Advertisement

ಅಲ್ಲಲ್ಲಿ ಅಹಿತಕರ ಘಟನೆ

11:39 AM May 13, 2018 | |

ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಜಯನಗರ ಹಾಗೂ ಸಿ.ವಿ.ರಾಮನ್‌ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಶನಿವಾರ ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.

Advertisement

ವಿಜಯನಗರ ಕ್ಷೇತ್ರದ ಹಂಪಿನಗರದಲ್ಲಿ ನಡೆದ ಘಟನೆ ವೇಳೆ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಆನಂದ್‌ ಹೊಸೂರು ಸೇರಿ ನಾಲ್ವರಿಗೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಆನಂದ್‌ ಮತ್ತು ಪ್ರಕಾಶ್‌ ಎಂಬ ಇಬ್ಬರು ಕಾಂಗ್ರೆಸ್‌ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಹಂಪಿನಗರದ ಈಜುಕೋಳದ ಬಳಿ ಮತಕೇಂದ್ರದ 100 ಮೀಟರ್‌ ದೂರದಲ್ಲಿ ಕೆನಾಪಿ(ಮತದಾರರ ಸಂಖ್ಯೆ, ಹೆಸರು ಬರೆದು ಕೊಡುವ ಸ್ಥಳ) ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ವಿಷಯ ತಿಳಿಯದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಎರಡು ಕಡೆಯ ಮುಖಂಡರನ್ನು ಸಮಾಧಾನ ಪಡಿಸಿ ಘರ್ಷಣೆಯನ್ನು ತಹಬದಿಗೆ ತಂದರು.

ಈ ಕುರಿತು ಮಾಹಿತಿ ನೀಡಿದ ಪಶಿrಮ ವಿಭಾಗದ ಡಿಸಿಪಿ ರವಿ ಡಿ ಚೆನ್ನಣ್ಣನವರ್‌, ವಿರುಪಾಕ್ಷೇಶ್ವರ ಸ್ವಾಮಿ ಎಜುಕೇಷನ್‌ ಸೊಸೈಟಿ ಬಳಿಯ ಮತ ಕೇಂದ್ರದ 100 ಮೀಟರ್‌ ದೂರದಲ್ಲೇ ಕ್ಷುಲ್ಲಕ ಕಾರಣಕ್ಕೆ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಇದಕ್ಕೂ ಮೊದಲು ಘಟನೆ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಪೊಲೀಸರು ಕಾಂಗ್ರೆಸ್‌ ನಾಯಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ಪ್ರತಿಭಟನೆ ನೇತೃತ್ವ ವಹಿಸಿದ್ದ ಪಾಲಿಕೆ ಸದಸ್ಯ ಸ್ಥಳದಲ್ಲೇ ಕುಸಿದು ಬಿದ್ದರು.ಅವರನ್ನು ಹೊಯ್ಸಳ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು.

Advertisement

ಮತ್ತೂಂದು ಪ್ರಕರಣದಲ್ಲಿ ಸಿ.ವಿ.ರಾಮನ್‌ನಗರದ ವಿಧಾನಸಭಾ ಕ್ಷೇತ್ರದ ಕೋನೇನ ಅಗ್ರಹಾರ ಕಾಂಗ್ರೆಸ್‌ ಪಾಲಿಕೆ ಸದಸ್ಯ ಚಂದ್ರಪ್ಪರೆಡ್ಡಿ ಪುತ್ರ ಮಧುಸೂದನ್‌ ರೆಡ್ಡಿ, ಈತನ ಕಾರು ಚಾಲಕ ರೂಪೇಶ್‌ ಹಾಗೂ ಕೆಲ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಯಾಗಿದ್ದು, ಎರಡು ಕಡೆಯವರಿಗೂ ಸಣ್ಣ-ಪುಟ್ಟ ಗಾಯಗಳಾಗಿವೆ.

ಬಿಬಿಎಂಪಿ ಚುನಾವಣೆಯಲ್ಲಿ ಸ್ವತಂತ್ಯ ಅಭ್ಯರ್ಥಿಯಾಗಿ ಗೆದ್ದು ಕಾಂಗ್ರೆಸ್‌ ಸೇರಿದ್ದ ಚಂದ್ರಪ್ಪರೆಡ್ಡಿ ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಸರ್‌ ಎಂ.ವಿಶ್ವೇಶ್ವರಯ್ಯ ಕಾಲೇಜಿನ ಮತ ಕೇಂದ್ರದ ಬಳಿ ಮತಚೀಟಿ ಬರೆದುಕೊಡುವ ವಿಚಾರಕ್ಕೆ ಬಿಜೆಪಿ ಕಾರ್ಯಕರ್ತರ ಜತೆ ಗಲಾಟೆ ಮಾಡಿಕೊಂಡಿದ್ದಾರೆ.

