ಕೋಸ್ಟಲ್‌ನಲ್ಲಿ ತುಳು ಸಿನೆಮಾ ಸದ್ದು ಮಾಡುತ್ತಿಲ್ಲ ಎಂಬ ಸಾಮಾನ್ಯ ಅಪವಾದ ಇತ್ತೀಚೆಗೆ ಕೊಂಚ ದೂರವಾದಂತಿದೆ. ಬೆನ್ನು ಬೆನ್ನಿಗೆ ಬಂದ ಒಂದೊಂದು ಸಿನೆಮಾಗಳು ಈಗ ತುಳುವರನ್ನು ಥಿಯೇಟರ್‌ಗೆ ಕರೆ ತರುತ್ತಿದೆ. ಹೀಗಾಗಿಯೇ ಕಳೆದ 2-3 ಸಿನೆಮಾಗಳ ಬಗ್ಗೆ ಪ್ರೇಕ್ಷಕರು ಮಾತನಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ನಾಡಿದ್ದು ಆ.23ಕ್ಕೆ ತೆರೆ ಕಾಣುವ “ಅನರ್ ಕಲಿ’ ಕರಾವಳಿಗರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ.
ಲಕುಮಿ ಸಿನಿ ಕ್ರಿಯೇಶನ್ ಮತ್ತು ಲೋ ಬಜೆಟ್ ಪ್ರೊಡಕ್ಷನ್ ನಿರ್ಮಾಣದಲ್ಲಿ ಹರ್ಷಿತ್ ಸೋಮೇಶ್ವರ ನಿರ್ದೇಶನದಲ್ಲಿ “ಅನರ್‌ಕಲಿ’ ರೂಪುಗೊಂಡಿದೆ. ಪೊಳಲಿ, ಕಟೀಲು, ಸೋಮೇಶ್ವರ, ಉಳ್ಳಾಲ, ಉಳಿಯ, ನೀರುಮಾರ್ಗ ಹಾಗೂ ಕಳಸ ಸಹಿತ ವಿವಿಧ ಸ್ಥಳಗಳಲ್ಲಿ 18 ದಿನಗಳಲ್ಲಿ ಶೂಟಿಂಗ್ ನಡೆಸಲಾಗಿದೆ. ಸೀಮಿತ ಬಜೆಟ್‌ನಲ್ಲಿ ಮಾಡಿದ ರಿಚ್ ಸಿನೆಮಾ ಎಂದೇ ಸದ್ಯ ಮಾತು ಕೇಳಿಬರುತ್ತಿದೆ. ಈಗಾಗಲೇ ನಡೆದ ಇದರ ಪ್ರೀಮಿಯರ್ ಶೋ ಹಲವರ ಮೆಚ್ಚುಗೆ ಪಡೆದದ್ದು ವಿಶೇಷ.
ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ರವಿ ರಾಮಕುಂಜ, ರಂಜನ್ ಬೋಳೂರು, ದೀಪಕ್ ರೈ ಪಾಣಾಜೆ, ಪುಷ್ಪ ರಾಜ್ ಸಹಿತ ಹಲವರು ಈ ಸಿನೆಮಾದಲ್ಲಿ ಕಾಮಿಡಿ ಕಮಾಲ್ ಮಾಡಿದ್ದಾರೆ. ದೇವದಾಸ್ ಕಾಪಿಕಾಡ್ ಗರಡಿಯಲ್ಲಿ ಪಳಗಿದ ಶೋಭರಾಜ್ ಈ ಸಿನೆಮಾದಲ್ಲಿ ಹೊಸ ಗೆಟಪ್‌ನಲ್ಲಿದ್ದರೆ, ಆರ್‌ಜೆ ಮಧುರ ಅವರು ಕ್ಯೂಟ್ ಆಗಿ ಮೋಡಿ ಮಾಡಿದ್ದಾರೆ.
“ಧರ್ಮದೈವ’ ಸಿನೆಮಾ ಈಗ 50ನೇ ದಿನದತ್ತ ಹೆಜ್ಜೆ ಇಟ್ಟಿರುವುದು ನಿರ್ಮಾಪಕರಲ್ಲಿ ಮಂದಹಾಸ ಮೂಡಿಸಿದೆ. ಹೀಗಾಗಿ ಇದೇ ತಂಡ ಹೊಸ ಸಿನೆಮಾ ಮಾಡಲು ಸಿದ್ಧತೆಯಲ್ಲಿ ತೊಡಗಿಕೊಂಡಿದೆ. “ತುಡರ್’ ಸಿನೆಮಾ ಈಗಾಗಲೇ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ!
ಅರ್ಜುನ್ ಕಾಪಿಕಾಡ್ ಅಭಿನಯದ “ಕಲ್ಜಿಗ’ ಸಿನೆಮಾ ಸೆ.13ರಂದು ರಿಲೀಸ್ ಆಗುವುದು ಪಕ್ಕಾ ಆಗಿದೆ. ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ತಂಡದ “ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ಸಿನೆಮಾ ಅ.31ರಂದು ಬಿಡುಗಡೆ ಆಗಲಿದೆ. ಇವೆರಡು ನಿರೀಕ್ಷೆಯ ಪಟ್ಟಿಯಲ್ಲಿದೆ. ರೂಪೇಶ್ ಶೆಟ್ಟಿ ನಿರ್ದೇಶನದ ಹೊಸ ಸಿನೆಮಾದ ಟೈಟಲ್ ರವಿವಾರ ಸಂಜೆ ಬಿಡುಗಡೆಯಾಗಲಿದೆ. ಅನೀಶ್ ಪೂಜಾರಿ ವೇಣೂರು ನಿರ್ದೇಶನ “ದಸ್ಕತ್’ ಹೊಸ ತುಳು ಸಿನೆಮಾ ಕೆಲವೇ ದಿನದಲ್ಲಿ ಸೆಟ್ಟೇರಲಿದೆ.
ಅಂದಹಾಗೆ, ನವೆಂಬರ್-ಡಿಸೆಂಬರ್ ಕಾಲಕ್ಕೆ ಹಲವು ತುಳು ಸಿನೆಮಾಗಳು ಶೂಟಿಂಗ್ ಕಾಣಲಿರುವುದು ಮತ್ತೂಂದು ಸುದ್ದಿ. ಅಂತೂ-ಇಂತೂ ನಾಡಿದ್ದಿನ “ಅನರ್‌ಕಲಿ’ ಬಳಿಕ ಬೇರೆ ಬೇರೆ ಸಿನೆಮಾಗಳ ಮೂಲಕ ಕೋಸ್ಟಲ್‌ವುಡ್‌ಗೆ ಮತ್ತೂಮ್ಮೆ ಶುಕ್ರದೆಸೆ ಆರಂಭವಾಗುವ ಲಕ್ಷಣ ಕಂಡುಬರುತ್ತಿದೆ.
–ದಿನೇಶ್ ಇರಾ