Advertisement

ಅನಂತ್ ಕುಮಾರ್ ‘ಪ್ರೀತಿಯ ಗಾಳ’ಕ್ಕೆ ಬಿದ್ದು ಬಿಜೆಪಿಗೆ ಬಂದೆ : ಸಿಎಂ ಬೊಮ್ಮಾಯಿ

07:29 PM May 06, 2022 | Team Udayavani |

ಬೆಂಗಳೂರು : ಅನಂತ್ ಕುಮಾರ್ ಅವರು ಅನಂತ ಅನಂತವಾಗಿದ್ದಾರೆ, ಅವರು ಎಂದಿಗೂ ದಿವಂಗತರಾಗುವುದಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಆತ್ಮೀಯ ಮಿತ್ರನ ನೆನಪು ಮಾಡಿಕೊಂಡರು.

Advertisement

ಬೆಂಗಳೂರಿನ ಜಯನಗರದ ಮಾಜಿ ಕೇಂದ್ರ ಸಚಿವ ದಿ.ಅನಂತ್ ಕುಮಾರ್ ಅವರ ಕಚೇರಿ ಅನಂತ ಪ್ರೇರಣಾ ಕೇಂದ್ರವನ್ನಾಗಿ ಪರಿವರ್ತಿಸಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗಿಯಾಗಿ ಮಾತನಾಡಿದರು.

ಸಾರ್ವಜನಿಕ ಹೋರಾಟದ ಆತ್ಮೀಯ ಸಂಗಾತಿ, ಜನ ಮೆಚ್ಚಿದ, ಜಗ ಮೆಚ್ಚಿದ, ಭಾರತ ಮಾತೆಯ ಅಪ್ರತಿಮ ಪುತ್ರ.ನನ್ನ ಬದುಕಿನ ಸಾರ್ವಜನಿಕ ಹೋರಾಟದ ಮೊದಲ ವ್ಯಕ್ತಿ ಅನಂತ್ ಕುಮಾರ್ ಎಂದು ಎಂದು ನೆಚ್ಚಿನ ಗೆಳೆಯನನ್ನು ನೆನಪಿಸಿಕೊಂಡರು.

ಅನಂತಕುಮಾರ್ ಜತೆಗಿನ ವಿದ್ಯಾರ್ಥಿ ಜೀವನದ ದಿನಗಳ ನೆನಪು ಹಂಚಿಕೊಂಡ ಸಿಎಂ,  ನಮ್ಮಿಬ್ಬರ ಆತ್ಮೀಯತೆ ಬಗ್ಗೆ ಬೆಂಗಳೂರಿನ ರಾಜಕಾರಣಿಗಳಿಗೆ ಗೊತ್ತಿಲ್ಲ.ನಾವಿಬ್ಬರೂ ಕ್ಲಾಸ್ ಮೇಟ್.ನಾನು ತಡವಾಗಿ ಬಂದರೆ ಅವರು, ಅವರು ತಡವಾಗಿ ಬಂದರೆ ನಾನು ಜಾಗ ಇಡುತ್ತಿದ್ದೆವು,ಅಷ್ಟೂ ಆತ್ಮೀಯತೆ ಇತ್ತು. ತುರ್ತು ಪರಿಸ್ಥಿತಿ ಹೇರಿದಾಗ ಹುಬ್ಬಳ್ಳಿಯಲ್ಲಿ ಸ್ಟೂಡೆಂಟ್ಸ್ ಆಕ್ಷನ್ ಕಮಿಟಿ ಮಾಡಿ ಅನಂತ್ ಕುಮಾರ್ ಅವರ ನಾಯಕತ್ವದಲ್ಲಿ ಹೋರಾಟಕ್ಕಿಳಿದಿದ್ದೆವು. ಅವರು ಪಿಯುಸಿ ವಿದ್ಯಾರ್ಥಿಯಾಗಿದ್ದಾಗಲೇ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟಕ್ಕಿಳಿದರು.ಲಾಠಿ ಚಾರ್ಜ್ ಆಯಿತು ಪ್ರತಿಭಟನೆಯ ವೇಳೆ ಅವರನ್ನು ನನ್ನ ಕಣ್ಣೆದುರೇ ಪೊಲೀಸರು ಬಂಧಿಸಿದ್ದರು. ನಾಲ್ಕು ತಿಂಗಳ ಕಾಲ ಜೈಲಿನಲ್ಲಿದ್ದರು. ಅವರ ಒಂದು ವರ್ಷದ ವಿದ್ಯಾರ್ಥಿ ಜೀವನ ಹಾಳಾಯಿತು ಎಂದು ಹೋರಾಟದ ದಿನಗಳನ್ನು ನೆನಪು ಮಾಡಿಕೊಂಡರು.

