Advertisement

ಸೇನೆಗೆ ಅಂಡಮಾನ್‌ ಬಲ; ಎಎನ್‌ಸಿಗೆ ಶಕ್ತಿ ತುಂಬಲು ಮುಂದಾದ ಸೇನೆ

02:15 AM Jul 05, 2020 | Sriram |

ಹೊಸದಿಲ್ಲಿ: ಲಡಾಖ್‌ನಲ್ಲಿ ಚೀನದ ದುಸ್ಸಾಹಸಕ್ಕೆ ಭಾರತದ ದಿಟ್ಟ ಪ್ರತಿಕ್ರಿಯೆ ಈಗ ಅಂಡಮಾನ್‌ ನಿಕೋಬಾರ್‌ ದ್ವೀಪ ಸಮೂಹದತ್ತಲೂ ವಿಸ್ತರಿಸಿದೆ. ಹಿಂದೂ ಮಹಾಸಾಗರದಲ್ಲಿ ಚೀನವು ಮಿಲಿಟರಿ ಚಟುವಟಿಕೆಗಳನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಅಂಡಮಾನ್‌ ನಿಕೋಬಾರ್‌ನ ತನ್ನ ನೆಲೆಯ ಬಲವರ್ಧನೆ, ಹೆಚ್ಚುವರಿ ಮಿಲಿಟರಿ ನಿಯೋಜನೆಗೆ ಭಾರತ ನಿರ್ಧರಿಸಿದೆ.

Advertisement

ಅಂಡಮಾನ್‌ ನಿಕೋಬಾರ್‌ ದ್ವೀಪ ಸಮೂಹದಲ್ಲಿ ಭಾರತೀಯ ಮಿಲಿಟರಿ ನೆಲೆಯಿದ್ದು, ವ್ಯೂಹಾತ್ಮಕವಾಗಿ ಇದು ಮುಖ್ಯವಾದುದು. ಅಲ್ಲಿ ಬಹುಕಾಲದಿಂದ ಬಾಕಿ ಉಳಿದಿದ್ದ ಮಿಲಿಟರಿ ಯೋಜನೆಗಳಿಗೆ ತುರ್ತು ಆದ್ಯತೆಯಲ್ಲಿ ಮರುಜೀವ ನೀಡ ಲಾಗುತ್ತಿದೆ ಎಂದು ರಕ್ಷಣ ಮೂಲಗಳು ತಿಳಿಸಿವೆ.

ಎಎನ್‌ಸಿಗೆ ಬಲ
ಭಾರತೀಯ ಸೇನೆ ಅಂಡಮಾನ್‌ ನಿಕೋಬಾರ್‌ ಕಮಾಂಡ್‌ (ಎಎನ್‌ಸಿ)ಗೆ ಈಗ ಬಲ ತುಂಬಲು ಮುಂದಾಗಿದೆ. ಅಂಡಮಾನ್‌ನಲ್ಲಿ ಭೂ, ವಾಯು, ನೌಕಾಸೇನೆಗಳನ್ನು ಒಂದೇ ಕಮಾಂಡ್‌ ಅಡಿಯಲ್ಲಿ ತಂದು 2001ರಲ್ಲಿ ಎಎನ್‌ಸಿ ಸ್ಥಾಪಿಸಲಾಗಿತ್ತು.

