ಕೊಯಂಬತ್ತೂರ್ : ಬರೀ ಒಂದು ರೂಪಾಯಿಗೆ ಇಡ್ಲಿ ಮಾರಾಟ ಮಾಡಿ ‘ಇಡ್ಲಿ ಅಮ್ಮಾ’ ಎಂದೇ ಖ್ಯಾತಿಯಾದ ತಮಿಳುನಾಡಿನ ವೃದ್ಧೆ ಕಮಲಥಾಲ್ ಅವರಿಗೆ ಮಹೀಂದ್ರಾ ಗ್ರೂಪ್ ನಿಂದ ಮನೆ/ಕ್ಯಾಂಟೀನ್ ಒಂದನ್ನು ಕಟ್ಟಿಸಿಕೊಡಲಾಗುತ್ತಿದೆ.
ತಮಿಳುನಾಡಿನ ಕೊಯಂಬತ್ತೂರ್ ನಗರದ ಹೊರವಲಯದಲ್ಲಿರುವ ವಡಿವೇಲಂಪಲಯಂನಲ್ಲಿ ಕೇವಲ ಒಂದು ರೂಪಾಯಿಗೆ ಇಡ್ಲಿ ಮಾರಾಟ ಮಾಡಿ ಕಮಲಥಾಲ್ ಎಲ್ಲರ ಗಮನ ಸೆಳೆದಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಆಟೋಮೊಬೈಲ್ ಬ್ಯುಸಿನೆಸ್ ಮ್ಯಾನ್ ಆನಂದ್ ಮಹೀಂದ್ರ, ಯಾರೋ ಒಬ್ಬರ ಸ್ಪೂರ್ತಿದಾಯಕ ಕಥೆಯಲ್ಲಿ ಅಪರೂಪಕ್ಕೆ ಒಬ್ಬರು ಸಣ್ಣ ಪಾತ್ರ ನಿರ್ವಹಿಸುತ್ತಾರೆ. ಸಣ್ಣ ಪಾತ್ರ ನಿರ್ವಹಿಸಲು ನಮಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಇಡ್ಲಿ ಅಮ್ಮಾ ಎಂದೇ ಹೆಸರಾಗಿರುವ ಕಮಲಥಾಲ್ ಅವರಿಗೆ ಧನ್ಯವಾದಗಳು. ಇಡ್ಲಿ ತಯಾರಿಕೆ ಹಾಗೂ ಮಾರಾಟಕ್ಕೆ ಅವಕಾಶವಾಗುವಂತೆ ಶೀಘ್ರದಲ್ಲಿಯೇ ಮನೆಯೊಂದನ್ನು ಅವರು ಹೊಂದಲಿದ್ದಾರೆ ಎಂದು ಟ್ಬೀಟ್ ನಲ್ಲಿ ಬರೆದುಕೊಂಡಿದ್ದಾರೆ.
ವಡಿವೇಲಂಪಲಯಂ ಪ್ರದೇಶದಲ್ಲಿ 3.5 ಸೆಂಟ್ ಭೂಮಿಯನ್ನು ಮಹೀಂದ್ರ ಕಂಪನಿಯು ಇಡ್ಲಿ ಅಮ್ಮಾನಿಗೆ ನೀಡಿದೆ. ಸೋಮವಾರ ಭೂಮಿಯ ನೋಂದಣಿ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ. ಮುಂದಿ ದಿನಗಳಲ್ಲಿ ಕಮಲಥಾಲ್ ಅವರಿಗೆ ಕ್ಯಾಂಟಿನ್ ಜೊತೆ ಒಂದು ಮನೆಯನ್ನೂ ನಿರ್ಮಾಣ ಮಾಡುವುದಾಗಿ ಮಹೀಂದ್ರ ಗ್ರೂಪ್ ತಿಳಿಸಿದೆ.
ಈ ಬಗ್ಗೆ ಖುಷಿ ಹಂಚಿಕೊಂಡಿರುವ ಕಮಲಥಾಲ್, ತುಂಬಾ ಸಂತೋಷವಾಗುತ್ತಿದೆ, ನೆರವು ನೀಡಿದ್ದಕ್ಕೆ ಧನ್ಯವಾದಗಳು. ಅವರು ಭೂಮಿಗೆ ಸಂಬಂಧಿಸಿದ ದಾಖಲಾತಿ ನೀಡಿದ್ದಾರೆ. ಅಲ್ಲದೆ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ ಎಂದು ಇಡ್ಲಿ ಅಮ್ಮ ತಿಳಿಸಿದ್ದಾರೆ.