ಬೆಂಗಳೂರು: “ಮಹಾತ್ಮ ಗಾಂಧಿ ಅವರ ಬಗ್ಗೆ ಬಿಜೆಪಿಗೆ ನಿಜವಾಗಿಯೂ ಭಕ್ತಿ ಮತ್ತು ಗೌರವ ಇದ್ದರೆ, ಸಂಸದ ಅನಂತಕುಮಾರ್ ಹೆಗಡೆ ಅವರನ್ನು ತಕ್ಷಣ ಸಂಸತ್ತಿನಿಂದ ಹೊರಹಾಕುವುದರ ಜತೆಗೆ ಸಂಸದ ಸ್ಥಾನ ವಜಾಗೊಳಿಸಬೇಕು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ತಿಳಿಸಿದರು.
ಗಾಂಧಿ ಜಗ ಮೆಚ್ಚಿದ ನಾಯಕರು. ಅಂತಹವರ ಬಗ್ಗೆ ಅನಂತಕುಮಾರ್ ಹೆಗಡೆ ಹೇಳಿಕೆ ಖಂಡನೀಯ. ಆಗಾಗ್ಗೆ ಇವರ ವಿವಾದಾತ್ಮಕ ಹೇಳಿಕೆ ಗಮನಿಸಿದರೆ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವಂತಿದೆ. ಗಾಂಧಿ ಬಗ್ಗೆ ಬಿಜೆಪಿಗೆ ಭಕ್ತಿ ಇದ್ದರೆ, ಈ ರೀತಿ ಹೇಳಿಕೆ ನೀಡುವ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಮುಂದೈತೆ ಮಾರಿಹಬ್ಬ: ಆಡಳಿತ ಪಕ್ಷದಲ್ಲಿ ಸಾಕಷ್ಟು ಒತ್ತಡಗಳಿವೆ. ಯಾವ ಕಾರಣಕ್ಕೆ ಈ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಕೆಲ ಶಾಸಕರು ರಾಜೀನಾಮೆ ಕೊಟ್ಟಿದ್ದರು. ಆಗ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಪ್ರಸ್ತುತ ಸರ್ಕಾರದಲ್ಲೂ ಆ ಶಾಸಕರು ಅಂತಹದ್ದೇ ಸ್ಥಿತಿ ಎದುರಿಸುತ್ತಿದ್ದಾರೆ.
ಹೀಗಾಗಿ ಸಂಪುಟ ವಿಸ್ತರಣೆಗೆ ಸಜ್ಜಾಗುತ್ತಿರುವ ಬಿಜೆಪಿಗೆ ಮುಂದೆ ಮಾರಿ ಹಬ್ಬ ಕಾದಿದೆ ಎಂದು ಹೇಳಿದರು. ಈಗ ನಮ್ಮ ಪಕ್ಷದಿಂದ ಬಿಜೆಪಿಗೆ ಹೋದವರ ಪರಿಸ್ಥಿತಿ ಶೋಚನೀಯ ಆಗಿದೆ. ಏನೂ ಮಾಡಲಾಗದೆ, ಮತ್ತೂಂದು ಪುಸ್ತಕ ಬರೆಯಲು ಮಾಜಿ ಶಾಸಕರು ಸಜ್ಜಾಗುತ್ತಿದ್ದಾರೆ. ಈಗ ಅವರಿಗೆ ಸಾಕಷ್ಟು ಸಮ ಯವೂ ಸಿಕ್ಕಿದೆ. ಬರವಣಿಗೆ ಮುಂದುವರಿಸಲಿ ಎಂದು ಮಾಜಿ ಶಾಸಕ ಎಚ್.ವಿಶ್ವನಾಥ್ ವಿರುದ್ಧ ಕುಟುಕಿದರು.
ಕಾರ್ಯಕಾರಣಿ ಸಭೆ: ನಗರದಲ್ಲಿ 2 ದಿನ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಯಲಿದೆ. ಫೆ.10ರಂದು ಪಕ್ಷದ ಕಚೇರಿಯಲ್ಲಿ ಮತ್ತು 11ರಂದು ಅರಮನೆ ಮೈದಾನದಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಎಚ್.ಕೆ.ಕುಮಾರಸ್ವಾಮಿ ತಿಳಿಸಿದರು.