ವಾಡಿ: ”ಎದುರಾಳಿಗಳ ಟೀಕೆಗಳನ್ನು ಜೀರ್ಣಿಸಿಕೊಳ್ಳದ ಹೇಡಿ ರಾಜಕಾರಣಿ ಚಿತ್ತಾಪುರದಲ್ಲಿದ್ದಾರೆ” ಎಂದು ಶ್ರೀ ರಾಮ ಸೇನೆಯ ರಾಜ್ಯಾಧ್ಯಕ್ಷ ಶ್ರೀ ಆಂದೋಲಾ ಸ್ವಾಮೀಜಿ ಪರೋಕ್ಷವಾಗಿ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.
ರವಿವಾರ ಚಿತ್ತಾಪುರ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಮಾಜಿ ಶಾಸಕ, ಬಿಜೆಪಿಯ ಹಿರಿಯ ಮುಖಂಡ ದಿ.ವಾಲ್ಮೀಕಿ ನಾಯಕ ಅವರ ಎರಡನೇ ಪುಣ್ಯಸ್ಮರಣೆಯ ಬಹಿರಂಗ ಸಭೆಯ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಚಿತ್ತಾಪುರ ತಾಲೂಕಿನಲ್ಲಿ ಹಿಂದೂ ಯುವಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಕೊಲೆ ಪ್ರಕರಣಗಳನ್ನು ಪ್ರಶ್ನಿಸಿ ಹೋರಾಟ ಮಾಡಲು ಮುಂದಾದ ನನ್ನ ಮಾತುಗಳಿಗೆ ನ್ಯಾಯಾಲಯದಿಂದ ನಿರ್ಬಂಧ ಹೇರಿದ್ದಾರೆ. ನನ್ನ ವಾಕ್ ಸ್ವಾತಂತ್ರ್ಯವನ್ನು ಚಿತ್ತಾಪುರದ ರಾಜಕಾರಣಿ ಕಿತ್ತುಕೊಂಡಿದ್ದಾರೆ. ಮಾ.27 ರಂದು ನನ್ನ ತಡೆಯಾಜ್ಞೆ ಕೊನೆಯಾಗುತ್ತದೆ. ಪುನಃ ಚಿತ್ತಾಪುರಕ್ಕೆ ಬಂದು ಘರ್ಜಿಸುತ್ತೇನೆ. ಐವತ್ತು ಸಾವಿರ ಕೋಟಿ ಒಡೆಯನನ್ನು ಸೋಲಿಸಿ ಬಿಜೆಪಿಯ ವಿಜಯ ಪತಾಕೆ ಹಾರಿಸೋಣ ಎಂದರು.
ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಸುನೀಲ್ ವಲ್ಯಾಪುರೆ, ಬಿ.ಜಿ.ಪಾಟೀಲ, ಅಮರನಾಥ ಪಾಟೀಲ, ಮಾಜಿ ಶಾಸಕ ದೊಡ್ಡಪ್ಪ ಗೌಡ ಪಾಟೀಲ ನರಿಬೋಳ, ವಿಟ್ಠಲ ವಾಲ್ಮೀಕಿ ನಾಯಕ ಸೇರಿದಂತೆ ತಾಲೂಕಿನ ವಿವಿಧ ಮಾಠಾಧೀಶರು ಹಾಗೂ ಸಾವಿರಾರು ಜನ ದಿ.ವಾಲ್ಮೀಕಿ ನಾಯಕ ಅಭಿಮಾನಿಗಳು ಪಾಲ್ಗೊಂಡಿದ್ದರು.