Advertisement
4 ದಶಕಗಳಿಂದ ಬುಟ್ಟಿ ತಯಾರಿಆಂಧ್ರಪ್ರದೇಶದ ಚಿತ್ತೂರಿನ ಸಿದ್ಧಯ್ಯ ಅವರ ಕುಟುಂಬ ಕಳೆದ ಒಂದು ವಾರದಿಂದ ಆದಿಉಡುಪಿ ಸಮೀಪದಲ್ಲಿ ಬುಟ್ಟಿ ಹೆಣೆಯುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಕಳೆದ 4 ದಶಕಗಳಿಂದ ವರ್ಷದಲ್ಲಿ 2 ತಿಂಗಳು ಉಡುಪಿಯಲ್ಲಿ ಕುಟುಂಬ ಸಮೇತರಾಗಿ ವಾಸ್ತವ್ಯ ಹೂಡಿ ಬುಟ್ಟಿ ಮಾರಾಟ ಮಾಡುತ್ತಿದ್ದಾರೆ. ಒಂದೇ ಕಡೆ ಬುಟ್ಟಿಗಳನ್ನು ಮಾರಾಟ ಮಾಡಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಸಿದ್ಧಯ್ಯ ಅವರ ತಂದೆ ಊರೂರು ತಿರುಗಿ ಬುಟ್ಟಿ ಮಾರಾಟ ಮಾಡಿದ್ದರು. ಅದೇ ಹಾದಿಯನ್ನು ಅವರ ಮಗನೂ ಇದೀಗ ಅನುಸರಿಸುತ್ತಿದ್ದಾರೆ.
ಸಿದ್ಧಯ್ಯ ಅವರು ಕುಟುಂಬ ಸಮೇತರಾಗಿ ಉಡುಪಿಗೆ ಬಂದು ವಾರ ಕಳೆದಿದೆ. ಪ್ರಸ್ತುತ ಸುಮಾರು 15 ಜನರು ಬುಟ್ಟಿ ಹೆಣೆಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಆಂಧ್ರಪ್ರದೇಶ ಚಿತ್ತೂರಿನಿಂದ ಬಾಡಿಗೆ ವಾಹನಗಳಲ್ಲಿ ಬುಟ್ಟಿ ಮಾಡಲು ಅಗತ್ಯವಿರುವ ಕಾಜೂರು ಮರದ ಗರಿಯನ್ನು ತಂದಿದ್ದಾರೆ. ದಿನನಿತ್ಯ ಬೆಳಗ್ಗೆಯಿಂದ ಸಂಜೆಯ ವರೆಗೆ ಸುಮಾರು 15ರಿಂದ 20 ದೊಡ್ಡ ಕೋಳಿಗೂಡು, 20ರಿಂದ 30 ಅನ್ನ ಬಾಗುವ ಬುಟ್ಟಿ, 15 ಹೂವಿನ ಬುಟ್ಟಿಗಳನ್ನು ತಯಾರಿಸುತ್ತಾರೆ. ಉಡುಪಿಯಲ್ಲಿ ಉತ್ತಮ ಸ್ಪಂದನೆ
ದಿನಂಪ್ರತಿ 8ರಿಂದ 10 ಕೋಳಿ ಗೂಡುಗಳು, 15ರಿಂದ 20 ಹೂವಿನ ಬುಟ್ಟಿ ಹಾಗೂ ಅನ್ನದ ಬುಟ್ಟಿಗಳು ಮಾರಾಟವಾಗುತ್ತಿದೆ.