ಈಗ ಎಎನ್‌ಸಿಯ ಚಹರೆ ಬದಲಿಸಿ, ನಿರ್ಣಾಯಕ ನೆಲೆಯಾಗಿ ರೂಪಿಸಲು ಸೇನೆ ಮುಂದಾಗಿದೆ. ಎಎನ್‌ಸಿಯನ್ನು ಇನ್ನಷ್ಟು ಸುಸಜ್ಜಿತಗೊಳಿಸಲು ಪ್ರಮುಖ ಯೋಜನೆಗಳನ್ನು ಆರಂಭಿಸಲಾಗಿದೆ. ಉತ್ತರ ಅಂಡಮಾನ್‌ನ ಶಿಬು³ರದ ಐಎನ್‌ಎಸ್‌ ಕೊಹಸ್ಸಾದ ರನ್‌ ವೇ ವಿಸ್ತರಣೆಗೆ ಜಾಗ ನೀಡಲಾಗಿದೆ. ಕ್ಯಾಂಪ್‌ಬೆಲ್‌ನಲ್ಲಿ ಇರುವ ಐಎನ್‌ಎಸ್‌ ಬಾಝ್ನಲ್ಲೂ ರನ್‌ವೇಯನ್ನು 10 ಸಾವಿರ ಅಡಿಗಳಿಗೆ ವಿಸ್ತರಿಸಲಾಗುತ್ತಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.

ಅಂಡಮಾನ್‌ ಚಹರೆಯೇ ಬದಲು
ದ್ವೀಪದಲ್ಲಿ ಸೇನೆಯ ಮೂಲ ಸೌಕರ್ಯ ಅಭಿ ವೃದ್ಧಿಗೆ ಈಗಾಗಲೇ 5,650 ಕೋ.ರೂ. ಮೀಸಲಿಡ ಲಾಗಿದೆ. ಕಮೋರ್ಟ ದ್ವೀಪದಲ್ಲಿ 10 ಸಾವಿರ ಅಡಿ ಉದ್ದದ ರನ್‌ವೇ ಪ್ರಗತಿಯಲ್ಲಿದೆ. 2027ರ ಒಳಗಾಗಿ ಹೆಚ್ಚುವರಿ ಬೆಟಾಲಿಯನ್‌, ಕ್ಷಿಪಣಿ ವ್ಯವಸ್ಥೆ, ಸರಕು ಸಾಗಣೆ ವಿಮಾನಗಳು, ಡಾರ್ನಿಯರ್‌-228 ಗಸ್ತು ವಿಮಾನಗಳು, ಫೈಟರ್‌ಗಳನ್ನು ಶಾಶ್ವತವಾಗಿ ನೆಲೆ ಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Advertisement

ಅಂಡಮಾನ್‌ ಈಗೆಷ್ಟು ಬಲಿಷ್ಠ?
ಎಎನ್‌ಸಿ ಪಡೆಗಳು 572 ದ್ವೀಪಗಳನ್ನು ಕಾಯುತ್ತಿವೆ. ಈಗಿರುವ 7 ವಾಯು ಮತ್ತು ನೌಕಾನೆಲೆಗಳೂ ಅತ್ಯಂತ ಸುಸಜ್ಜಿತ.

ತುರ್ತು ಸಂದರ್ಭದಲ್ಲಿ ಈ ನೆಲೆಗಳನ್ನು ಮಿತ್ರ ರಾಷ್ಟ್ರಗಳಾದ ಆಸ್ಟ್ರೇಲಿಯಾ, ಜಪಾನ್‌ ಕೂಡ ಬಳಸಿಕೊಳ್ಳಬಹುದು.

ಸುಖೋಯ್‌- 30 ಎಂಕೆಐಗಳು, ಬೋಯಿಂಗ್‌ ಪಿ8 ಪೊಸಿಡಾನ್‌ಗಳು ದೀರ್ಘ‌ ಶ್ರೇಣಿಯ ಕಡಲ ಗಸ್ತು ನಡೆಸುತ್ತಿವೆ.

ಥೈಲ್ಯಾಂಡ್‌, ಇಂಡೋನೇಶ್ಯಾದ ನೌಕಾಪಡೆಗಳ ಜತೆ ಎಎನ್‌ಸಿ ನಡೆಸುವ ದ್ವಿವಾರ್ಷಿಕ ಸಂಯೋಜಿತ ಗಸ್ತು ಕೂಡ ದ್ವೀಪಕ್ಕೆ ಶ್ರೀರಕ್ಷೆ.

