ಧಾರವಾಡ: ಇಲ್ಲಿಯ ಕವಿಸಂನಲ್ಲಿ ಪ್ರೊ|ಪಂಡಿತ ಡಿ.ಎನ್.ಅವಳೀಕರ ಕೊಡ ಮಾಡಿದ ದತ್ತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಲಬುರ್ಗಿಯ ಸಾಹಿತಿ ವಿಜಯಕುಮಾರ ಚೌಧರಿ ಅವರಿಗೆ ಆನಂದಕಂದ-2018 ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಕಲಬುರ್ಗಿಯ ವಿಜಯಕುಮಾರ ಚೌಧರಿ ಮಾತನಾಡಿ, ಬೇರೆ ಬೇರೆ ಸಾಹಿತ್ಯಗಳನ್ನು ತಿಳಿಯಬೇಕಾದರೆ ಭಾಷಾಂತರ ಮಾಡುವುದು ಅನಿವಾರ್ಯ. ಇದು ಕಠಿಣ ಕಾರ್ಯ. ಅನುವಾದ ಭಾವಾನುವಾದ ಮೂಲ ಕೃತಿಯ ಭಾವಕ್ಕೆ ಧಕ್ಕೆಯಾಗದಂತೆ ಅನುವಾದ ಮಾಡಬೇಕು ಎಂದರು.
ಅತಿಥಿಯಾಗಿದ್ದ ಪ್ರೊ| ಹರ್ಷಡಂಬಳ ಮಾತನಾಡಿ, ದೇವರ ದಾಸಿಮಯ್ಯನವರ ಕನ್ನಡ ವಚನಗಳನ್ನು ಮರಾಠಿ ಭಾಷೆಗೆ ಅನುವಾದ ಮಾಡಿ, ಕನ್ನಡ ಹಾಗೂ ಮರಾಠಿ ಭಾಷಾ ಬಾಂಧವ್ಯದ ಕೊಂಡಿಯಾಗಿ ಕಾರ್ಯ ಮಾಡಿದ ಕಲಬುರ್ಗಿಯ ಪ್ರಾ| ವಿಜಯಕುಮಾರ ಚೌಧರಿ ಅವರ ಕಾರ್ಯ ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ನಾಡೋಜ ಡಾ|ಪಾಟೀಲ ಪುಟ್ಟಪ್ಪ ಮಾತನಾಡಿ, ಭಾಷಾ ದ್ವೇಷ ಬೇಡ. ಎಲ್ಲಾ ಭಾಷೆಗಳನ್ನು ಕಲಿಯುವ ಮೊದಲು ಪ್ರಾದೇಶಿಕ ಮಾತೃಭಾಷೆಯನ್ನು ಸ್ಪಷ್ಟವಾಗಿ ಕಲಿತು ಶಿಕ್ಷಣ ಪಡೆದರೆ ಎಲ್ಲಾ ಭಾಷೆಗಳನ್ನು ನಾವು ಸರಳವಾಗಿ ಕಲಿಯಬಹುದು ಎಂದರು.
ಇದೇ ಸಂದರ್ಭದಲ್ಲಿ ಆನಂದಕಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವಿಸಲಾಯಿತು. ರಾಜು ಕುಲಕರ್ಣಿ ಹಾಗೂ ತಂಡದಿಂದ ಆನಂದಕಂದರ ಗೀತ ಗಾಯನ ನಡೆಯಿತು. ಆನಂದ ಕಂದರ ಮೊಮ್ಮಗ ಶ್ರೀನಾಥ ಸುರೇಶ ಬೆಟಗೇರಿ ಇದ್ದರು. ಪ್ರಕಾಶ ಎಸ್. ಉಡಿಕೇರಿ ಸ್ವಾಗತಿಸಿದರು. ಕೃಷ್ಣ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಎಸ್.ಬಿ.ಗಾಮನಗಟ್ಟಿ ನಿರೂಪಿಸಿ, ವಂದಿಸಿದರು.