ಆನಂದಪುರ: ಹೊಸಗುಂದ ನಮ್ಮ ಭಾರತೀಯ ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರವನ್ನು ಸಂರಕ್ಷಿಸುವ ಪುಣ್ಯಕ್ಷೇತ್ರವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಸಮೀಪದ ಹೊಸಗುಂದ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್‌ನಿಂದ ಆಯೋಜಿಸಿದ್ದ ಹೊಸಗುಂದ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾವಿರಾರು ವರ್ಷಗಳ ಇತಿಹಾಸವಿರುವ ಈ ದೇವಾಲಯವು ರಾಜ- ಮಹಾ ರಾಜರ ಕಾಲದಿಂದಲೂ ಉತ್ಸವಕ್ಕೆ ಹೆಸರುವಾಸಿಯಾಗಿದೆ. ಮತ್ತೂಮ್ಮೆ ಪ್ರಥಮ ಬಾರಿಗೆ ಇಂತಹ ಉತ್ಸವ ನಡೆಯುತ್ತಿರುವುದು ಜಿಲ್ಲೆಗೆ ಹೆಮ್ಮೆಯ ವಿಚಾರ ಎಂದರು.
ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಪರಿಸರದ ಉಳಿವಿನೊಂದಿಗೆ ಧಾರ್ಮಿಕ ಕೇಂದ್ರಗಳು ಹಾಗೂ ಪ್ರವಾಸಿ ತಾಣಗಳ ಅಭಿವೃದ್ಧಿಯಾಗಬೇಕು. ಇಂತಹ ಕಾರ್ಯಗಳಿಗೆ ಎಲ್ಲರ ಸಹಕಾರ ಮುಖ್ಯ ಎಂದರು. ಸಿ.ಎಂ.ಎನ್. ಶಾಸ್ತ್ರೀ ಮಾತನಾಡಿ, ಇದು ಪ್ರಥಮ ಉತ್ಸವವಾಗಿದ್ದು ಮುಂದಿನ ದಿನಗಳಲ್ಲಿ 7 ದಿನಗಳ ಉತ್ಸವವಾಗುವಂತೆ ಶೃಂಗೇರಿ ಪೀಠದ ಆಲೋಚನೆ ಇದೆ ಎಂದರು.
ಕಾರ್ಯಕ್ರಮದಲ್ಲಿ ನವದೆಹಲಿಯ ಸರ್ವಾನಂದ ಸರಸ್ವತಿ ಸ್ವಾಮಿಗಳು, ಪದ್ಮಶ್ರೀ ಡಾ| ವಿ.ಆರ್. ಗೌರಿಶಂಕರ್, ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಸಂಸ್ಥಾಪಕ ಸಿ.ಎಂ.ಎನ್. ಶಾಸ್ತ್ರೀ , ಎಂಎಲ್‌ಸಿ ಪ್ರಸನ್ನಕುಮಾರ್, ಕೃಷಿ ಮತ್ತು ತೋಟಗಾರಿಕಾ ವಿವಿ ಕುಲಪತಿ ಡಾ| ಎಂ. ನಾಯ್ಕ , ಸಾವಯವ ಕೃಷಿ ಮಿಷನ್ ಅಧ್ಯಕ್ಷ ಆನಂದ್, ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷ ಟಾಕಪ್ಪ ಕಣ್ಣೂರು, ಶೋಭಾ ಶಾಸ್ತ್ರೀ , ತಾಪಂ ಉಪಾಧ್ಯಕ್ಷ ಅಶೋಕ್, ಹಾಸ್ಯಗಾರ ಪ್ರಾಣೇಶ್, ಜಿಪಂ ಸದಸ್ಯ ಭೀಮನೇರಿ ಶಿವಪ್ಪ, ಹೊಸೂರು ಗ್ರಾಪಂ ಅಧ್ಯಕ್ಷ ಕೃಷ್ಣವೇಣಿ ನಾಗಪ್ಪ, ಕಲಸೆ ಚಂದ್ರಪ್ಪ, ತಾಪಂ ಸದಸ್ಯೆ ಜ್ಯೋತಿ ಕೋವಿ, ಗಿರೀಶ್ ಕೋವಿ ಮತ್ತಿತರರು ಇದ್ದರು.