Advertisement

ಪ್ರಧಾನಿ ಮೋದಿಗೆ ಮತ್ತೆ “ಆನಂದ”ದ ಆತಿಥ್ಯ

12:22 AM Jun 26, 2023 | Team Udayavani |

ಕುಂದಾಪುರ: ಮೂರು ದಿನಗಳ ಕಾಲ ಅಮೆರಿಕ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಸ್ಯಾಹಾರ ತಯಾರಿಸಿಕೊಡುವ ಜವಾಬ್ದಾರಿ ಕುಂದಾಪುರದ ಆಲೂರು ಮೂಲದ ಅನಿವಾಸಿ ಭಾರತೀಯ ಹೊಟೇಲ್‌ ಉದ್ಯಮಿ ಆನಂದ್‌ ಪೂಜಾರಿ ಅವರದಾಗಿತ್ತು.

Advertisement

ಮೋದಿ ಅವರು ವಾಷಿಂಗ್ಟನ್‌ ಡಿ.ಸಿ.ಯಲ್ಲಿ ವಾಸ್ತವ್ಯವಿದ್ದ ಮೂರು ದಿನ ಊಟೋಪಚಾರದ ನೇತೃತ್ವ ವಹಿಸಿದವರು ಆಲೂರು ಆನಂದ ಪೂಜಾರಿ. ಆ ಮೂಲಕ ಆನಂದ್‌ ಅವರು ಮೋದಿ ಅವರಿಗೆ ಐದನೇ ಬಾರಿಗೆ ಊಟದ ಆತಿಥ್ಯದ ಜವಾಬ್ದಾರಿ ನೋಡಿಕೊಂಡಂತಾಗಿದೆ.

ವಾಷಿಂಗ್ಟನ್‌ ಡಿಸಿಯಲ್ಲಿ 35 ವರ್ಷಗಳಿಂದ ನೆಲೆಸಿರುವ ಆನಂದ ಪೂಜಾರಿ ಮತ್ತು ಪತ್ನಿ ಸುಮಿತಾ ದಂಪತಿ 25 ವರ್ಷಗಳಿಗೂ ಹೆಚ್ಚು ಕಾಲದಿಂದ ವುಡ್‌ಲ್ಯಾಂಡ್ಸ್‌ ಹೊಟೇಲನ್ನು ನಡೆಸುತ್ತಿದ್ದಾರೆ. ಇವರು ಬೈಂದೂರು ತಾಲೂಕಿನ ಆಲೂರು ಗ್ರಾಮದ ಕಲ್ಲಂಗಡಿ ಮನೆಯ ನಿವಾಸಿ ಬಡಿಯ ಪೂಜಾರಿ ಹಾಗೂ ಗಿರಿಜಾ ದಂಪತಿಯ ಪುತ್ರ.

ವಾಷಿಂಗ್ಟನ್‌ ಡಿಸಿಯಲ್ಲಿಯೇ ಇವರ ಹೊಟೇಲ್‌ ಇರುವುದರಿಂದ ಭಾರತದಿಂದ ಅಮೆರಿಕಕ್ಕೆ ಕೇಂದ್ರ ಸಚಿವರ ಸಹಿತ ಗಣ್ಯರು ಭೇಟಿ ನೀಡಿದರೆ, ಅವರಿಗೆಲ್ಲ ಆತಿಥ್ಯ ಇವರದೇ ಆಗಿದೆ.

2023 ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವಾದ್ದರಿಂದ ಮೊದಲ ದಿನ ರಾತ್ರಿಯೂಟಕ್ಕೆ ಸಿರಿಧಾನ್ಯಗಳದೇ ಬಿಸಿಬೇಳೆ ಬಾತ್‌ ಮಾಡಿದ್ದರು. ಉಳಿದಂತೆ ಮೋದಿಯವರು ಗುಜರಾತಿ ಶೈಲಿಯಲ್ಲಿ ಕಿಚಡಿ, ಢೋಕ್ಲಾ, ಹಸಿ ಅಥವಾ ಬೇಯಿಸಿದ ತಾಜಾ ತರಕಾರಿಗಳು, ಹಣ್ಣುಗಳು ಇತ್ಯಾದಿಯನ್ನಷ್ಟೇ ಬಯಸುವುದರಿಂದ ಮತ್ತು ದ. ಭಾರತೀಯ ವಿಶೇಷಗಳಾದ ಇಡ್ಲಿ-ಚಟ್ನಿ, ವಡೆ-ಸಾಂಬಾರ್‌ ಸಹ ಅವರಿಗೆ ಇಷ್ಟವೇ ಆದ್ದರಿಂದ, ಪುನರಾವರ್ತನೆ ಆಗದಂತೆ ನೋಡಿಕೊಂಡು ಶುದ್ಧ ಸಸ್ಯಹಾರ ಆಹಾರವನ್ನೇ ಒದಗಿಸಿದ್ದಾರೆ. “ತರಕಾರಿಗಳೆಲ್ಲ ಭಾರತದವೇ ಆಗಬೇಕೆಂದು ಎಲ್ಲೆಲ್ಲಿಂದ ಹುಡುಕಿ ತರುವ ಕಷ್ಟ ತಗೋಬೇಡಿ. ಸ್ಥಳೀಯವಾಗಿ ಬೆಳೆದ, ಇದುವರೆಗೆ ನನಗೆ ಅಪರಿಚಿತ ತರಕಾರಿಗಳಿದ್ದರೆ ದಯವಿಟ್ಟು ಅವುಗಳನ್ನೇ ಬಳಸಿ” ಎಂದು ಮೋದಿಯವರು ಸೂಚನೆ ಕೊಟ್ಟಿದ್ದರು ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next