ಹೈದರಾಬಾದ್: ಮೃತಪಟ್ಟ 10 ವರ್ಷದ ಮಗನ ಶವವನ್ನು ಸಾಗಿಸಲು ತಿರುಪತಿ ಸರ್ಕಾರಿ ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕ 10 ಸಾವಿರ ರೂಪಾಯಿ ಲಂಚ ಕೇಳಿದ್ದರಿಂದ ಕಂಗಾಲಾದ ತಂದೆ ಮಗನ ಶವವನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡು ಬೈಕ್ ನಲ್ಲಿಯೇ 90 ಕಿಲೋ ಮೀಟರ್ ದೂರ ಸಾಗಿದ ಹೃದಯವಿದ್ರಾವಕ ಘಟನೆ ವರದಿಯಾಗಿದೆ.
ಇದನ್ನೂ ಓದಿ:CM ಯೋಗಿ ಆದೇಶದ ಬೆನ್ನಲ್ಲೇ 17,000 ಧಾರ್ಮಿಕ ಕೇಂದ್ರಗಳ ಲೌಡ್ ಸ್ಪೀಕರ್ ಶಬ್ದದ ಪ್ರಮಾಣ ಇಳಿಕೆ
ಅನಾರೋಗ್ಯದ ಪರಿಣಾಮ 10 ವರ್ಷದ ಜೇಸವಾನನ್ನು ಆರ್ ಯುಐಎ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಜೇಸವಾ ಸೋಮವಾರ ರಾತ್ರಿ ಸಾವನ್ನಪ್ಪಿದ್ದ. ಈ ಸಂದರ್ಭದಲ್ಲಿ ಮಗುವಿನ ಶವ ಸಾಗಿಸಲು ಆ್ಯಂಬುಲೆನ್ಸ್ ಚಾಲಕ 10 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಕೃಷಿ ಕೆಲಸ ಮಾಡಿಕೊಂಡಿದ್ದ ಮಗುವಿನ ತಂದೆ ಬಳಿ ಅಷ್ಟೊಂದು ಹಣ ಇರಲಿಲ್ಲವಾಗಿತ್ತು.
ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕ ಹತ್ತು ಸಾವಿರ ರೂಪಾಯಿ ಕೇಳಿರುವ ಬಗ್ಗೆ ಆತ ತನ್ನ ಸಂಬಂಧಿಗಳಿಗೆ ವಿಷಯ ತಿಳಿಸಿದ್ದ. ಕೊನೆಗೆ ಮತ್ತೊಂದು ಆ್ಯಂಬುಲೆನ್ಸ್ ಅನ್ನು ಕಳುಹಿಸಿಕೊಡುವುದಾಗಿ ಹೇಳಿದ್ದರು. ಆದರೆ ಬೇರೆ ಆ್ಯಂಬುಲೆನ್ಸ್ ನಲ್ಲಿ ಶವ ಸಾಗಿಸಲು ಅವಕಾಶ ಕೊಡೋದಿಲ್ಲ ಎಂದು ಚಾಲಕ ಪಟ್ಟು ಹಿಡಿದಿದ್ದು, ತಮ್ಮದೇ ಸರ್ಕಾರಿ ಆಸ್ಪತ್ರೆಯ ಆ್ಯಂಬುಲೆನ್ಸ್ ನಲ್ಲಿ ಶವ ಸಾಗಿಸಬೇಕೆಂದು ಹೇಳಿರುವುದಾಗಿ ಮಗುವಿನ ತಂದೆ ಆರೋಪಿಸಿದ್ದಾರೆ.
ಆ್ಯಂಬುಲೆನ್ಸ್ ಚಾಲಕನ ಅಮಾನವೀಯತೆ ಸಿಟ್ಟುಗೊಂಡ ಆತ ಮಗುವಿನ ಶವವನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡು ಬೈಕ್ ನಲ್ಲಿ ತಿರುಪತಿಯಿಂದ 90 ಕಿಲೋ ಮೀಟರ್ ದೂರದಲ್ಲಿರುವ ಅಣ್ಣಮಯ್ಯ ಜಿಲ್ಲೆಯ ಚಿಟ್ಟೇಲ್ ಗೆ ತೆರಳಿರುವುದಾಗಿ ವರದಿ ತಿಳಿಸಿದೆ.
ಈ ವಿಷಯ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿತ್ತು. ಈ ಹಿಂದೆಯೂ ಆ್ಯಂಬುಲೆನ್ಸ್ ಚಾಲಕ ಇದೇ ರೀತಿ ಕ್ರೂರವಾಗಿ ನಡೆದುಕೊಂಡಿರುವುದಾಗಿ ಆರೋಪಿಸಿರುವ ಸಾರ್ವಜನಿಕರು ಚಾಲಕನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಘಟನೆ ಬಗ್ಗೆ ವಿಪಕ್ಷಗಳಾದ ಟಿಡಿಪಿ ಮತ್ತು ಬಿಜೆಪಿ ಕಾರ್ಯಕರ್ತರು ಆಸ್ಪತ್ರೆ ಮುಂಭಾಗ ಪ್ರತಿಭಟನೆ ಮಾಡಲು ಬಂದಾಗ ಅವರನ್ನು ಮಾರ್ಗ ಮಧ್ಯದಲ್ಲಿಯೇ ತಡೆದು ನಿಲ್ಲಿಸಲು ಪ್ರಯತ್ನಿಸಲಾಗಿತ್ತು ಎಂದು ವರದಿ ತಿಳಿಸಿದೆ.