Advertisement

ಅಂಗನವಾಡಿ ನೌಕರರ ವಿವಿಧ ಬೇಡಿಕೆ ಈಡೇರಿಸಿ

03:40 PM Aug 09, 2022 | Team Udayavani |

ಚಿಕ್ಕಬಳ್ಳಾಪುರ: ಐಸಿಡಿಎಸ್‌ ಯೋಜನೆಗೆ ಅನುದಾನ ಕಡಿತ ವಿರೋಧಿಸಿ, ಮಕ್ಕಳು, ಮಹಿಳೆಯರ ಆಹಾರ, ಆರೋಗ್ಯ, ಶಿಕ್ಷಣದ ರಕ್ಷಣೆಗೆ ಒತ್ತಾಯಿಸಿ, ಅಂಗನವಾಡಿ ನೌಕರರನ್ನು ಕಾಯಂ ಮಾಡಲು ಮತ್ತು ಕನಿಷ್ಟ ಕೂಲಿ ನೀಡಲು ಆಗ್ರಹಿಸಿ ನಗರದ ಚಿತ್ರಾವತಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ 5ನೇ ಜಿಲ್ಲಾ ಸಮ್ಮೇಳನವನ್ನು ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಉದ್ಘಾಟಿಸಿದರು.

Advertisement

ನಂತರ ಮಾತನಾಡಿ, ಆರೋಗ್ಯಕರ ಸಮಾಜಕ್ಕಾಗಿ, ಮಕ್ಕಳ, ಮಹಿಳೆಯರ ಬಲವರ್ಧನೆ ಮತ್ತು ಶಾಲಾ ಪೂರ್ವ ಶಿಕ್ಷಣಕ್ಕಾಗಿ ಅಂಗನವಾಡಿ ಗಳನ್ನು ತೆರೆದು ಕೆಲಸ ಪ್ರಾರಂಭಿಸಲಾಯಿತು. ಅಂಗನವಾಡಿ ಕಾರ್ಯಕರ್ತ ಮತ್ತು ಸಹಾಯಕಿಯರು ಕಡಿಮೆ ಗೌರವಧನದಲ್ಲಿ ದುಡಿದು ಅತ್ಯುತ್ತಮ ಸರ್ಕಾರಿ ಯೋಜನೆಗಳಲ್ಲಿ ಐಸಿಡಿಎಸ್‌ ಒಂದು ಎಂಬ ಖ್ಯಾತಿಯನ್ನು ತಂದರು. ಆದರೆ, ಮಹತ್ವದ ಯೋಜನೆಯು ಸರ್ಕಾರದ ನಿರ್ಲಕ್ಷ್ಯ ಹಾಗೂ ಬಜೆಟ್‌ ಕಡಿತದಿಂದ ಬಳಲುತ್ತಿದೆ. ಮಾತ್ರವಲ್ಲ ಖಾಸಗೀಕರಣದ ಆಪಾಯ ಎದುರಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

47 ವರ್ಷಗಳ ಹಿಂದೆ ಜನಜೀವನ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಇರುವಾಗ, ಜಾಗತೀಕವಾಗಿ ಮತ್ತು ದೇಶದೊಳಗೆ ನಡೆದ ಹಲವು ಹೋರಾಟಗಳ ಭಾಗವಾಗಿ ಸರ್ಕಾರದ ಅಧೀನದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಜಾರಿ ಬಂದಿತು. ಅಪೌಷ್ಟಿಕತೆ, ಅನಕ್ಷರತೆ, ಅನಾರೋಗ್ಯ, ಬಾಲ್ಯವಿವಾಹ ಮತ್ತು ಕಂದಾಚಾರ ವಿರುದ್ಧ ಹೋರಾಟ ನಡೆಸಿದ್ದರಿಂದ ಅಂಗನವಾಡಿ ಕೇಂದ್ರಗಳನ್ನು ತೆರೆದಿದ್ದರು. 6 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುತ್ತಿರುವ ಉಚಿತ ಪೌಷ್ಟಿಕ ಆಹಾರ ಮತ್ತು ಶಾಲಾ ಪೂರ್ವ ಶಿಕ್ಷಣ ಹಂತ ಹಂತವಾಗಿ ಇಲ್ಲವಾಗಿಸುವ ನೀತಿಗಳನ್ನು ಸರ್ಕಾರ ಜಾರಿಗೆ ತರುತ್ತಿದೆ ಎಂದು ದೂರಿದರು. ಅಂಗನವಾಡಿ ಕೇಂದ್ರಗಳಲ್ಲಿ ಎಲ್‌.ಕೆ.ಜಿ ಮತ್ತು ಯು.ಕೆ.ಜಿಯನ್ನು ಆರಂಭಿಸಬೇಕು. ಸುಪ್ರೀಂ ಕೋರ್ಟ್‌ ಆದೇಶದನ್ವಯ ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಟ್ಯೂಟಿ ನೀಡಬೇಕು ಹಾಗೂ ಇನ್ನಿತರೆ ವಿಷಯಗಳನ್ನು ಮುಂದಿಟ್ಟುಕೊಂಡು ಎರಡು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ಜಿಲ್ಲೆಯಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು, ಸಿಐಟಿಯು ಜಿಲ್ಲಾ ಅಧ್ಯಕ್ಷೆ ಜಿ.ಎಂ. ಲಕ್ಷ್ಮೀದೇವಮ್ಮ ಸಮ್ಮೇಳನದ ಅಧ್ಯಕ್ಷತೆವಹಿಸಿದ್ದರು.

ಜಿಲ್ಲಾ ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ರತ್ನಮ್ಮ, ಖಜಾಂಚಿ ವೆಂಕಟಲಕ್ಷ್ಮೀ, ಶಿಡ್ಲಘಟ್ಟ ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಅಶ್ವತಮ್ಮ, ಕಾರ್ಯದರ್ಶಿ ಗುಲ್ಜಾರ್‌, ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷೆ ಸುಜಾತ, ಕಾರ್ಯದರ್ಶಿ ಮುನಿರತ್ನ, ಗುಡಿಬಂಡೆ ತಾಲೂಕಿನ ಅಧ್ಯಕ್ಷೆ ಮಂಜುಳಾ, ಕಾರ್ಯದರ್ಶಿ ಭಾಗ್ಯಮ್ಮ, ಬಾಗೇಪಲ್ಲಿ ತಾಲೂಕಿನ ಅಧ್ಯಕ್ಷ ರತ್ನಮ್ಮ, ಕಾರ್ಯದರ್ಶಿ ಗೀತಾ, ಗೌರಿಬಿದನೂರು ತಾಲೂಕಿನ ಕಾರ್ಯದರ್ಶಿ ವೆಂಕಟಲಕ್ಷ್ಮೀ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next