ಆ ಸಂಧರ್ಭದಲ್ಲಿ ಅನಂತ್ ಕಾಶ್ಮೀರದಲ್ಲಿ ಭಾಷಣ ಮಾಡುತ್ತಿದ್ದರು. ನಾವು ಹುಬ್ಬಳ್ಳಿಯಲ್ಲಿದ್ದು, ಎಲ್ಲಿ ಕಾಶ್ಮೀರ ಅಂತ ಅಂದುಕೊಂಡಿದ್ದೆವು. ಈಗ ಅರ್ಥವಾಯಿತು, ಹೋರಾಟದ ಅನಿವಾರ್ಯತೆ ಎಂದರು.

Advertisement

ರಾಜ್ಯ ನೆಲ ಜಲ ವಿಚಾರಗಳಲ್ಲಿ ರಾಜ್ಯದ ಪರ ಗಟ್ಟಿ ನಿಲುವು ತಳೆದಿದ್ದ ಅನಂತಕುಮಾರ್

ಕೃಷ್ಣಾ, ಕಾವೇರಿ ಸೇರಿ ನೀರಾವರಿ ವಿವಾದಗಳಾಗಲಿ ಎಲ್ಲ ವಿಚಾರಗಳಲ್ಲಿ ಕನ್ನಡಕ್ಕೆ, ಕನ್ನಡದ ಪರವಾಗಿ ಗಟ್ಟಿ ನಿಲುವನ್ನು ಅನಂತ್ ಕುಮಾರ್ ಅವರು ಹೊಂದಿದ್ದರು. ಬೆಂಗಳೂರಿನ ಮೆಟ್ರೋ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗ, ಕೃಷ್ಣಾ ಮೇಲ್ದಂಡೆ ಯೋಜನೆ, ಕಾವೇರಿ ಜಲ ವಿಷಯದಲ್ಲಿ ಬಿಗಿ ನಿಲುವಿನಿಂದ ರಾಜ್ಯಕ್ಕೆ ಪರಿಹಾರ ಕೊಡಿಸುವಲ್ಲಿ ಅನಂತಕುಮಾರ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರು ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಕೇಂದ್ರದಿಂದ ಆಗಬೇಕಾದ ಬೆಂಗಳೂರಿನ ಹಾಗೂ ರಾಜ್ಯದ ಎಲ್ಲ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಹಕಾರ ನೀಡಿದ್ದರು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಅತ್ಯಂತ ಆತ್ಮೀಯ ಸ್ನೇಹಿತರಾಗಿದ್ದ ಅವರ ಸ್ಥಾನಮಾನಗಳು ನಮ್ಮೊಂದಿಗಿನ ಸ್ನೇಹವನ್ನು ಬದಲಾಯಿಸಿರಲಿಲ್ಲ. ಕೃಷ್ಣಾ ಟ್ರಿಬ್ಯುನಲ್ ವಿಚಾರದಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ನ್ಯಾಯ ಸಮ್ಮತವಾಗಿ ಕರ್ನಾಟಕದ ಪರವಾಗಿ ಹೋರಾಟ ಮಾಡಿ ಕರ್ನಾಟಕದ ಹಿತ ಕಾಪಾಡಿದ್ದಾರೆ. ಆ ಮೂಲಕ ರಾಜ್ಯದ ಆಪತ್ತನ್ನು ಅವರು ತಪ್ಪಿಸಿದರು ಎಂದರು.

