Advertisement

ಪಿಂಚಣಿಗಾಗಿ ಅಂಗನವಾಡಿ ಸಿಬಂದಿ ಕಾನೂನು ಹೋರಾಟ

12:20 AM Nov 26, 2021 | Team Udayavani |

ಮಂಗಳೂರು: ಪಿಂಚಣಿಗಾಗಿ ಸುದೀರ್ಘ‌ ಹೋರಾಟ ಮಾಡಿ ದಣಿದ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರು ಇದೀಗ ಕಾನೂನು ಹೋರಾಟದ ಮೊರೆ ಹೋಗಿದ್ದಾರೆ.

Advertisement

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳ ಜತೆಗೆ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ರಾಜ್ಯ ಸಮಿತಿ ಸಭೆ ನಡೆಸಿ ಕಾನೂನು ಹೋರಾಟಕ್ಕೆ ತಯಾರಿ ಆರಂಭಿಸಿದೆ.

1975ರಲ್ಲಿ ಆರಂಭಗೊಂಡ ಅಂಗನವಾಡಿಗಳ ಸಿಬಂದಿಯ ಕರ್ತವ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆಯೇ ವಿನಃ ಸರಕಾರ ಮಾತ್ರ ಕನಿಷ್ಠ ವೇತನವನ್ನಾಗಲೀ, ಜೀವನ ನಿರ್ವಹಣೆಗೆ ಬೇಕಾದಂತಹ ಗೌರವಧನವನ್ನಾಗಲೀ ನೀಡಿಲ್ಲ. 4 ದಶಕಗಳಿಂದ ಸಿಬಂದಿ ಹೋರಾಡುತ್ತಲೇ ಇದ್ದಾರೆ. ಸರಕಾರ ಮಾತ್ರ ಕಣ್ಣು-ಕಿವಿ ಮುಚ್ಚಿ ಕುಳಿತಿದೆ. ಈ ಮಧ್ಯೆ ಕೇಂದ್ರ ಸರಕಾರವು ಅಸಂಘಟಿತ ವಲಯದಲ್ಲಿ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರನ್ನು ಸೇರಿಸುವ ಬಗ್ಗೆ ಪ್ರಸ್ತಾವ ಮಾಡಿತಾದರೂ ಇನ್ನೂ ಯಾವುದೇ ಸಿದ್ಧತೆ ಕಾಣುತ್ತಿಲ್ಲ ಎಂಬುದು ನೌಕರರ ಅಳಲು.

ಕೆಲಸ ಮಾತ್ರ ಸಮಾನ!:

ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರು ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಕರ್ತವ್ಯಗಳನ್ನು ನಿರ್ವಹಿಸುತ್ತಾ ಸರಕಾರದ ಎಲ್ಲ ಯೋಜನೆಗಳನ್ನು ಮನೆಬಾಗಿಲಿಗೆ ಮುಟ್ಟಿಸುವ ಗುರುತರ ಕೆಲಸಗಳನ್ನು ಸರಕಾರಿ ನೌಕರರಷ್ಟೇ ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದರೂ ಸಮಾನ ವೇತನ ಸಿಗುತ್ತಿಲ್ಲ.

Advertisement

ಶಿಫಾರಸು ಜಾರಿಯಾಗಿಲ್ಲ:

39 ವರ್ಷಗಳಿಂದ ಮಾಡಿದ ಕೆಲಸಗಳ ಬಗ್ಗೆ ಹಾಗೂ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ಕೆಲಸದ ಒತ್ತಡದ ಬಗ್ಗೆ 2010-11ನೇ ಸಾಲಿನಲ್ಲಿ 30 ಮಹಿಳಾ ಸಂಸದರು ಮಹಿಳಾ ಸಬಲೀಕರಣ ಹಾಗೂ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಅಧ್ಯಯನ ನಡೆಸಿ ಲೋಕಸಭೆ, ರಾಜ್ಯ ಸಭೆಯಲ್ಲಿ ವರದಿ ಮಂಡಿಸಿದ್ದಾರೆ.

ವರದಿಯಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು ಜಾಗತೀಕರಣಗೊಳಿಸಬೇಕು ಹಾಗೂ ಅಂಗನವಾಡಿ ಸಿಬಂದಿಯ ಕೆಲಸದ ಒತ್ತಡದ ಬಗ್ಗೆ ಹಾಗೂ ಸಂಭಾವನೆಗಳ

ಕುರಿತು ಕ್ರಮಬದ್ಧವಾದ ನೀತಿಯನ್ನು ಜಾರಿ ಮಾಡಿ ಕಾಲಕಾಲಕ್ಕೆ ಇತರ ಸವಲತ್ತುಗಳು ಹಾಗೂ ಸಂಭಾವನೆಯಲ್ಲಿ ವಾರ್ಷಿಕ ಹೆಚ್ಚಳ ಹಾಗೂ ಇತರ ಭತ್ತೆಗಳನ್ನು ನೀಡುವಂತೆ ಶಿಫಾರಸು ಇದೆಯಾದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಯಾವುದೇ ಕ್ರಮ ಕೈಗೊಂಡಿಲ್ಲ.

ನಿವೃತ್ತಿ ವೇಳೆ ಸಿಗುವುದು   30, 50 ಸಾವಿರ ರೂ.! :

ನೌಕರರಿಗೆ 2010ರ ವರೆಗೆ ನಿವೃತ್ತಿ ವಯಸ್ಸಿನ ಮಿತಿ ಇರದಿದ್ದ ಕಾರಣ ವೃದ್ಧಾಪ್ಯದ ವರೆಗೂ ಸೇವೆ ಸಲ್ಲಿಸುತ್ತಿದ್ದರು. 2010-11ರಲ್ಲಿ ಸರಕಾರವು ನಿವೃತ್ತಿ ವಯಸ್ಸನ್ನು 60 ವರ್ಷಕ್ಕೆ ನಿಗದಿ ಮಾಡಿತು. ಆಗ ಕಾರ್ಯಕರ್ತೆಯರಿಗೆ 50 ಸಾವಿರ ರೂ., ಸಹಾಯಕಿಯರಿಗೆ 30 ಸಾವಿರ ರೂ. ಇಡುಗಂಟನ್ನು ನೀಡಲಾಗುತ್ತಿದೆ. ಆದರೆ ಪಿಂಚಣಿಯ ವ್ಯವಸ್ಥೆಯಿಲ್ಲದೆ ಅತ್ಯಲ್ಪ ಇಡುಗಂಟಿನೊಂದಿಗೆ ನಿವೃತ್ತರಾಗುವ ಅವರು ಮುಪ್ಪಿನಲ್ಲಿ ಆರ್ಥಿಕ ವ್ಯವಸ್ಥೆ ಇಲ್ಲದೆ ನರಳುತ್ತಿದ್ದಾರೆ. ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು ಎಂಬುದು ಅವರ ಕೂಗು.

ಅಂಗನವಾಡಿ ಸಿಬಂದಿಗೆ ನಿವೃತ್ತಿ ಸಮಯದಲ್ಲಿ ಪಿಂಚಣಿ ದೊರೆಯಬೇಕು ಹಾಗೂ ಇಲಾಖೇತರ ಕೆಲಸಗಳನ್ನು ನಮಗೆ ವಹಿಸಬಾರದು ಎಂದು ಸರಕಾರವನ್ನು ಕೇಳುತ್ತಲೇ ಬಂದಿದ್ದೇವೆ. ಈ ಬಗ್ಗೆ ಈಗಾಗಲೇ ಮಾಡಿದ ಹೋರಾಟಗಳು ಫಲಕಾರಿಯಾಗದೇ ಇರುವುದರಿಂದ ಇದೀಗ ಕಾನೂನು ಹೋರಾಟಕ್ಕೆ ಇಳಿಯಬೇಕಾಯಿತು.– ಜಯಲಕ್ಷ್ಮೀ ಬಿ.ಆರ್‌.,ಅಂಗನವಾಡಿ ಕಾರ್ಯಕರ್ತೆಯರ / ಸಹಾಯಕಿಯರ ಸಂಘದ ರಾಜ್ಯಾಧ್ಯಕ್ಷೆ

 

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next