2ನೇ ವಿಶ್ವಯುದ್ಧದ ವೇಳೆ ಜಪಾನ್‌ ಈ ದ್ವೀಪ ಆಕ್ರಮಿಸಿ ಯುದ್ಧ ಬಂಕರ್‌ ನಿರ್ಮಿಸಿತ್ತು. ಅವುಗಳಿಗೆ ಸೇನೆ ಮರುಜೀವ ನೀಡಿದೆ.

ಲಡಾಖ್‌ನಲ್ಲಿ ಐಎಎಫ್ ವಿಮಾನಗಳ ಗರ್ಜನೆ
ಎಲ್‌ಎಸಿಯ ಮುಂಚೂಣಿಯ ನೆಲೆಗಳಲ್ಲಿ ಐಎಎಫ್ ಯುದ್ಧ ವಿಮಾನಗಳ ಗರ್ಜನೆ ಆರಂಭವಾಗಿದೆ. ಸುಖೋಯ್‌-30 ಎಂಕೆಐ, ಮಿಗ್‌ ವಿಮಾನಗಳ ನಿರಂತರ ಹಾರಾಟ ಕಂಡುಬರುತ್ತಿದೆ ಎಂದು ಎಎನ್‌ಐ ವರದಿ ಮಾಡಿದೆ.

ಎಲ್‌ಎಸಿಯ ಅತೀ ಎತ್ತರದ ನೆಲೆಗಳಿಗೆ ಸೈನಿಕರು, ಯುದ್ಧ ಸಾಮಗ್ರಿ ಒಯ್ಯಲು ಸಿ- 18, ಸಿ-130 ಜೆ, ಇಲ್ಯುಶಿನ್‌- 76 ಮತ್ತು ಆಂಟೊನೊವ್‌- 32 ವಿಮಾನಗಳು ಅವಿರತ ಶ್ರಮಿಸುತ್ತಿವೆ. ಮೇ ಆರಂಭದಲ್ಲಿ ಚೀನ ಸೈನಿಕರು ಪ್ರತ್ಯಕ್ಷವಾಗುತ್ತಿದ್ದಂತೆ ಐಎಎಫ್, ಲಡಾಖ್‌ನ ವಾಯುನೆಲೆಗಳಿಗೆ ಅಪಾಚೆ ಹೆಲಿಕಾಪ್ಟರ್‌ಗಳನ್ನು ಕಳುಹಿಸಿಕೊಟ್ಟಿತ್ತು. ಇವು ಕೂಡ ಹದ್ದಿನಗಣ್ಣು ಇರಿಸಿವೆ. ಚಿನೂಕ್‌ ಹೆವಿಲಿಫ್ಟ್ ಹೆಲಿಕಾಪ್ಟರ್‌ಗಳು, ಎಂಐ- 17 ವಿ ಹೆಲಿಕಾಪ್ಟರ್‌ಗಳು ಐಟಿಬಿಪಿ ಯೋಧರನ್ನು ಮುಂಚೂಣಿಯ ನೆಲೆಗಳಿಗೆ ಸಾಗಿಸುತ್ತಿವೆ. ಈ ದಿನಗಳ ಯುದ್ಧದಲ್ಲಿ ವಾಯುಶಕ್ತಿಯ ಹೋರಾಟವೇ ನಿರ್ಣಾಯಕ ಎಂದು ವಿಂಗ್‌ ಕಮಾಂಡರ್‌ ಒಬ್ಬರು ತಿಳಿಸಿದ್ದಾರೆ.

ಅಮೆರಿಕದ ಪರಮಾಣು
ನೌಕೆಗಳ ಆಗಮನ
ಭಾರತವನ್ನು ಬೆಂಬಲಿಸುತ್ತಿರುವ ಅಮೆರಿಕವು ದಕ್ಷಿಣ ಚೀನ ಸಮುದ್ರಕ್ಕೆ ಮತ್ತೆ ಎರಡು ಪರಮಾಣು ಶಸ್ತ್ರಾಸ್ತ್ರ ಸಜ್ಜಿತ ಸಮರ ನೌಕೆಗಳಾದ ಯುಎಸ್‌ಎಸ್‌ ರೊನಾಲ್ಡ್‌ ರೇಗನ್‌, ಯುಎಸ್‌ಎಸ್‌ ನಿಮಿಟ್ಜ್ಗಳನ್ನು ಕಳುಹಿಸಿಕೊಟ್ಟಿದೆ. ಇವು ದಕ್ಷಿಣ ಚೀನ ಸಮುದ್ರದಲ್ಲಿ ಸಮ ರಾಭ್ಯಾಸ ನಡೆಸಲಿವೆ.

