Advertisement

ಹಿಂದಿನ ಬಜೆಟ್‌ ಖರ್ಚಿನ ಶ್ವೇತಪತ್ರಕ್ಕೆ ಅನಂತ್‌ ಆಗ್ರಹ

01:14 PM Feb 18, 2018 | Team Udayavani |

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2017-18ನೇ ಸಾಲಿನ ಬಜೆಟ್‌ನಲ್ಲಿ ಮೀಸಲಿರಿಸಿದ್ದ ಹಣದಲ್ಲಿ ಯಾವ್ಯಾವ ಯೋಜನೆಗಳಿಗೆ ಎಷ್ಟು ಹಣ ಖರ್ಚು ಮಾಡಲಾಗಿದೆ ಎಂಬ ಬಗ್ಗೆ ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್‌ ಆಗ್ರಹಿಸಿದರು.

Advertisement

ಮಹಾರಾಜ ಕಾಲೇಜು ಮೈದಾನದಲ್ಲಿ ಸೋಮವಾರ ಪ್ರಧಾನಿ ನರೇಂದ್ರಮೋದಿ ಭಾಗವಹಿಸುವ ಬಿಜೆಪಿ ಸಮಾವೇಶದ ಸಿದ್ಧತೆ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಸರ್ಕಾರದ ಅವಧಿ ಇನ್ನು ಕೇವಲ ಒಂದು ತಿಂಗಳು ಮಾತ್ರ ಇದ್ದರೂ ಪ್ರಸ್ತುತ ಬಜೆಟ್‌ನಲ್ಲಿ ಮೀಸಲಿರಿಸಿದ್ದ ಹಣದಲ್ಲಿ ಶೇ.50ರಷ್ಟನ್ನು ಖರ್ಚು ಮಾಡಿಲ್ಲ.

ಇನ್ನುಳಿದ ಒಂದು ತಿಂಗಳಲ್ಲಿ ಶೇ.50ರಷ್ಟು ಹಣ ಖರ್ಚು ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಈ ಬಗ್ಗೆ ಶ್ವೇತಪತ್ರ ಹೊರಡಿಸುವ ಮೂಲಕ ರಾಜ್ಯದ ಜನತೆಗೆ ವಸ್ತುಸ್ಥಿತಿ ವಿವರಿಸಲಿ ಎಂದರು. ಕಳೆದ ಬಜೆಟ್‌ನ ಹಣವನ್ನೇ ಖರ್ಚು ಮಾಡದ ಈ ಸರ್ಕಾರ 2018-19ನೇ ಸಾಲಿನ ಬಜೆಟ್‌ ಮಂಡಿಸಿ, ಸುಳ್ಳುಗಳನ್ನು ಘೋಷಣೆ ಮಾಡಿದೆ ಎಂದು ಟೀಕಿಸಿದರು.

ಶೇ.30ರ ಸರ್ಕಾರ: ಸಿದ್ದರಾಮಯ್ಯ ಅವರ ಸರ್ಕಾರ 10 ಪರ್ಸೆಂಟ್‌ ಸರ್ಕಾರ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೂರಿದ್ದರು. ಆದರೆ, ರಾಜ್ಯದ ಜನತೆ ಇದು 10ಪರ್ಸೆಂಟ್‌ ಸರ್ಕಾರವಲ್ಲ, ಬದಲಿಗೆ 30ಪರ್ಸೆಂಟ್‌ ಸರ್ಕಾರ ಎಂದು ಹೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಮೋದಿ ಅವರು ಶೇ.10ರ ಕಮೀಷನ್‌ ಸರ್ಕಾರ ಎಂದು ಆರೋಪಿಸಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆ ಕೇಳುತ್ತಿದ್ದಾರೆ.

ಆದರೆ, ಸರ್ಕಾರಿ ಕಚೇರಿಗಳು, ಮರಳು, ಕರಿಕಲ್ಲು ಕ್ವಾರಿ, ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳು, ಹೆಂಡದ ಗುತ್ತಿಗೆ ಹೀಗೆ ಪ್ರತಿಯೊಂದರಲ್ಲೂ ಸಿದ್ದರಾಮಯ್ಯ ಸರ್ಕಾರ ಶೇ.30ರಷ್ಟು ಕಮಿಷನ್‌ ಹೊಡೆದಿದೆ ಎಂಬುದಕ್ಕೆ ರಾಜ್ಯದ ಜನರೇ ದಾಖಲೆ ಕೊಡುತ್ತಾರೆ ಎಂದು ತಿರುಗೇಟು ನೀಡಿದರು.

Advertisement

ಲಕ್ಷ ಜನ ಭಾಗಿ: ಮೈಸೂರಿನಲ್ಲಿ ಸೋಮವಾರ ನಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಯಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದು, ಇದೊಂದು ಐತಿಹಾಸಿಕ ರ್ಯಾಲಿ ಆಗಲಿದೆ ಎಂದು ತಿಳಿಸಿದರು. ಮಾಜಿ ಸಚಿವರಾದ ಎಸ್‌.ಎ.ರಾಮದಾಸ್‌, ಅರವಿಂದ ಲಿಂಬಾವಳಿ, ವಿ.ಸೋಮಣ್ಣ, ಸಂಸದ ಪ್ರತಾಪ್‌ ಸಿಂಹ, ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಶಿವಣ್ಣ, ನಗರಾಧ್ಯಕ್ಷ ಡಾ.ಬಿ.ಎಚ್‌.ಮಂಜುನಾಥ್‌ ಮುಂತಾದವರು ಹಾಜರಿದ್ದರು.

ಕರ್ನಾಟಕಕ್ಕೆ ಕಾವೇರಿ ನ್ಯಾಯ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಲೇ ಇತ್ತು. ಕಳೆದ 30 ವರ್ಷಗಳ ಹೋರಾಟದ ಬಳಿಕ ಈಗ ರಾಜ್ಯಕ್ಕೆ ನ್ಯಾಯ ದೊರೆತಿದೆ. ತಮಿಳುನಾಡಿಗೆ 20 ಟಿಎಂಸಿ ಅಂತರ್ಜಲ ಬಳಕೆ ಮಾಡಲು ಹೇಳಿರುವ ಸುಪ್ರೀಂ ಕೋರ್ಟ್‌, ಬೆಂಗಳೂರಿಗೆ 4.5 ಟಿಎಂಸಿ ನೀರು ನೀಡಿರುವುದು ಸಂತಸ ತಂದಿದೆ. ಅಲ್ಲದೆ, ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ವಿಚಾರವನ್ನು ಸಂಸತ್ತು ಹಾಗೂ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬಿಟ್ಟಿರುವುದು ಉತ್ತಮವಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್‌ ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next