರು 15ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಕಾಮಗಾರಿ ಮುಗಿದು ಎರಡ್ಮೂರು ತಿಂಗಳ ಕಳೆದರೂ ಈ ಕಟ್ಟಡದ ಉದ್ಘಾಟನೆಯೇ ಆಗಿಲ್ಲ. ಸದ್ಯ 2ನೇ ಅಂಗನವಾಡಿ ಕೇಂದ್ರ ಒಂದು ಸಣ್ಣ ಇಕ್ಕಟ್ಟಿನ ಬಾಡಿಗೆ ಮನೆಯಲ್ಲಿ ನಡೆಯುತ್ತಿದೆ. ಕೇಂದ್ರಕ್ಕೆ ನಿತ್ಯವೂ 30ಕ್ಕೂ ಹೆಚ್ಚು ಮಕ್ಕಳು ಆಗಮಿಸುತ್ತಾರೆ. ಈ ಸಣ್ಣ ಮನೆಯಲ್ಲಿ ಮಕ್ಕಳು ಕೂಡ್ರಲು ಸಮಸ್ಯೆಯಾಗುತ್ತಿದೆ. ಕೇಂದ್ರಕ್ಕೆ ಆಗಮಿಸುವ ಗರ್ಭಿಣಿ, ಬಾಣಂತಿಯರಿಗೆ
ತೊಂದರೆಯಾಗುತ್ತಿದೆ. ಕೂಡಲೇ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಕ್ಕಳಿಗೆ ಅನುಕೂಲ ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಳೆದ 10-12 ವರ್ಷಗಳಿಂದ ಬಾಡಿಗೆ ಮನೆಯಲ್ಲಿಯೇ ಅಂಗನವಾಡಿ ಕೇಂದ್ರ ನಡೆಸುತ್ತಿದೇವೆ. ಬಾಡಿಗೆ ಮನೆ ಸಣ್ಣದಾಗಿದ್ದು
ಕೇಂದ್ರಕ್ಕೆ ಆಗಮಿಸುವ ಮಕ್ಕಳಿಗೆ, ಗರ್ಭಿಣಿ, ಬಾಣತಿಯರಿಗೆ ತೊಂದರೆಯಾಗುತ್ತಿದೆ. ಕೂಡಲೇ ನೂತನ ಕಟ್ಟಡ ಉದ್ಘಾಟಿಸಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶಶಿಕಲಾ.

ತಾಲೂಕಿನಲ್ಲಿ ಸುಮಾರು 6-7 ಅಂಗನವಾಡಿ ಕಟ್ಟಡ ಉದ್ಘಾಟಿಸಬೇಕಿದೆ. ಶಾಸಕರು ಬೆಳಗಾವಿ ಅಧಿವೇಶನದಲ್ಲಿ ಇದ್ದುದರಿಂದ ಉದ್ಘಾಟನೆ ಕಾರ್ಯಕ್ರಮಗಳು ತಡವಾಗಿವೆ. ಸದ್ಯ ಅಧಿವೇಶನ ಮುಗಿದಿದೆ. ಮುಂದಿನ ವಾರ ಎಲ್ಲಾ ಕಟ್ಟಡಗಳ ಉದ್ಘಾಟನೆ
ದಿನಾಂಕ ನಿಗದಿ ಮಾಡಲಾಗುತ್ತದೆ.
*ಯಲ್ಲಮ್ಮ ಹಂಡಿ, ಸಿಡಿಪಿಒ ಕುಷ್ಟಗಿ.

Advertisement

ಅಧಿ ವೇಶನ ನಡೆದಿದ್ದರಿಂದ ಉದ್ಘಾಟಿಸಲು ತಡವಾಗಿದೆ. ಸಿಡಿಪಿಒ ಅವರ ಜತೆ ಮಾತನಾಡಿ ತಾಲೂಕಿನ ಎಲ್ಲ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಒಂದು ವಾರದೊಳಗೆ ಉದ್ಘಾಟಿಸುತ್ತೇನೆ.
*ದೊಡ್ಡನಗೌಡ ಪಾಟೀಲ್‌, ಮುಖ್ಯ
ಸಚೇತಕ ಹಾಗೂ ಶಾಸಕರು ಕುಷ್ಟಗಿ.

*ಮಲ್ಲಿಕಾರ್ಜುನ ಮೆದಿಕೇರಿ

Advertisement

Udayavani is now on Telegram. Click here to join our channel and stay updated with the latest news.

Next