ನ್ಯೂಯಾರ್ಕ್: ಬ್ರಿಟನ್ನಿನ ಆ್ಯಂಡಿ ಮರ್ರೆ ಅವರ ಯುಎಸ್ ಓಪನ್ ಆಟ ದ್ವಿತೀಯ ಸುತ್ತಿಗೆ ಕೊನೆಗೊಂಡಿದೆ. ಕೆನಡಾದ 15ನೇ ಶ್ರೇಯಾಂಕದ ಫೆಲಿಕ್ಸ್ ಯುಗರ್ ಅಲಿಯಾಸಿಮ್ 6-2, 6-3, 6-4 ನೇರ ಸೆಟ್‌ಗಳಿಂದ ಮರ್ರೆ ಆಟಕ್ಕೆ ತೆರೆ ಎಳೆದರು.
ಮೊದಲ ಸುತ್ತಿನಲ್ಲಿ 5 ಸೆಟ್‌ಗಳ ಮ್ಯಾರಥಾನ್ ಹೋರಾಟದ ಮೂಲಕ ಜಪಾನಿ ಆಟಗಾರನನ್ನು ಮಣಿಸಿದ್ದ ಮರ್ರೆಗೆ ಅಲಿಯಾಸಿಮ್ ಸವಾಲನ್ನು ಮೆಟ್ಟಿ ನಿಲ್ಲಲಾಗಲಿಲ್ಲ. 20 ತಿಂಗಳ “ಶಸ್ತ್ರಚಿಕಿತ್ಸೆ ವಿರಾಮ’ ಬಳಿಕ ಮರ್ರೆ ಪಾಲ್ಗೊಂಡ ಮೊದಲ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿ ಇದಾಗಿತ್ತು.
ಕಳೆದ ತಿಂಗಳಷ್ಟೇ 20 ವರ್ಷಕ್ಕೆ ಕಾಲಿಟ್ಟ ಅಲಿಯಾಸಿಮ್ 2011ರಲ್ಲಿ ಇದೇ “ಫ್ಲಶಿಂಗ್ ಮೀಡೋಸ್’ನಲ್ಲಿ ಆ್ಯಂಡಿ ಮರ್ರೆ ಪಾಲ್ಗೊಂಡ ಪಂದ್ಯವೊಂದನ್ನು ವೀಕ್ಷಿಸಿದ ನೆನಪು ಮಾಡಿಕೊಂಡರು. “ಲೈಫ್ ಈಸ್ ಫನ್ನಿ ಆ್ಯಂಡ್ ಕ್ರೇಝಿ. 9 ವರ್ಷಗಳ ಬಳಿಕ ನಾನಿಲ್ಲಿ ಮರ್ರೆ ಎದುರು ಆಡಲಿಳಿದದ್ದು ಸ್ಮರಣೀಯ ಅನುಭವ’ ಎಂಬುದಾಗಿ ಅಲಿಯಾಸಿಮ್ ಹೇಳಿದರು.
ಅಲಿಯಾಸಿಮ್ ಸಹಿತ ಕೆನಡಾದ ಮೂವರು ಟೆನಿಸಿಗರು 3ನೇ ಸುತ್ತಿಗೆ ತೇರ್ಗಡೆಯಾಗಿದ್ದಾರೆ. ಉಳಿದಿಬ್ಬರೆಂದರೆ ಡೆನ್ನಿಸ್ ಶಪೊವಲೋವ್ ಮತ್ತು ವಾಸೆಕ್ ಪಾಸ್ಪಿಸಿಲ್. ಇವರಲ್ಲಿ ಶಪೊವಲೋವ್ ಅಮೆರಿಕದ ಟೇಲರ್ ಫ್ರಿಟ್ಜ್ ವಿರುದ್ಧ ಸೆಣಸುವರು. ಶ್ರೇಯಾಂಕ ರಹಿತ ಆಟಗಾರ ಪಾಸ್ಪಿಸಿಲ್ ತಮ್ಮದೇ ದೇಶದ ಮಿಲೋಸ್ ರಾನಿಕ್ ಅವರನ್ನು 6-7 (1-7), 6-3, 7-6 (7-4), 6-3 ಅಂತರದಿಂದ ಮಣಿಸಿ ಅಚ್ಚರಿಯ ಫಲಿತಾಂಶವನ್ನು ದಾಖಲಿಸಿದರು. ಪಾಸ್ಪಿಸಿಲ್ ಅವರಿನ್ನು ನಂ.8 ಆಟಗಾರ, ಸ್ಪೇನಿನ ರಾಬರ್ಟೊ ಬಟಿಸ್ಟ ಅಗುಟ್ ವಿರುದ್ಧ ಆಡಲಿದ್ದಾರೆ.