ಬಳ್ಳಾರಿ: ವಿಜಯನಗರ ಜಿಲ್ಲೆ ಘೋಷಣೆಯಾದ ಬೆನ್ನಲ್ಲೇ ಬಳ್ಳಾರಿಯಲ್ಲಿ ವಿರೋಧ ವ್ಯಕ್ತವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ತಮ್ಮ ಭೂಮಿಗೆ ಬೇಡಿಕೆ ಹೆಚ್ಚಿಸಿಕೊಂಡು ರಿಯಲ್ ಎಸ್ಟೇಟ್ ಅಭಿವೃದ್ಧಿಗಾಗಿ ಬಳ್ಳಾರಿಯನ್ನು ವಿಭಜಿಸಿ, ವಿಜಯನಗರ ಪ್ರತ್ಯೇಕ ಜಿಲ್ಲೆ ಮಾಡಲು ಮುಂದಾಗಿದ್ದಾರೆ. ಇದನ್ನು ವಿರೋಧಿಸಿ ಮುಂದಿನ ಗುರುವಾರ ಬಳ್ಳಾರಿ ಜಿಲ್ಲೆ ಬಂದ್ ಆಚರಿಸಲಾಗುವುದು ಎಂದು ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯ ಕುಡತಿನಿ ಶ್ರೀನಿವಾಸ್ ಎಚ್ಚರಿಸಿದರು.
ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರವನ್ನು ಪ್ರತ್ಯೇಕ ಮಾಡುವ ನಿರ್ಣಯ ಏಕಪಕ್ಷೀಯವಾಗಿದೆ. ಆನಂದ್ ಸಿಂಗ್ ಅವರು, ಹೊಸಪೇಟೆಯಲ್ಲಿ ತಮ್ಮ ಭೂಮಿಗಳನ್ನು ರಿಯಲ್ ಎಸ್ಟೇಟ್ ಮಾಡಿಕೊಳ್ಳುವ ಸಲುವಾಗಿ ವಿಜಯನಗರ ಜಿಲ್ಲೆಯನ್ನು ಪ್ರತ್ಯೇಕ ಮಾಡಿಕೊಂಡಿದ್ದಾರೆ. ಇದು ಎಲ್ಲರಿಗೂ ಗೊತ್ತಿದೆ ಎಂದು ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಬಳ್ಳಾರಿ ಜಿಲ್ಲೆಯನ್ನು ವಿಭಜಿಸಲು ಬೆಂಬಲ ಸೂಚಿಸಿದ್ದಾರೆ. ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆ ಮಾಡುವ ಪ್ರಸ್ತಾಪಕ್ಕೆ ಬೆಂಬಲ ನೀಡಿದ್ದಾರೆ. ಇದರ ಹಿಂದೆ ರಾಮುಲು ಅವರಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗುವ ಆಸೆಯೂ ಇದೆ. ಅದಕ್ಕೆ ಅವರು ಬೆಂಬಲ ನೀಡಿದ್ದಾರೆ ಎಂದರು.
ಇದನ್ನೂ ಓದಿ:ಬಳ್ಳಾರಿ ಇಬ್ಭಾಗ: ವಿಜಯನಗರ ಹೊಸ ಜಿಲ್ಲೆ; ದಶಕಗಳ ಹೋರಾಟಕ್ಕೆ ಮನ್ನಣೆ
ಸೋಮಶೇಖರ ರೆಡ್ಡಿ ಅವರು ಜನ ಅಖಂಡ ಜಿಲ್ಲೆ ಉಳಿಸಲು ಜನ ಹೋರಾಟ ಮಾಡಿದರೆ ನಾನು ಬೆಂಬಲಿಸುವೆ ಎಂದು ಹೇಳಿದ್ದಾರೆ. ಇದನ್ನು ನಾವು ಒಪ್ಪಲ್ಲ. ಅವರು ಮಾತ್ರ ವಿಧಾನ ಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಕೆ.ಸಿ. ಕೊಂಡಯ್ಯ, ಸಂಸದರಾದ ದೇವೇಂದ್ರಪ್ಪ, ನಾಸೀರ್ ಹುಸೇನ್ ರ ಬೆಂಬಲ ಕೆಳಲಿದ್ದೇವೆ. ಎಲ್ಲರೂ ಬೀದಿಗಿಳಿದು ಹೋರಾಟ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ, ಸಿಂಗಾಪುರ್ ನಾಗರಾಜ್, ಚಾನಳ ಶೇಖರ್, ಬಸವರಾಜ್, ವಿಜಯಕುಮಾರ್ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.