ಅಮರಾವತಿ:ಇನ್ನು ಮುಂದೆ ಆಂಧ್ರಪ್ರದೇಶದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ರಾಗಿ ಮಾಲ್ಟ್ ಕೂಡ ಸಿಗಲಿದೆ!
“ಜಗನಣ್ಣ ಗೋರು ಮುದ್ದಾ ಯೋಜನೆ’ಯ ಅನ್ವಯ 44,392 ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 37.6 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಪ್ರಸ್ತುತ ನೀಡಲಾಗುವ ಆಹಾರದ ಜೊತೆಗೆ ಸುಮಾರು 86 ಕೋಟಿ ರೂ. ವೆಚ್ಚದಲ್ಲಿ ರಾಗಿ ಮಾಲ್ಟ್ ಕೂಡ ನೀಡುವುದಾಗಿ ಆಂಧ್ರ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ಘೋಷಿಸಿದ್ದಾರೆ.
“ಈ ಆಹಾರವು ಮಕ್ಕಳ ಬೆಳವಣಿಗೆಗೆ ಪೂರಕವಾದ ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಅನ್ನು ಒದಗಿಸಲಿದೆ. ಮಕ್ಕಳ ಊಟದ ಮೆನುವಿಗೆ ರಾಗಿ ಮಾಲ್ಟ್ ಸೇರಿಸುವುದರಿಂದ ವಾರ್ಷಿಕ ವೆಚ್ಚ ಈಗಿರುವ 1,824 ಕೋಟಿ ರೂ.ಗಳಿಂದ 1,910 ಕೋಟಿ ರೂ.ಗಳಿಗೆ ಏರಿಕೆಯಾಗಲಿದೆ. ಈ ಹೆಚ್ಚುವರಿ 86 ಕೋಟಿ ರೂ. ವೆಚ್ಚದ ಪೈಕಿ 42 ಕೋಟಿ ರೂ.ಗಳನ್ನು ಸತ್ಯಸಾಯಿ ಸೆಂಟ್ರಲ್ ಟ್ರಸ್ಟ್ ಒದಗಿಸಲಿದೆ’ ಎಂದು ಸಿಎಂ ಜಗನ್ ಹೇಳಿದ್ದಾರೆ.
ಈಗಾಗಲೇ ಆಂಧ್ರದಲ್ಲಿ ವಿದ್ಯಾರ್ಥಿಗಳಿಗೆ ಬೇಯಿಸಿದ ಮೊಟ್ಟೆ, ಬೆಲ್ಲದಿಂದ ಮಾಡಿದ ಕಡ್ಲೆ ಮಿಠಾಯಿ ಸೇರಿದಂತೆ ಒಟ್ಟು 15 ರೀತಿಯ ಖಾದ್ಯಗಳನ್ನು ನೀಡಲಾಗುತ್ತಿದೆ.