ದಾವಣಗೆರೆ: ಪ್ರಸ್ತುತ ವಾತಾವರಣದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ, ಆರ್ಥಿಕ ಮತ್ತು ಸಾಮಾಜಿಕ ಭಯೋತ್ಪಾದನೆ ಕಂಡು ಬರುತ್ತಿದೆ ಎಂದು ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಡಾ| ಎಚ್.ಎನ್. ನಾಗಮೋಹನ್ ದಾಸ್ ಆತಂಕ ವ್ಯಕ್ತಪಡಿಸಿದರು. ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಬಂಡಾಯ ಸಾಹಿತ್ಯ ಸಮ್ಮೇಳನದ ಸಮಾರೋಪದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾನು ಪಾಕಿಸ್ತಾನ, ಚೀನಾ ಯುದ್ಧದ ಸಂದರ್ಭದಲ್ಲಿ ಮತ್ತು ಆಂತರಿಕ ಕಾರಣಕ್ಕೆ ತುರ್ತು ಪರಿಸ್ಥಿತಿ ನೋಡಿದ್ದೇನೆ ಮತ್ತು ಅದರ ಪರಿಣಾಮವನ್ನೂ ಅನುಭವಿಸಿದ್ದೇನೆ. ಆದರೆ ಎಂದೆಂದಿಗೂ ಭಾರತದಂತಹ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯ ಕಾಣುತ್ತೇನೆ ಅಂದುಕೊಂಡಿರಲೇ ಇಲ್ಲ. ಈಗ ಅಂತಹ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣ ಕಾಣುತ್ತಿದ್ದೇನೆ ಎಂದರು.
ಕೆಲವು ವರ್ಷಗಳ ಹಿಂದೆ ಎಲ್ಲಿಯೋ ಇದ್ದಂತಹ ಕೋಮುವಾದದ ದಳ್ಳುರಿ ನಮಗೇ ಅರಿವಿಲ್ಲದಂತೆ ಮನೆಯ ಒಳಗಡೆಯೇ ನುಗ್ಗಿದೆ. ಜಾಗತೀಕರಣ ಎಂಬುದು ಈಗ ಮಾರುಕಟ್ಟೆಯನ್ನ ಮಾತ್ರವಲ್ಲ, ಜನಸಾಮಾನ್ಯರ ಮನಸ್ಸು ನಿಯಂತ್ರಣ ಮಾಡುತ್ತಿದೆ. ಇಂತಹ ಸಂದರ್ಭದ ವಿರುದ್ದ ಧ್ವನಿ ಎತ್ತಬೇಕಾದ ಸಂದರ್ಭದಲ್ಲಿ ಹಿಜಾಬ್, ಹಲಾಲ್, ಜಟ್ಕಾ ಕಟ್, ಅಜಾನ್ ಮುಂತಾದ ಅಜೆಂಡಗಳನ್ನು ಹೇರಲಾಗುತ್ತಿದೆ. ಪ್ರತಿಯೊಬ್ಬರೂ ಅಂತಹ ಅಜೆಂಡಾಗಳ ಸುತ್ತ ಗಿರಕಿ ಹೊಡೆಯುತ್ತಿದ್ದಾರೆಯೇ ವಿನಃ ಕಾಣದ ಶತ್ರುಗಳಿಗೆ ದಿಟ್ಟ ಉತ್ತರ ನೀಡುವ ಪ್ರಯತ್ನವನ್ನೇ ಮಾಡುತ್ತಿಲ್ಲ.ಪ್ರಗತಿಪರ ಇರುವಂತಹವರು ಶತ್ರುಗಳಿಗೇ ಅಜೆಂಡಾ ಕೊಡಬೇಕಾದ ವಾತಾವರಣ ನಿರ್ಮಾಣವಾಗಬೇಕು ಎಂದು ಆಶಿಸಿದರು.
ಡಾ| ಕೆ. ಷರೀಫಾ, ಭಕ್ತರ ಹಳ್ಳಿ ಕಾಮರಾಜ್, ಮೋಹನ್‌ರಾಜ್, ಹಿರಿಯ ಪತ್ರಕರ್ತರಾದ ಬಿ.ಎನ್. ಮಲ್ಲೇಶ್, ಆರ್.ಜಿ. ಹಳ್ಳಿ ನಾಗರಾಜ್, ಡಾ| ಎಚ್. ವಿಶ್ವನಾಥ್, ನಿವೃತ್ತ ಪ್ರಾಧ್ಯಾಪಕ ಡಾ| ಎ.ಬಿ. ರಾಮಚಂದ್ರಪ್ಪ ಇತರರು ಇದ್ದರು. ಹಿರಿಯ ನ್ಯಾಯವಾದಿ ಎಲ್. ಎಚ್. ಅರುಣ್‌ಕುಮಾರ್ ಸ್ವಾಗತಿಸಿದರು. ಕೆ. ಚಂದ್ರಪ್ಪ ನಿರೂಪಿಸಿದರು.
ಕಿಡಿ ಹೊತ್ತಿಸುವ ಸಾಹಿತ್ಯ ಬೇಡವೇ ಬೇಡ
ಸಾಹಿತ್ಯ ಎನ್ನುವುದು ಸದಾ ಜನರಿಗಾಗಿ ಇರಬೇಕು. ಇಲ್ಲದೇ ಹೋದಲ್ಲಿ ಅದು ಎಂದೆಂದಿಗೂ ಜನಪರ ಸಾಹಿತ್ಯ ಆಗುವುದೇ ಇಲ್ಲ. ಜನಪರ ಸಾಹಿತ್ಯ ಹೊರ ಹೊಮ್ಮಬೇಕಾದರೆ ಪ್ರಜಾತಂತ್ರ ಹೋರಾಟಗಳ ಜತೆಗೆ ಇರಬೇಕು. ಕ್ರಿಯಾಶೀಲತೆ, ಸೃಜನಶೀಲತೆ, ಕ್ರಿಯಾಶೀಲತೆಯ ಸಾಹಿತ್ಯ ಹೊರ ಹೊಮ್ಮಬೇಕು. ಅಂತಹ ಸಾಹಿತ್ಯ ಕತ್ತಲೆಯಲ್ಲಿ ಇರುವ ಮುಗ್ಧ ಜನಸಾಮಾನ್ಯರು, ದೇಶಕ್ಕೆ ಅನ್ನ ನೀಡುವ ರೈತರು, ಭವಿಷ್ಯದ ಕನಸು ಕಾಣುತ್ತಿರುವ ಯುವ ಸಮೂಹಕ್ಕೆ ಬೆಳಕಾಗಬೇಕು. ಯಾವುದೇ ಕಾರಣಕ್ಕೂ ಬೆಂಕಿ ಹಚ್ಚುವಂತಹ ಸಾಹಿತ್ಯ ಬೇಡವೇ ಬೇಡ ಎಂದು ವಿಶ್ರಾಂತ ನ್ಯಾಯಮೂರ್ತಿ ಡಾ| ಎಚ್.ಎನ್. ನಾಗಮೋಹನ್ ದಾಸ್ ತಿಳಿಸಿದರು.