ಅಮರಾವತಿ: ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪ್ಲಾಟ್‌ಫಾರ್ಮ್‌ಗೆ ನುಗ್ಗಿದ ಪರಿಣಾಮ 10 ತಿಂಗಳ ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಜಯವಾಡ ಬಸ್ ನಿಲ್ದಾಣದಲ್ಲಿ ಸೋಮವಾರ ಸಂಭವಿಸಿದೆ.
ಸೋಮವಾರ ಬೆಳಿಗ್ಗೆ ಸುಮಾರು 8:30 ರ ಸುಮಾರಿಗೆ ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (APSRTC) ಬಸ್ ಪಂಡಿತ್ ನೆಹರು ಬಸ್ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 12 ರಲ್ಲಿ ನಿಂತ್ತಿತ್ತು.
ಬಸ್ ವಿಜಯವಾಡದಿಂದ ಗುಂಟೂರಿಗೆ ತೆರಳಬೇಕಿತ್ತು ಇನ್ನೇನು ಬಸ್ಸು ಹೊರಡುವ ಸಮಯ ಆಯಿತು ಹಿಂದೆ ತೆಗೆಯಬೇಕು ಎನ್ನುವಷ್ಟರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ಮುಂದೆ ಬಂದು ಪ್ಲಾಟ್‌ಫಾರ್ಮ್ ನ ಮೇಲೇರಿದೆ ಈ ವೇಳೆ ಬಸ್ಸಿಗಾಗಿ ಕಾಯುತ್ತಿದ್ದ ಹಲವು ಮಂದಿಗೆ ಡಿಕ್ಕಿ ಹೊಡೆದಿದೆ ಈ ವೇಳೆ ೧೦ ತಿಂಗಳ ಮಗು ಸೇರಿದಂತೆ ಒಟ್ಟು ಮೂರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಹಲವು ಮಂದಿ ಗಾಯಗೊಂಡಿದ್ದಾರೆ.
ಘಟನೆಯ ದೃಶ್ಯಾವಳಿಗಳು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಭಯಾನಕವಾಗಿದೆ.
ಈ ಕುರಿತು ಮಾತನಾಡಿದ ರೀಜನಲ್ ಮ್ಯಾನೇಜರ್ ಎಂ ಯೇಸು ದಾನಂ ಬಸ್ ಚಾಲಕ ರಿವರ್ಸ್ ಗೇರ್ ಹಾಕುವ ಬದಲು ಮುಂದೆ ಚಲಿಸುವ ಗೇರ್ ಹಾಕಿದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಹೇಳಿದ್ದಾರೆ.
ಮೃತ ಕುಟುಂಬಕ್ಕೆ ಪರಿಹಾರ:
ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಅಪಘಾತದ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ ಮತ್ತು ಮೃತ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಬಸ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.