ಬೆಂಗಳೂರು: ಅದಮ್ಯ ಚೇತನ ಸಂಸ್ಥೆ ವತಿಯಿಂದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಡಿ.30ರಿಂದ ಜ.1ರವರೆಗೆ ಅನಂತ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ಡಾ.ತೇಜಸ್ವಿನಿ ಅನಂತಕುಮಾರ್, ಪ್ರತಿ ವರ್ಷ ಹೊಸ ವರ್ಷದ ಸ್ವಾಗತಕ್ಕಾಗಿ ಸೇವಾ ಉತ್ಸವ ಹಮ್ಮಿಕೊಳ್ಳಲಾಗುತ್ತಿತ್ತು.
ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತಕುಮಾರ್ ಸ್ಮರಣಾರ್ಥ ಈ ವರ್ಷ ಸೇವಾ ಉತ್ಸವದ ಬದಲಿಗೆ “ಅನಂತ ನಮನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಚಿತ್ರ ಮತ್ತು ಸಂಗೀತದ ಮೂಲಕ ಅನಂತಕುಮಾರ್ ಅವರನ್ನು ಸ್ಮರಿಸಿಕೊಳ್ಳಲಾಗುವುದು ಎಂದರು.
ಡಿ.30ರಂದು ಸಂಜೆ 5 ಗಂಟೆಗೆ ಹಮ್ಮಿಕೊಂಡಿರುವ ಚಿತ್ರ ನಮನಕ್ಕೆ ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಚಾಲನೆ ನೀಡುವರು. ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಭಾಗವಹಿಸುವರು. ಡಿ.31ರಂದು ಸಂಜೆ 5.30ಕ್ಕೆ ಗೀತ ನುಡಿ ನಮನಕ್ಕೆ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದಜಿ ಮಹಾರಾಜ್ ಚಾಲನೆ ನೀಡಲಿದ್ದು,
ಶಾಸಕರಾದ ಆರ್.ಅಶೋಕ್, ರವಿ ಸುಬ್ರಹ್ಮಣ್ಯ, ಉದಯ್ ಗರುಡಾಚಾರ್ ಭಾಗವಹಿಸುವರು. ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ಕವಿ ಡಾ.ದೊಡ್ಡರಂಗೇಗೌಡ, ಸಾಹಿತಿ ಡಾ.ಸೋಮಶೇಖರ್, ಶಿಕ್ಷಣ ತಜ್ಞ ಪ್ರೊ.ಪಿ.ವಿ.ಕೃಷ್ಣ ಭಟ್, ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ ಮತ್ತಿತರರು ನುಡಿ ನಮನ ಸಲ್ಲಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ರಾತ್ರಿ 8 ಗಂಟೆಗೆ ಪ್ರೊ.ಕೃಷ್ಣೇಗೌಡ ಅವರಿಂದ ನುಡಿ ನಮನ, 9 ಗಂಟೆಗೆ ವೀಣಾ ವಾದಕಿ ವೀಣಾ ವಾರುಣಿ, ಲಯವಾದ್ಯಗಾರ ಆನೂರು ಅನಂತಕೃಷ್ಣ ಶರ್ಮ ಮತ್ತು ತಂಡದವರಿಂದ ಸಂಗೀತ ನಮನ ನಡೆಯಲಿದೆ. ಮಧ್ಯರಾತ್ರಿ 12 ಗಂಟೆಗೆ ಹೊಸ ವರ್ಷದ ಸಂಕಲ್ಪ ಮಾಡಿ ವಂದೇ ಮಾತರಂ ಗೀತೆ ಹಾಡಲಾಗುವುದು ಎಂದು ವಿವರಿಸಿದರು.
ಜ.1ರಂದು ಸಂಜೆ 3 ಗಂಟೆಗೆ ಓ ನನ್ನ ಚೇತನ ಆಗು ನೀ ಅನಿಕೇತನ ಗೀತಾಗಾಯನ ನಡೆಯಲಿದ್ದು, ಸಂಜೆ 4 ಗಂಟೆಗೆ ಸಾವಿರಾರು ಮಂದಿ ಏಕಕಾಲದಲ್ಲಿ ವಂದೇ ಮಾತರಂ ಗೀತೆ ಹಾಡಲಿದ್ದಾರೆ. ನಂತರ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಿಂದ ಆಶೀರ್ವಚನ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.