ವರ್ಷ ಒಟ್ಟಿಗಿದ್ದರೂ, ಒಂದು ದಿನವೂ ದುಃಖಿತರಾಗಿ ಅಥವಾ ಚಿಂತಾಕ್ರಾಂತರಾಗಿ ಎಂದೂ ಇರಲಿಲ್ಲ. ಎಂಥಾ ಸ್ಥಿತಿ ಎದುರಾದರೂ ಸ್ಥಿತಪ್ರಜ್ಞತೆಯಿಂದ ಎಲ್ಲವನ್ನೂ ಎದುರಿಸುತ್ತಿದ್ದರು. ನಗುನಗುತ್ತಾ ಇರುತ್ತಿದ್ದರು. ಸಮಸ್ಯೆಗಳನ್ನು ಬಗೆಹರಿಸಲು ಏನು ಮಾಡಬೇಕೋ ಅದನ್ನು ಮಾಡಬೇಕು ಎನ್ನುತ್ತಿದ್ದರು . ಇನ್ನೊಬ್ಬರಿಗೆ ಊಟ ಹಾಕಿಸುವುದರಲ್ಲಿ ಅವರಿಗೆ ಬಹಳ ಆಸಕ್ತಿ. ನನ್ನ ಬಗ್ಗೆ ಬಹಳ ಪ್ರೀತಿ.ಮಂತ್ರಿ ಸ್ಥಾನ ನಮ್ಮ ಸಂಬಂಧವನ್ನು ಎಂದೂ ಬದಲಾಯಿಸಲಿಲ್ಲ ಎಂದು ಸ್ಮರಿಸಿದರು.

ಬೇರೆ ಬೇರೆ ಪಕ್ಷದಲ್ಲಿದ್ದೇವೆಯೂ, ನನಗೆ ಬಿಜೆಪಿಗೆ ಕರೆ ತರಲು ಗಾಳ ಹಾಕುತ್ತಲೇ ಇದ್ದ. ನಾನು ಆಗುವುದಿಲ್ಲ ಎಂದಾಗಲೂ ಆಶಾವಾದ ಬಿಡಲಿಲ್ಲ. ಕೊನೆಗೆ ಬಿಜೆಪಿ ಸೇರಿದಾಗ ನಿನ್ನ ಪ್ರೀತಿಯ ಗಾಳಕ್ಕೆ ಬಿದ್ದೆ ಎಂದೆ ಎಂದು ಪಕ್ಷ ಬದಲಾವಣೆಯ ದಿನಗಳನ್ನು ನೆನೆದರು.

ಎಲ್ಲ ಸ್ಥಿತಿಯಲ್ಲೂ ನಾಯಕತ್ವ ವಹಿಸುವುದು ಬಹಳ ಅಪರೂಪ. ಹತ್ತೇ ಜನ ಇದ್ದರೂ, ಹತ್ತು ಲಕ್ಷ ಜನ ಇದ್ದರೂ ನಾಯಕತ್ವ ವಹಿಸಿದವರು ಅನಂತ್ ಕುಮಾರ್ ಅವರು ಎಂದರು.

ಉತ್ತಮ ಆಡಳಿತಗಾರನನ್ನ ಕಳೆದುಕೊಂಡಿದ್ದೇವೆ. ನನಗೆ ಅವರು ಇಲ್ಲ ಅನಿಸುತ್ತಿಲ್ಲ. ನಾವು ದೊಡ್ಡ ಶಕ್ತಿ ಕಳೆದುಕೊಂಡಿದ್ದೇವೆ. ಅವರು ಮಾಡಿರುವ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುವ ಎಂದರು.

ಅವರ ಶ್ರೀಮತಿ ತೇಜಸ್ವಿನಿ ಅವರೂ ಉತ್ತಮ ಕೆಲಸಗಳನ್ನು ಅದಮ್ಯ ಚೇತನ, ಸಸ್ಯಾಗ್ರಹ ಸೇವಾ ಸಂಸ್ಥೆಗಳ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಅನಂತ್ ಕುಮಾರ್ ಅವರ ಸ್ಮಾರಕಕ್ಕಾಗಿ ಸರಕಾರ ಸಂಪೂರ್ಣವಾಗಿ ತೇಜಸ್ವಿನಿ ಅವರ ಜತೆ ನಿಲ್ಲುತ್ತದೆ ಎಂದರು.

ಅವರೊಂದಿಗಿನ ನೆನಪು ಸದಾ ಜೀವಂತವಾಗಿರುತ್ತದೆ. ಅನಂತ್ ಕುಮಾರ್ ಅವರನ್ನು ಕರ್ನಾಟಕ ಎಂದೂ ಮರೆಯಲು ಸಾಧ್ಯವಿಲ್ಲ. ಎಂದರು.

Advertisement

Udayavani is now on Telegram. Click here to join our channel and stay updated with the latest news.

Next