ಗಂಗಾವತಿ:ಇತಿಹಾಸ ಪ್ರಸಿದ್ಧ ಆನೆಗೊಂದಿಯ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಕಾಣಿಕೆ ಪೆಟ್ಟಿಗೆಯನ್ನು ಕಳ್ಳರು ಕಳ್ಳತನ ಮಾಡಿದ್ದು ಕಳ್ಳತನದ ಬಗ್ಗೆ ದೇವಾಲಯದ ಉಸ್ತುವಾರಿಯಾಗಿರುವ ಕಂದಾಯ ಇಲಾಖೆ ಅಧಿಕಾರಿಗಳು ದೂರು ನೀಡಲು ಹಿಂದೇಟು ಹಾಕಿದ್ದಾರೆ.
ಶ್ರೀರಂಗನಾಥಸ್ವಾಮಿ ದೇವಾಲಯ ಮತ್ತು ಪಂಪಾ ಸರೋವರದ ವಿಜಯಲಕ್ಷ್ಮಿ ದೇವಾಲಯ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿದ್ದು ದೇವಾಲಯದ ಉಸ್ತುವಾರಿಯನ್ನು ಗ್ರಾಮಲೆಕ್ಕಾಧಿಕಾರಿ ಮತ್ತು ಕಂದಾಯ ನಿರೀಕ್ಷರು ನೋಡಿಕೊಳ್ಳುತ್ತಾರೆ. ಶನಿವಾರ ರಾತ್ರಿ ದೇವಸ್ಥಾನದ ಹುಂಡಿ ಕಳ್ಳತನವಾಗಿತ್ತು ಘಟನೆ ಕುರಿತು ಗ್ರಾಮೀಣ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳವನ್ನು ಕರೆಸಿ ಕಳ್ಳರ ಪತ್ತೆಗಾಗಿ ಪೊಲೀಸರು ಪ್ರಯತ್ನ ಮಾಡಿದ್ದಾರೆ.
ಈ ಮಧ್ಯೆ ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುವ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರು ರವಿವಾರವಾಗಿದ್ದರಿಂದ ತಾವು ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡುವುದಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆಂದು ಹೇಳಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಪಿಎಸ್ ಐ ಅವರನ್ನು ಸಂಪರ್ಕಿಸಿದಾಗ ಶ್ರೀರಂಗನಾಥಸ್ವಾಮಿ ದೇವಾಲಯದ ಕಾಣಿಕೆ ಪೆಟ್ಟಿಗೆ ಕಳ್ಳತನವಾಗಿದ್ದು ಪೊಲೀಸ್ ಇಲಾಖೆಯಿಂದ ಕಳ್ಳರ ಪತ್ತೆಗಾಗಿ ಕಾರ್ಯ ಮಾಡಲಾಗುತ್ತಿದೆ ಜಿಲ್ಲಾ ಕೇಂದ್ರದಿಂದ ಶ್ವಾನದಳವನ್ನು ಕರೆಸಿ ಕಳ್ಳತನ ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತವಾಗಿದ್ದು ಕಳ್ಳತನವಾಗಿರುವ ಬಗ್ಗೆ ಸಂಬಂಧಪಟ್ಟ ದೇವಾಲಯದ ಅಧಿಕಾರಿಗಳು ಕೇಸ್ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ಆನೆಗೊಂದಿ ಗ್ರಾಮದಲ್ಲಿ ದನದ ಮಾಂಸವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಖಚಿತ ಮಾಹಿತಿ ಮೇರೆಗೆ ಕಂದಾಯ ಇಲಾಖೆ, ಪಶುಸಂಗೋಪನಾ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಬೇಕೆಂಬ ನಿಯಮವಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಸಾಥ್ ನೀಡುತ್ತಿಲ್ಲ.
ಆದರೂ ಮೇಲಾಧಿಕಾರಿಗಳ ಸೂಚನೆಯಂತೆ ದರದ ಅಕ್ರಮ ಮಾರಾಟ ಮಾಡುವ ಅಂಗಡಿಗಳ ಮೇಲೆ ಪೊಲೀಸ್ ಇಲಾಖೆ ದಾಳಿ ನಡೆಸಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಗ್ರಾಮೀಣ ಪಿಎಸೈ ಶಾರದಮ್ಮ ಉದಯವಾಣಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಗೋವಾದಲ್ಲಿ ಕನ್ನಡಿಗರ 14 ನೇ ಸಾಂಸ್ಕೃತಿಕ ಸಮ್ಮೇಳನ ಉದ್ಘಾಟನೆ