Related Articles
Advertisement
ದುಬಾರಿ ಬೆಲೆಕಳೆದೆರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಪ್ರಸಕ್ತ ಸಾಲಿನಲ್ಲಿ ಬುಟ್ಟಿ ದರ ದುಬಾರಿಯಾಗಿದೆ. ನಗರದಲ್ಲಿ ಮಾರಾಟ ಮಾಡಲಾಗುತ್ತಿರುವ ದೊಡ್ಡ ಗಾತ್ರದ ಕೋಳಿ ಗೂಡುಗಳಿಗೆ 400-500 ರೂ., ಸಣ್ಣ ಗಾತ್ರದ ಬುಟ್ಟಿ 250-300 ರೂ., ಹೂವಿನ ಬುಟ್ಟಿ 100-200 ರೂ.ಗಳಿಗೆ ಮಾರಾಟವಾಗುತ್ತಿದೆ. ಚಿತ್ತೂರಿನ ಬುಟ್ಟಿ
ಕಾಜೂರು ಮರದ ಗರಿ ಆಂಧ್ರಪ್ರದೇಶದ ಚಿತ್ತೂರು ಹೊರತು ಪಡಿಸಿದರೆ ಬೇರೆ ಕಡೆ ಸಿಗುವುದಿಲ್ಲ. ಹಳ್ಳದ ಬದಿಯಲ್ಲಿ ಬೆಳೆಯುವ ಈ ಮರದ ಗರಿ ಕಡಿದು ತರುವುದು ಕಷ್ಟ. ಅದಕ್ಕಾಗಿ ಇವರು ಈ ಮರ ಬೆಳೆಯುವ ಸ್ಥಳಗಳಿಗೆ ಕುಟುಂಬ ಸಮೇತ ತೆರಳಿ ವಾಸ್ತವ್ಯವಿದ್ದು, ಮರದ ಗರಿ ಸಂಗ್ರಹಿಸುವ ಕೆಲಸ ಮಾಡುತ್ತಾರೆ. ಕುಟುಂಬಕ್ಕೆ ಸಹಕಾರಿ
ನಮ್ಮ ಕುಟುಂಬ ಬುಟ್ಟಿ ಹೆಣೆಯುವ ಕಾಯಕದಲ್ಲಿ ತೊಡಗಿಸಿಕೊಂಡಿದೆ. ತಂದೆ ಕಾಲದ ಅನಂತರ ಅದರ ಸಂಪೂರ್ಣ ಜವಾಬ್ದಾರಿ ನಾನು ವಹಿಸಿಕೊಂಡಿದ್ದೇನೆ. ಕಳೆದ 40 ವರ್ಷಗಳಿಂದ ಉಡುಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬುಟ್ಟಿ ತಯಾರಿಸಿ ಮಾರಾಟ ಮಾಡಿದ್ದೇನೆ. ಜೀವನ ನಿರ್ವಹಣೆಗೆ ಈ ಉದ್ಯೋಗ ನಮ್ಮ ಕುಟುಂಬಕ್ಕೆ ಸಹಕಾರಿಯಾಗಿದೆ.
-ಸಿದ್ಧಯ್ಯ,ಕುಟುಂಬದ ಮುಖ್ಯಸ್ಥ ಬಹುಕಾಲ ಬಾಳಿಕೆ
ಹಿಂದೆ ಸಂತೆ ಮಾರುಕಟ್ಟೆಗಳಲ್ಲಿ ಕೃಷಿ, ಹೈನುಗಾರಿಕೆ ಬೇಕಾಗುವ ಬುಟ್ಟಿಗಳು ಸಾಕಷ್ಟು ಪ್ರಮಾಣದಲ್ಲಿ ದೊರಕುತ್ತಿದ್ದವು. ಆದರೆ ಇದೀಗ ಕಣ್ಮರೆಯಾಗಿದೆ. ಇಲ್ಲಿ ದೊರಕುವ ಕೋಳಿಗೂಡುಗಳು ಗಟ್ಟಿಮುಟ್ಟಾಗಿದ್ದು, ಬಹುಕಾಲ ಬಾಳಿಕೆ ಬರಲಿದೆ.
-ನವೀನ್ ಶೆಟ್ಟಿ,
ಉಡುಪಿ ನಿವಾಸಿ.