ಅರಂತೋಡು : ಗ್ರಾಮೀಣ ರಸ್ತೆಗಳಿಗೆ ಡಾಮರು ಹಾಕಿದರೆ ರಸ್ತೆಗಳು ಹೆಚ್ಚು ಬಾಳ್ವಿಕೆ ಬರುವುದಿಲ್ಲ. ಈ ನಿಟ್ಟಿನಲ್ಲಿ ಗ್ರಾಮೀಣ ರಸ್ತೆಗಳ ಕಾಂಕ್ರೀಟ್ ಕಾಮಗಾರಿ ಮಾಡಲು ಒತ್ತು ನೀಡಲಾಗುತ್ತದೆ ಎಂದು ಶಾಸಕ ಎಸ್. ಅಂಗಾರ ಹೇಳಿದರು.ಅವರು ತೊಡಿಕಾನ – ಮುಪ್ಪಸೇರು – ಮಾಪಳಕಜೆ – ಕುದರೆಪಾಯ ಸಂಪರ್ಕ ರಸ್ತೆಗೆ ಮತ್ಸ್ಯತೀರ್ಥ ಹೊಳೆಗೆ ಕಿರು ಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮೀಣ ರಸ್ತೆಗಳು ತುಂಬಾ ಏರಿತಗಳಿಂದ ಕೂಡಿದ್ದು, ಸಮತಟ್ಟಾದ ಜಾಗದಲ್ಲಿ ಮಾತ್ರ ಡಾಮರು ಕಾಮಗಾರಿ ನಿರ್ವಹಿಸಲಾಗುತ್ತದೆ. ಅನುದಾನ ಕಡಿಮೆ ಇದೆ ಅಂತ ಸೇತುವೆ ಕಾಮಗಾರಿಯಲ್ಲಿ ಯಾವುದೇ ಲೋಪ ಮಾಡುವ ಹಾಗಿಲ್ಲ. ಕಾಮಗಾರಿ ಸಮರ್ಕವಾಗಿ ನಡೆಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ತಾಲೂಕು ಪಂಚಾಯತ್ ಸದಸ್ಯೆ ಪುಷ್ಪಾ ಮೇದಪ್ಪ, ಗ್ರಾ.ಪಂ. ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ, ಅರಂತೋಡು ತೊಡಿಕಾನ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಬಿ. ದಿವಾಕರ ರೈ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು, ಉಬರಡ್ಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ರೈ,ಅರಂತೋಡು- ತೊಡಿಕಾನ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ನಿರ್ದೇಶಕರು, ತೊಡಿಕಾನ ಶ್ರೀ ಮಲಿಕಾರ್ಜುನ ದೇವಸ್ಥಾನದ ಸಿಬಂದಿ ಉಪಸ್ಥಿತರಿದ್ದರು.
ಸಹಕಾರ ಮುಖ್ಯ
ಅನುದಾನ ಕಡಿಮೆಯಾದರೆ ಮತ್ತೆ ಹೊಂದಾಣಿಕೆ ಮಾಡಿ ಅನುದಾನ ನೀಡಲಾಗುವುದು. ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಜನರ ಸಹಕಾರ ಮುಖ್ಯ ಎಂದು ಅಂಗಾರ ತಿಳಿಸಿದರು.