ದೇವದುರ್ಗ: ನಕಲಿ ಬೀಜ ಮಾರಾಟ ಜಾಲ ತಾಲೂಕಿನಾದ್ಯಂತ ಹಳ್ಳಿಗಳಲ್ಲಿ ಬಲವಾಗಿ ನೆಲೆಯೂರಿದೆ. ಸರಕಾರ ಬ್ಯಾನ್ ಮಾಡಿರುವ ಕಂಪನಿಯೊಂದು ಆಂಧ್ರ ಮೂಲದ ನಕಲಿ ಹತ್ತಿ ಬೀಜ ಮಾರಾಟ ಮಾಡುತ್ತಿದ್ದು, ಕೃಷಿ ಕಣ್ತಪ್ಪಿಸಿ ವ್ಯಾಪಕವಾಗಿ ಚಟುವಟಿಕೆಯಲ್ಲಿ ತೊಡಗಿದೆ. ಇಲ್ಲಿನ ಆಂಧ್ರ ಮೂಲದ ಕೆಲ ಅಂಗಡಿಗಳಿಗೆ ನಕಲಿ ಬೀಜ ಪೂರೈಸಲಾಗುತ್ತಿದೆ.
ಕೆಲ ಅಂಗಡಿ ಮಾಲೀಕರು ನಿಗೂಢ ಸ್ಥಳದಲ್ಲಿ ಬೀಜ ಸಂಗ್ರಹಿಸಿ ದಲ್ಲಾಳಿಗಳಿಂದ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಕಂಪನಿವೊಂದರ ಬಿಟಿ ಹತ್ತಿ ಬೀಜ ಬ್ಯಾನ್ ಆಗಿದೆ. ಆದರೂ ರೈತರನ್ನು ವಂಚಿಸುವ ದಂಧೆ ಎಗ್ಗಿಲ್ಲದೇ ನಡೆದಿದೆ ಎನ್ನಲಾಗಿದೆ.
ಕೃಷಿ ಇಲಾಖೆ ಅಧಿಕಾರಿಗಳು ನಕಲಿ ಬೀಜ ಪೂರೈಸುವ ದಲ್ಲಾಳಿಗಳ ಬೆನ್ನತ್ತಿದ್ದಾರೆ. ನಕಲಿ ಬೀಜ ಪೂರೈಕೆ ತಡೆಯಲು ನಾಲ್ಕು ಹೋಬಳಿ ಕೇಂದ್ರ ವ್ಯಾಪ್ತಿಯ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ. ಆದರೆ ಕಡಿವಾಣ ಬೀಳುತ್ತಿಲ್ಲ. ಕೃಷಿ ಇಲಾಖೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮಧ್ಯೆ ಸಮನ್ವಯ ಕೊರತೆಯಿಂದಾಗಿ ನಕಲಿ ಬೀಜ ಮಾರಾಟ ದಂಧೆ ವ್ಯಾಪಕವಾಗಿದೆ ಎನ್ನಲಾಗುತ್ತಿದೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಹತ್ತಿ, ಸೂರ್ಯಕಾಂತಿ ಸೇರಿ ವಿವಿಧ ಬೆಳೆಗಳ ನಕಲಿ ಬಿತ್ತನೆ ಬೀಜ ಮಾರಾಟ ಮಾಡಿ ಹಣ ಮಾಡುವ ಆಂಧ್ರ ಪ್ರದೇಶದ ಜಾಲ ತಾಲೂಕಿನಾದ್ಯಂತ ಬೇರೂರಿದೆ. ಇದಕ್ಕೆ ಅಧಿಕಾರಿಗಳ ಬೇಜವಬ್ದಾರಿಯೇ ಕಾರಣ ಎಂದು ರೈತರು ಆರೋಪಿಸಿದ್ದಾರೆ.
ಅಧಿಕಾರಿಗಳಿಂದ ಜಾಗೃತಿ ಕೊರತೆ ಹಿನ್ನೆಲೆಯಲ್ಲಿ ಅಂಗಡಿಗಳ ಮಾಲೀಕರ ಮಾತಿಗೆ ಮನಸೋತು ಪ್ರತಿ ವರ್ಷ ಸಂಕಷ್ಟ ಅನುಭವಿಸುತ್ತಿರುವ ರೈತರ ಪಾಡು ಹೇಳತೀರದಂತಾಗಿದೆ. ನಷ್ಟದಲ್ಲಿ ಕಣ್ಣೀರು ಹಾಕುವ ರೈತರ ನೋವಿಗೆ ಸ್ಪಂದನೆ ಸಿಗುತ್ತಿಲ್ಲ. ನಕಲಿ ಬೀಜ ಪೂರೈಸುವ ಅಂಗಡಿ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತ ಬಾಬು ಗೌರಂಪೇಟೆ ಆಗ್ರಹಿಸಿದ್ದಾರೆ.
ಬ್ಯಾನ್ ಆಗಿರುವ ಕಂಪನಿ ಬೀಜ ಪೂರೈಕೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದರ ಪತ್ತೆಗಾಗಿ ತಂಡ ರಚಿಸಲಾಗಿದೆ. ರೈತರಿಂದ ದೂರು ಬಂದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಮುಂಗಾರು ಹಂಗಾಮಿನಲ್ಲಿ ಅಗತ್ಯ ಬೀಜಗಳನ್ನು ರೈತ ಸಂಪರ್ಕ ಕೇಂದ್ರಕ್ಕೆ ಪೂರೈಸಲಾಗಿದೆ.-
ಡಾ| ಎಸ್. ಪ್ರಿಯಂಕಾ, ಸಹಾಯಕ ಕೃಷಿ ನಿರ್ದೇಶಕಿ
ರೈತರನ್ನು ವಂಚಿಸಲು ನಕಲಿ ಬೀಜ ಪೂರೈಕೆ ಮಾಡುವ ದಂಧೆ ನಡೆದಿದೆ. ಕೃಷಿ ಇಲಾಖೆ ಅಧಿಕಾರಿಗಳು ಎಚ್ಚರವಹಿಸಬೇಕು. ರೈತರಿಗೆ ಮೋಸ ಆಗದಂತೆ ನೋಡಿಕೊಳ್ಳಬೇಕು. –
ಬೂದಯ್ಯಸ್ವಾಮಿ, ಗೊಬ್ಬರು ರೈತ ಮುಖಂಡ
-ನಾಗರಾಜ ತೇಲ್ಕರ್