ಮುಳಬಾಗಿಲು: ರಾಜ್ಯದ ಮಂಗಳೂರಿನಲ್ಲಿ ಮೀನುಗಾರಿಕೆ ಯಲ್ಲಿ ತೊಡಗಿದ್ದ ಆಂಧ್ರದ ವಿವಿಧ ಜಿಲ್ಲೆಗಳ 1346 ಕಾರ್ಮಿಕರಿಗೆ ಪ್ರವೇಶ ನಿರಾಕರಿಸಿರುವ ಘಟನೆ ತಾಲೂಕಿನ ನಂಗಲಿ ಗಡಿಯಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅಣತಿಯಂತೆ ಶುಕ್ರವಾರ 110 ಮಿನಿ ಟೆಂಪೋಗಳಲ್ಲಿ ಆಂಧ್ರದ ಗುಂಟೂರು, ಶ್ರೀಶೈಲಂ, ವಿಜಯವಾಡ, ವಿಶಾಖಪಟ್ಟಣ ಸೇರಿ ವಿವಿಧ ಜಿಲ್ಲೆಗಳಿಗೆ 1 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಹೊರಟಿದ್ದರು. ಆದರೆ, ತಾಲೂಕಿನ ರಾ.ಹೆ.75ರ ಗಡಿಯಲ್ಲಿ ಆಂಧ್ರದ ಅಧಿಕಾರಿಗಳು ಪ್ರವೇಶ ನಿರಾಕರಿಸಿದರು. ಈ ವೇಳೆ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ಉಂಟಾಗಿತ್ತು.
ಈ ವೇಳೆ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಎಸ್‌ಪಿ ಕಾರ್ತಿಕ್‌ರೆಡ್ಡಿ ದಿನವಿಡೀ ಆಂಧ್ರದ ಚಿತ್ತೂರು ಡೀಸಿ ಭರತ್‌ಗುಪ್ತ ಮತ್ತು ಎಸ್‌ಪಿ ಎಸ್.ಸೆಂಥಿಲ್‌ಕುಮಾರ್ ಅವರನ್ನು ಸ್ಥಳಕ್ಕೆ ಕರೆಸಿ ಚರ್ಚೆ ನಡೆಸಿದರೂ ಪ್ರಯೋಜನವಾಗಲಿಲ್ಲ. ನಂತರ ಘಟ್ಟಗುಡಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ತೀರ್ಮಾನಿಸಿದರೂ ಆಂಧ್ರದ ಕಾರ್ಮಿಕರು ಒಪ್ಪದ ಕಾರಣ, ಎರಡು ರಾಜ್ಯ ಅಧಿಕಾರಿಗಳು ಮತ್ತು ಕಾರ್ಮಿಕರ ನಡುವೆ ಜಟಾಪಟಿ ಮುಂದುವರಿಯಿತು. ಪರೀಕ್ಷೆ ನಡೆಸಿ ವರದಿ ಸಲ್ಲಿಸಿ ವರದಿಯಲ್ಲಿ ನೆಗೆಟೀವ್ ಇದ್ದಲ್ಲಿ ಮಾತ್ರ ತಮ್ಮ ಗಡಿಯೊಳಕ್ಕೆ ಪ್ರವೇಶನೀಡಲಾಗುವುದು ಎಂದು ಆಂಧ್ರದ ಅಧಿಕಾರಿಗಳು ತಿಳಿಸಿದರು.
ಅಂತಿಮವಾಗಿ ಜಿಲ್ಲಾಡಳಿತ ಈ ಎಲ್ಲಾ ಕಾರ್ಮಿಕರನ್ನು ತಾಲೂಕಿನ ಘಟ್ಟಗುಡಿಯಲ್ಲಿ ರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲು ತೀರ್ಮಾನಿಸಿತು. ಆದರೆ, ಆಂಧ್ರ ಕಾರ್ಮಿಕರು ಮಾತ್ರ ಅದಕ್ಕೆ ಒಪ್ಪದೇ ತಾವುಗಳು ಜೀವನೋಪಾಯಕ್ಕೆ ಮಂಗಳೂರಿಗೆ ಬಂದಿದ್ದೆವು. ನಾವು ಆಂಧ್ರದ ನಿವಾಸಿಗಳು, ಚುನಾ ವಣೆಯಲ್ಲಿ ಓಟು ಹಾಕಿ ಜನಪ್ರತಿ ನಿಧಿಗಳನ್ನು ಗೆಲ್ಲಿಸಿದ್ದೇವೆ. ಹೀಗಿರುವಾಗ ತಮ್ಮ ರಾಜ್ಯಕ್ಕೆ ಬಿಟ್ಟು ಕೊಳ್ಳಲು ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಈ ವೇಳೆ ವಸತಿಶಾಲೆಯಲ್ಲಿ ಕ್ವಾರಂಟೈನ್ ಮಾಡಲು ನಾವು ಒಪ್ಪುವುದಿಲ್ಲವೆಂದು ಮುಷ್ಟೂರು ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿರುವುದರಿಂದ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಮುಂಜಾಗ್ರತಾ ಕ್ರಮವಾಗಿ ಎಸ್.ಪಿ. ಕಾರ್ತಿಕ್ ರೆಡ್ಡಿ ಅವರು ಸಾಕಷ್ಟು ಪೊಲೀಸರನ್ನು ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಜಯಕುಮಾರ್ ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ.ವರ್ಣಶ್ರೀ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಕರೆಯಿಸಿ ಕ್ವಾರಂಟೈನ್ ಮಾಡಲಾಗುತ್ತಿದೆ.