ಘಟನೆಯಲ್ಲಿ ಮಧುಸೂದನ್‌ ರೆಡ್ಡಿ, ಈತನ ಕಾರು ಚಾಲಕ ರೂಪೇಶ್‌ ಹಾಗೂ ಬಿಜೆಪಿ ಮುಖಂಡ ನಾಗರಾಜರೆಡ್ಡಿ ಸೇರಿ ಕೆಲವರಿಗೆ ಗಾಯಗಳಾಗಿವೆ. ಈ ಸಂಬಂಧ ಎರಡು ಕಡೆಯವರು ಆರೋಪ-ಪ್ರತ್ಯಾರೋಪ ಮಾಡಿ ದೂರು ನೀಡಿದ್ದಾರೆ ಎಂದು ಜೀವನ್‌ ಬೀಮಾನಗರ ಪೊಲೀಸರು ತಿಳಿಸಿದ್ದಾರೆ.

ಮಾತಿನ ಚಕಮಕಿ: ಚಾಮರಾಜಪೇಟೆಯ ಆಜಾದ್‌ನಗರ ಮತಗಟ್ಟೆ ಕೇಂದ್ರದ ಪಕ್ಕದ ಮನೆಯಲ್ಲೇ ಮತದಾರರಿಗೆ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಅಭ್ಯರ್ಥಿ ಲಕ್ಷಿನಾರಾಯಣ್‌ ಕಾಂಗ್ರೆಸ್‌ ಅಭ್ಯರ್ಥಿ ಜಮೀರ್‌ ಅಹ್ಮದ್‌ ಮೇಲೆ ಹರಿಹಾಯ್ದರು.

ಈ ವೇಳೆ ಎರಡು ಪಕ್ಷಗಳ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದು ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಇಬ್ಬರು ಅಭ್ಯರ್ಥಿಗಳನ್ನು ಸಮಾಧಾನಪಡಿಸಿ, ಕಾರ್ಯಕರ್ತರ ಗುಂಪು ಚದುರಿಸಿ ವಾತಾವರಣ ತಿಳಿಗೊಳಿಸಿ, ಶಾಂತಿಯುತ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.

ಮಾನವೀಯತೆ ಮೆರೆದ ಪೇದೆ: ಮತದಾನದ ಸಂದರ್ಭದಲ್ಲಿ ಕರ್ತವ್ಯ ನಿರತ ಪೇದೆಯೊಬ್ಬರು ಮಾನವೀಯ ಕಾರ್ಯದ ಮೂಲಕ ಸುದ್ದಿ ಆಗಿದ್ದಾರೆ. ಶನಿವಾರ ಮಧ್ಯಾಹ್ನ ಕೆ.ಆರ್‌.ಪುರಂ ವಿಧಾನಸಭಾ ಕ್ಷೇತ್ರದ ನಾರಾಯಣಪುರ ಮತಗಟ್ಟೆ 329ಎ ರಲ್ಲಿ ಮಹಿಳೆಯೊಬ್ಬರು ಐದು ತಿಂಗಳ ಮಗುವಿನೊಂದಿಗೆ ಮತದಾನಕ್ಕೆ ಬಂದಿದ್ದರು.

ಮತಗಟ್ಟೆ ಒಳಗೆ ಮಕ್ಕಳನ್ನು ಕೊಂಡೊಯ್ಯಲು ಅವಕಾಶ ಇರಲಿಲ್ಲ. ಇದೇ ವೇಳೆ ಬೂತ್‌ನ ಭದ್ರತೆಗೆ ನಿಯೋಜನೆಗೊಂಡಿದ್ದ ವೈಟ್‌ಫೀಲ್ಡ್‌ ಠಾಣೆಯ ಪೇದೆ ಶ್ಯಾಮ್‌ರಾಯ್‌ ಮಗುವನ್ನು ಎತ್ತಿಕೊಂಡಿದ್ದು, ಕೆಲ ಹೊತ್ತು ಪಾಲನೆ ಮಾಡಿದ್ದಾರೆ. ಕೊನೆಗೆ ಮತದಾನ ಮಾಡಿ ಹೊರಬಂದ ತಾಯಿಗೆ ಮಗುವನ್ನು ವಾಪಸ್‌ ನೀಡಿದ್ದಾರೆ. ಇತ್ತ ಮತ ಚಲಾಯಿಸಿ ಸಂತಸದಲ್ಲಿದ್ದ ಮಹಿಳೆ ಪೇದೆ ಶ್ಯಾಮ್‌ರಾಯ್‌ಗೆ ಕೃತಜ್ಞತೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next