Advertisement

‘ದಯವಿಟ್ಟು ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೋ’: ಬೆಂಕಿಯಲ್ಲಿ ಬೆಂದ ವ್ಯಕ್ತಿಯ ಅಂತಿಮ ಕರೆ

10:03 AM Dec 09, 2019 | Team Udayavani |

ನವದೆಹಲಿ: ಇಂದು ಬೆಳಗಿನ ಜಾವದಲ್ಲಿ ಇಲ್ಲಿನ ಅನಾಜ್ ಮಂಡಿ ಪ್ರದೇಶದಲ್ಲಿ ಸುಮಾರು 43ಕ್ಕೂ ಹೆಚ್ಚು ಜೀವಗಳನ್ನು ಅಗ್ನಿಗಾಹುತಿ ಮಾಡಿಕೊಂಡ ನತದೃಷ್ಟ ಬಹುಮಹಡಿ ಕಟ್ಟಡದ ಅಗ್ನಿ ದುರಂತದಲ್ಲಿ ಮೃತಪಟ್ಟವರಲ್ಲಿ ಒಬ್ಬರಾದ ಮಹಮ್ಮದ್ ಮುಷರಫ್ ಈ ದುರಂತದಲ್ಲಿ ಮೃತಪಡುವ ಕೆಲವೇ ನಿಮಿಷಗಳಿಗೂ ಮುನ್ನ ತನ್ನ ಗೆಳೆಯನಿಗೆ ಕರೆ ಮಾಡಿ ತಾನು ಬದುಕುವುದು ಸಂಶಯ ಹಾಗಾಗಿ ತನ್ನ ಕುಟುಂಬದವರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಮಾಡಿಕೊಂಡಿರುವ ಮನವಿ ಈ ಘಟನೆಯ ಭೀಕರತೆಗೆ ಸಾಕ್ಷಿಯಾಗಿದೆ.

Advertisement

34 ವರ್ಷದ ಮುಷರಫ್ ಈ ದುರಂತ ಸಂಭವಿಸಿದ ಕ್ಷಣದಲ್ಲಿ ತಾನು ಇಲ್ಲಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ ಎಂದು ಗೊತ್ತಾದಾಗ ಉತ್ತರಪ್ರದೇಶದ ತಂಡಮೈದಾಸ್ ಪ್ರದೇಶದಲ್ಲಿರುವ ತನ್ನ ಗೆಳೆಯ ಮೋನು ಅಗರ್ವಾಲ್ ಗೆ ಕರೆ ಮಾಡಿದ್ದಾನೆ. ‘ಇಲ್ಲಿ ಬೆಂಕಿ ವ್ಯಾಪಿಸಿಕೊಂಡಿದೆ, ನಾನು ಬದುಕಿ ಬರುವುದು ಅಸಾಧ್ಯವಾಗಿದೆ. ದಯವಿಟ್ಟು ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೋ’ ಎಂದು ತನ್ನ ಗೆಳೆಯನಿಗೆ ಮನವಿ ಮಾಡಿಕೊಂಡಿದ್ದಾನೆ.

ಈ ಸಂದರ್ಭದಲ್ಲಿ ಮೋನು ತನ್ನ ಗೆಳೆಯನಿಗೆ ಧೈರ್ಯ ತುಂಬಲು ಪ್ರಯತ್ನಿಸಿದ್ದಾನೆ ಮತ್ತು ತಕ್ಷಣವೇ ಕಟ್ಟಡದಿಂದ ಹೊರ ಜಿಗಿಯುವಂತೆ ಸಲಹೆ ನೀಡಿದ್ದಾನೆ, ಮತ್ತು ನಿಮ್ಮ ರಕ್ಷಣೆಗೆ ಯಾರಾದರೂ ಬರಬಹುದು ಎಂದು ಹೇಳುತ್ತಿರುವಾಗಲೇ ಕರೆ ಕಡಿತಗೊಂಡಿದೆ. ರಕ್ಷಣಾ ಕಾರ್ಯಕರ್ತರು ಬಂದ ಸಂದರ್ಭದಲ್ಲಿ ಮಹಮ್ಮದ್ ಮುಷರಫ್ ಪ್ರಾಣಪಕ್ಷಿ ಹಾರಿಹೋಗಿತ್ತು.

ಮಹಮ್ಮದ್ ಮುಷರಫ್ ಗೆ ಮದುವೆಯಾಗಿದ್ದು ಮೂವರು ಪುತ್ರಿಯರು ಮತ್ತು ಒಬ್ಬ ಮಗನಿದ್ದಾನೆ. ಮುಷರಫ್ ಮತ್ತು ಮೋನು ಅಗರ್ವಾಲ್ ಅವರು ಬಾಲ್ಯ ಸ್ನೇಹಿತರಾಗಿದ್ದು ಎರಡು ದಿನಗಳ ಹಿಂದೆಯಷ್ಟೇ ತನ್ನೂರಿನಲ್ಲಿ ನಡೆದಿದ್ದ ಮದುವೆ ಸಮಾರಂಭವೊಂದರಲ್ಲಿ ಭೇಟಿಯಾಗಿದ್ದರು. ಆದರೆ ಇದೇ ತಮ್ಮ ಭೇಟಿಯಾಗಬಹುದೆಂಬ ಕಲ್ಪನೆ ಅವರಿಬ್ಬರಿಗೂ ಇರಲಿಲ್ಲ.

ಇದೀಗ ಮೋನು ಅವರು ಮುಷರಫ್ ಸಂಬಂಧಿ ಜೊತೆ ದೆಹಲಿಗೆ ಹೋಗಿದ್ದು ಅವರಿಗೆ ಆಸ್ಪತ್ರೆಗೆ ತಲುಪಲು ಬರೋಬ್ಬರಿ ಆರು ಗಂಟೆ ಸಮಯ ಹಿಡಿದಿದೆ. ಖಾಸಗಿ ವೆಬ್ ಸೈಟ್ ಒಂದರ ಜೊತೆ ಆಸ್ಪತ್ರೆಯ ಬಳಿ ಮಾತನಾಡಿದ ಮೋನು, ‘ನಾನಿಂದು ನನ್ನ ಕಿರಿಯ ಸಹೋದರನನ್ನು ಕಳೆದುಕೊಂಡಿದ್ದೇನೆ. ಜೀವದ ಗೆಳೆಯನ ಅಂತಿಮ ಕ್ಷಣದ ಕೋರಿಕೆಯಂತೆ ಆತನ ಕುಟುಂಬಕ್ಕೆ ನನ್ನ ಕೈಲಾದ ಸಹಾಯವನ್ನು ಮಾಡುತ್ತೇನೆ’ ಎಂದು ಗದ್ಗದಿತನಾಗಿ ನುಡಿದಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next