Advertisement

Elephant: ಇಂದಿನಿಂದಲೇ ಆನೆ ಟಾಸ್ಕ್‌ಫೋರ್ಸ್‌ ಕಾರ್ಯಾರಂಭ: ಖಂಡ್ರೆ

09:42 PM Jun 04, 2023 | Team Udayavani |

ರಾಮನಗರ: ಕಾಡಾನೆ ಹಾವಳಿ ನಿಯಂತ್ರಿಸಲು ಆನೆ ಟಾಸ್ಕ್ಫೋರ್ಸ್‌ ರಚಿಸಲಾಗಿದ್ದು, ಸೋಮವಾರದಿಂದಲೇ ಕಾರ್ಯಾರಂಭ ಮಾಡಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

Advertisement

ಇಲ್ಲಿನ ಜಿಲ್ಲಾ ಅರಣ್ಯಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಡಾನೆ ಹಾವಳಿ ಜಾಸ್ತಿಯಾಗಿದ್ದು, ಅವುಗಳ ದಾಳಿಯಿಂದ ಹಲವರು ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ಟಾಸ್ಕ್ಪೋರ್ಸ್‌ ರಚನೆಗೆ ತೀರ್ಮಾನಿಸಲಾಗಿದೆ. ಸೋಮವಾರದಿಂದಲೇ ಟಾಸ್ಕ್ಪೋರ್ಸ್‌ ಕಾರ್ಯಾರಂಭ ಮಾಡಲಿದೆ ಎಂದರು.
ಮೊದಲ ಹಂತವಾಗಿ ರಾಮನಗರ ಮತ್ತು ಬನ್ನೇರುಘಟ್ಟ ವ್ಯಾಪ್ತಿಯಲ್ಲಿ 5 ತಂಡಗಳನ್ನು ರಚಿಸಲಾಗುವುದು. ಆನೆ ಕಾರ್ಯಾಚರಣೆ ಬಗ್ಗೆ ಮಾಹಿತಿ ಇರುವ ಸ್ಥಳೀಯರನ್ನು ಈ ಪಡೆಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುವುದು. ಆನೆ ಮತ್ತು ಮಾನವ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಈ ಕಾರ್ಯಪಡೆ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದರು.

ಆನೆ ಬ್ಯಾರಿಕೇಡ್‌ಗೆ 500 ಕೋಟಿ ರೂ. ಅಗತ್ಯ
ವನ್ಯಜೀವಿ ವಲಯದಿಂದ ಕಾಡಾನೆಗಳು ಹೊರಬರುವುದನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯದಲ್ಲಿ 310 ಕಿ.ಮೀ. ಆನೆ ಬ್ಯಾರಿಕೇಡ್‌ ಅನ್ನು ರೈಲ್ವೆ ಕಂಬಿಗಳನ್ನು ಬಳಸಿ ನಿರ್ಮಿಸಲಾಗಿದೆ. ಕಾಡಾನೆ ಹಾವಳಿ ನಿಯಂತ್ರಿಸಲು 641 ಕಿ.ಮೀ. ಉದ್ದದ ಬ್ಯಾರಿಕೇಡ್‌ ನಿರ್ಮಿಸಬೇಕೆಂಬ ಪ್ರಸ್ತಾವನೆಯಿದೆ. ಇದಕ್ಕೆ ಪ್ರತಿ ಕಿ.ಮೀ.ಗೆ 1.50 ಕೋಟಿ ರೂ. ಖರ್ಚು ಬರಲಿದೆ. ಬಾಕಿ 331 ಕಿ.ಮೀ. ಬ್ಯಾರಿಕೇಡ್‌ ನಿರ್ಮಾಣಕ್ಕೆ ಅಂದಾಜು 500 ಕೋಟಿ ರೂ. ಬೇಕಿದೆ ಎಂದು ತಿಳಿಸಿದರು.

ಅರಣ್ಯ ಭೂಮಿ ಗುರುತಿಗೆ ಜಂಟಿ ಸರ್ವೇ
ಅರಣ್ಯ ಕಾಯ್ದೆಯನ್ನು ಅರಣ್ಯೀಕರಣಕ್ಕೆ ಅಡ್ಡಿಯಾಗದಂತೆ ಅನುಷ್ಠಾನಕ್ಕೆ ತರಲಾಗುವುದು. ಅರಣ್ಯದಂಚಿನಲ್ಲಿ ದಶಕಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವವರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂಬ ದೂರಿದೆ. ಇದನ್ನು ಸರಿಪಡಿಸಲು ಈಗಾಗಲೇ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next