ಈ ಎರಡೂ ನೌಕೆಗಳು ಈಗಾಗಲೇ ಲುಝಾನ್‌ ಖಾರಿಯನ್ನು ದಾಟಿ ಬಂದಿವೆ ಎನ್ನಲಾಗಿದೆ. ಈ ಲುಝಾನ್‌ ಖಾರಿ ತೈವಾನ್‌ ಮತ್ತು ಫಿಲಿ ಪ್ಪೀನ್ಸ್‌ನ ದ್ವೀಪ ಲುಝಾನ್‌ ಬಳಿ ಇದೆ. ಈ ಭಾಗ ದಕ್ಷಿಣ ಚೀನ ಸಮುದ್ರವನ್ನು ಸಂಪರ್ಕಿಸು ತ್ತದೆ.

ಭಾರತ ಸಹಿತ ಆಗ್ನೇಯ ಏಶ್ಯಾದ ಮಿತ್ರ ರಾಷ್ಟ್ರಗಳಿಗೆ ಬೆಂಬಲ ನೀಡುವುದೇ ಈ ತಾಲೀಮಿನ ಮುಖ್ಯ ಉದ್ದೇಶ ಎಂದು ಅಮೆರಿಕ ಸೇನೆಯ ಉನ್ನತಾಧಿಕಾರಿ ಜಾರ್ಜ್‌ ಎಂ. ವಿಕಾಫ್ ಹೇಳಿದ್ದಾರೆ. ಅಮೆರಿಕದ ಈ ನಡೆಗೆ ಪ್ರತಿಕ್ರಿಯಿಸಿರುವ ಚೀನ, ಆಗ್ನೇಯ ಏಶ್ಯಾದಲ್ಲಿ ಉದ್ವಿಗ್ನ ಹೆಚ್ಚಾಗಲು ಅಮೆರಿಕವೇ ಕಾರಣ ಎಂದಿದೆ.

ಚೀನ ಜತೆ ವ್ಯವಹಾರ
ಕೈಬಿಟ್ಟ ಹೀರೋ
ಸೈಕಲ್‌ ತಯಾರಕ ಸಂಸ್ಥೆ ಹೀರೋ ಕೂಡ ಚೀನವನ್ನು ದೂರ ತಳ್ಳಿದೆ. ಚೀನದ ಕಂಪೆನಿಗಳೊಂದಿಗಿನ 900 ಕೋಟಿ ರೂ. ವ್ಯವಹಾರಗಳನ್ನು ರದ್ದುಗೊಳಿಸಿದೆ. ಮುಂದಿನ ಮೂರು ತಿಂಗಳುಗಳಲ್ಲಿ ನಮ್ಮ ಸಂಸ್ಥೆ ಚೀನದೊಂದಿಗೆ 900 ಕೋಟಿ ರೂ. ವ್ಯವಹಾರ ನಡೆಸಬೇಕಿತ್ತು. ಆ ಎಲ್ಲ ಯೋಜನೆಗಳನ್ನೂ ರದ್ದುಗೊಳಿಸುತ್ತಿದ್ದೇವೆ. ಚೀನೀ ಉತ್ಪನ್ನಗಳನ್ನು ಬಹಿಷ್ಕರಿಸಲು ನಮ್ಮ ಸಂಸ್ಥೆ ಬದ್ಧವಾಗಿದೆ ಎಂದು ಹೀರೋ ಸೈಕಲ್ಸ್‌ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ ಮುಂಜಾಲ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next