Advertisement

ಅಮೆರಿಕದಲ್ಲಿ ಮೋದಿಗೆ ಆಲೂರಿನ ಆನಂದ ಪೂಜಾರಿ ಆತಿಥ್ಯ! ಇಡ್ಲಿ, ಸಾಂಬಾರ್‌ ಮೆಚ್ಚಿದ ಪ್ರಧಾನಿ

02:15 AM Sep 26, 2021 | Team Udayavani |

ಕುಂದಾಪುರ : ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಾಷಿಂಗ್ಟನ್‌ನಲ್ಲಿದ್ದ ಮೂರು ದಿನಗಳ ಕಾಲ ಊಟೋಪಚಾರ ಸಹಿತ ಆತಿಥ್ಯದ ನೇತೃತ್ವ ವಹಿಸಿದವರು ಕುಂದಾಪುರದ ಆಲೂರು ಮೂಲದ ಅನಿವಾಸಿ ಭಾರತೀಯ ಹೋಟೆಲ್‌ ಉದ್ಯಮಿ ಆನಂದ ಪೂಜಾರಿ ಅವರು.

Advertisement

ವಾಷಿಂಗ್ಟನ್‌ ಡಿಸಿಯಲ್ಲಿ 35 ವರ್ಷಗಳಿಂದ ನೆಲೆಸಿರುವ ಆನಂದ ಪೂಜಾರಿ ಮತ್ತು ಪತ್ನಿ ಸುಮಿತಾ ದಂಪತಿ 25 ವರ್ಷಗಳಿಂದ ವುಡ್‌ಲ್ಯಾಂಡ್ಸ್‌ ಹೊಟೇಲನ್ನು ನಡೆಸುತ್ತಿದ್ದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಅವಕಾಶ ಪಡೆದಿದ್ದಾರೆ.

ಅವರು ಬೈಂದೂರು ತಾಲೂಕಿನ ಆಲೂರು ಗ್ರಾಮದ ಕಲ್ಲಂಗಡಿ ಮನೆಯ ನಿವಾಸಿ ಬಡಿಯ ಪೂಜಾರಿ ಹಾಗೂ ಗಿರಿಜಾ ದಂಪತಿಯ ಪುತ್ರ. ಅಮೆರಿಕದಲ್ಲಿ ನೆಲೆಸಿದ್ದರೂ ಊರಿಗೆ ಆಗಾಗ ಬರುತ್ತಿದ್ದಾರೆ. ಕೋವಿಡ್‌, ಲಾಕ್‌ಡೌನ್‌ ಕಾರಣದಿಂದ ಇತ್ತೀಚೆಗೆ ಬರಲಾಗಿಲ್ಲ. ಮೂರು ವರ್ಷದ ಹಿಂದೆ ಬಂದು ಹೋಗಿದ್ದರು.

ಇವರದೇ ಆತಿಥ್ಯ: ಭಾರತದಿಂದ ಅಮೆರಿಕಕ್ಕೆ ಕೇಂದ್ರ ಸಚಿವರ ಸಹಿತ ಗಣ್ಯರು ಭೇಟಿ ನೀಡಿದರೆ, ಅವರಿಗೆಲ್ಲ ಇವರದೇ ಆತಿಥ್ಯ. ಪ್ರಧಾನಿಯವರಿಗೆ ಇದು ಆನಂದ ಪೂಜಾರಿ ನೇತೃತ್ವದ ತಂಡದ ಮೂರನೇ ಆತಿಥ್ಯವಾಗಿದೆ. ಮೋದಿ ಅವರನ್ನು ಆನಂದ ಪೂಜಾರಿ ದಂಪತಿ ಇದು ನಾಲ್ಕನೇ ಬಾರಿಗೆ ಭೇಟಿಯಾಗುತ್ತಿರುವುದು.

ಇಡ್ಲಿ, ಸಾಂಬಾರ್‌ ಮೆಚ್ಚಿದ ಮೋದಿ
ಪ್ರಧಾನಿ ಮೋದಿಯವರು ಅಮೆರಿಕದಲ್ಲಿದ್ದರೂ ಭಾರತೀಯ ಶೈಲಿಯ ಊಟಕ್ಕೆ ಆದ್ಯತೆ ನೀಡುತ್ತಿದ್ದು, ಅದರಲ್ಲೂ ದಕ್ಷಿಣ ಭಾರತೀಯ ಖಾದ್ಯಗಳಿಗೆ ಮಾರುಹೋಗಿದ್ದಾರೆ. ಬೆಳಗ್ಗೆ ಇಡ್ಲಿ, ವಡೆ, ಸಾಂಬಾರ್‌, ಉಪ್ಪಿಟ್ಟು, ಊಟದಲ್ಲಿ ಎರಡು ಬಗೆಯ ಸಿಹಿ ಇರಲೇಬೇಕು. ಇದರೊಂದಿಗೆ ತಾಜಾ ಹಣ್ಣುಗಳನ್ನು ತಿನ್ನುತ್ತಾರೆ. ಇದಲ್ಲದೆ ಅಮೆರಿಕದ ಪ್ಯೂರ್‌ವೆಜ್‌ ಖಾದ್ಯಗಳನ್ನು ಇಷ್ಟ ಪಡುತ್ತಾರೆ. ದಿನಕ್ಕೆ 4 ಬಾರಿ ಮಸಾಲೆ ಚಹಾ ಸೇವಿಸುತ್ತಾರೆ ಎನ್ನುತ್ತಾರೆ ಆನಂದ ಅವರು.

Advertisement
Advertisement

Udayavani is now on Telegram. Click here to join our channel and stay updated with the latest news.

Next