ಬೆಂಗಳೂರು: ಕಲೆ ಮತ್ತು ವಿಜ್ಞಾನ ಒಂದಾಗಬೇಕು ಎಂದು ಬಲವಾಗಿ ಪ್ರತಿಪಾದಿಸಿ ಕಲೆಗಾಗಿ ಲೇಖನಿ ಮುಡುಪಾಗಿಡುವುದೇ ಜೀವನ ಅಂದುಕೊಂಡಿದ್ದ ಆನಂದ ಕುಮಾರಸ್ವಾಮಿ ದೈತ್ಯ ಪ್ರತಿಭೆಯಷ್ಟೇ ಅಲ್ಲ, ದೈವ ಪ್ರತಿಭೆಯೂ ಹೌದು ಎಂದು ವಿಮರ್ಶಕ ಜಿ.ಬಿ.ಹರೀಶ್ ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರೋತ್ಥಾನ ಪರಿಷತ್ತಿನಲ್ಲಿ ಫೌಂಡೇಷನ್ ಫಾರ್ ಇಂಡಿಕ್ ರೀಸರ್ಚ್ ಸ್ಟಡೀಸ್ ವತಿಯಿಂದ ಹಮ್ಮಿಕೊಂಡಿದ್ದ ಕಲಾ ಚಿಂತಕ ಆನಂದ ಕುಮಾರಸ್ವಾಮಿ ಅವರ “ಜೀವನ ಮತ್ತು ಕಾರ್ಯ’ ವಿಚಾರಗೋಷ್ಠಿಯಲ್ಲಿ ವಿಷಯ ಮಂಡಿಸಿ ಮಾತನಾಡಿದ ಅವರು, ಆನಂದ ಕುಮಾರಸ್ವಾಮಿ ಅವರನ್ನು ಓದುವದು ನಮ್ಮ ಕಲೆಗೆ ನಾವು ಮರು ಪ್ರವೇಶ ಪಡೆದುಕೊಂಡಂತೆ.
ಅವರನ್ನು ಒಬ್ಬ ತತ್ವಜ್ಞಾನಿಯಾಗಿ, ಕಲಾ ಚಿಂತಕನಾಗಿ, ಬೇರೆ ಬೇರೆ ಪಂಥಗಳ ಬಾಹ್ಯ ಅಧ್ಯಯನಕಾರನಾಗಿ ಓದಬಹುದು. ಮೊಗಲ್ ಚಿತ್ರಕಲೆಯಲ್ಲಿ ರಜಪೂತ ಚಿತ್ರಕಲೆಯನ್ನು ಸೇರಿಸಲಾಗಿತ್ತು. ಆದರೆ, ಮೊಗಲ್ ಚಿತ್ರಕಲೆಯಿಂದ ರಜಪೂತ ಚಿತ್ರಕಲೆಯನ್ನು ಬೇರ್ಪಡಿಸಿ ತೋರಿಸಿದವರು ಕುಮಾರಸ್ವಾಮಿ. ಭಾರತದಲ್ಲಿ ಧರ್ಮ ಮತ್ತು ಕಲೆಗೆ ಯಾವತ್ತೂ ಪ್ರತ್ಯೇಕತೆ ಇಲ್ಲ ಎಂದು ಹೇಳಿದರು.
ಪತ್ರಕರ್ತ ಸೂರ್ಯಪ್ರಕಾಶ್ ಪಂಡಿತ್, ಆನಂದ ಕುಮಾರಸ್ವಾಮಿಯವರ “ಕಲಾ ಚಿಂತನೆ’ ಕುರಿತು ಮಾತನಾಡಿ, ಡಾ. ಎಸ್.ಎಲ್.ಭೈರಪ್ಪ ಅವರ ಧರ್ಮಶ್ರೀ ಕಾದಂಬರಿಗೆ ಆನಂದ ಕುಮಾರಸ್ವಾಮಿ ಅವರ “ಡ್ಯಾನ್ಸ್ ಆಫ್ ಶಿವಾ’ ಕೃತಿ ಪ್ರೇರಣೆ. ಒಂದು ಜೀವಮಾನದಲ್ಲಿ ಆನಂದ ಕುಮಾರಸ್ವಾಮಿಯವರನ್ನು ಓದಲು ಸಾಧ್ಯವಿಲ್ಲ. ಅವರನ್ನು ಓದುವದು ನಮ್ಮನ್ನು ನಾವೇ ಓದಿಕೊಂಡಂತೆ.
ನಾನು ಎಂಬ ಹುಡುಕಾಟದ ಎಲ್ಲ ಪ್ರಶ್ನೆಗಳಿಗೆ ಆನಂದ ಕುಮಾರಸ್ವಾಮಿ ಉತ್ತರವಾಗಿದ್ದಾರೆ. ಅವರು ಕೇವಲ ಅಕಾಡೆಮಿಕ್ ವಿಷಯ ಅಲ್ಲ. ಅವರ ಒಂದೊಂದು ಬರಹದಲ್ಲೂ ಬೌದ್ಧಿಕ ಪ್ರಾಮಾಣಿಕತೆ ಕಾಣುತ್ತದೆ ಎಂದು ಅಭಿಪ್ರಾಯಪಟ್ಟರು. ಆನಂದಕುಮಾರಸ್ವಾಮಿಯವರ “ಡ್ಯಾನ್ಸ್ ಆಫ್ ಶಿವ’ ಪುಸ್ತಕದ ಪ್ರಕಟಣೆಯ 100ನೇ ವರ್ಷದ ಪ್ರಯುಕ್ತ ಈ ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.