Advertisement

ಹೆದ್ದಾರಿ ಪಕ್ಕ ತೆರೆದ ಬಾವಿ, ರಸ್ತೆ ಕುಸಿತ

11:46 PM Aug 25, 2019 | mahesh |

ಪುತ್ತೂರು: ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿರುವ ಮಾಣಿ -ಮೈಸೂರು ಹೆದ್ದಾರಿಯ ಕುಂಬ್ರ – ಕೌಡಿಚ್ಚಾರು ಮಧ್ಯೆ ಇರುವ 2.5 ಕಿ.ಮೀ. ಅಂತರದಲ್ಲಿ ಸಂಚಾರಕ್ಕೆ ಅಪಾಯಕಾರಿಯಾಗಿರುವ ರಸ್ತೆ ಕುಸಿತವನ್ನು ಸರಿಪಡಿಸಲು ಇಲಾಖೆ, ಜನಪ್ರತಿನಿಧಿಗಳು ತತ್‌ಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ.

Advertisement

ಕೌಡಿಚ್ಚಾರು ಸಮೀಪ ರಸ್ತೆಗೆ ಹೊಂದಿಕೊಂಡು ಅಪಾಯಕಾರಿ ತೆರೆದ ಬಾವಿ ಇದ್ದು, ಈ ಮೊದಲು ಅಪಾಯ ಸಂಭವಿಸಿರುವುದರಿಂದ ಮತ್ತು ಬಾವಿಯ ಕಡೆಗೆ ರಸ್ತೆ ಕುಸಿತ ಉಂಟಾಗುತ್ತಿದೆ. ಈ ಅಪಾಯದ 200 ಮೀ. ಅಂತರದಲ್ಲಿ ಶೇಖಮಲೆಯಲ್ಲಿರುವ ಸೇತುವೆ ಮೇಲಿನ ಎರಡೂ ಬದಿಯ ರಸ್ತೆ ಮಧ್ಯೆ ಕುಸಿತ ಉಂಟಾಗಿದ್ದು, ಸಂಚಾರ ಅಪಾಯಕಾರಿಯಾಗಿದೆ.

ಹೆದ್ದಾರಿಯಲ್ಲಿ ದಿನಂಪ್ರತಿ ಸಾವಿರಾರು ಸಂಖ್ಯೆಯ ವಾಹನಗಳು ಸಂಚರಿಸುತ್ತಿವೆ. ರಾತ್ರಿ ಸಮಯದಲ್ಲಿ ಈ ಎರಡು ಅಪಾಯದ ಸ್ಥಳಗಳು ಪ್ರಾಣಾಪಾಯವನ್ನು ತಂದೊಡ್ಡುವ ಸಾಧ್ಯತೆ ಇದೆ. ಸಂಭಾವ್ಯ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಇಲಾಖೆ ತ್ವರಿತವಾಗಿ ದುರಸ್ತಿಗೆ ಮುಂದಾಗಬೇಕಿದೆ.

ತೆರೆದ ಬಾವಿ ಅಪಾಯ

ಕೌಡಿಚ್ಚಾರು ಮಡ್ಯಂಗಳ ಸಮೀಪ ರಸ್ತೆ ಬದಿಯಲ್ಲಿರುವ ಅಪಾಯಕಾರಿ ಬಾವಿಗೆ ರಸ್ತೆ ಅಭಿವೃದ್ಧಿಯ ಸಂದರ್ಭ ಅಳವಡಿಸಿದ್ದ ತಡೆಬೇಲಿಗೆ ಇತ್ತೀಚೆಗೆ ವಾಹನವೊಂದು ಢಿಕ್ಕಿ ಹೊಡೆದು, ಅದೂ ನಾಶವಾಗಿದೆ. ತೆರೆದ ಬಾವಿಯ ಸುತ್ತಲೂ ಪೊದೆಗಳು ತುಂಬಿರುವುದರಿಂದ ರಸ್ತೆ ಬದಿ ಸಂಚರಿಸುವ ವಾಹನಗಳಿಗೆ ಬಾವಿಯ ಅರಿವೂ ಆಗುವ ಸ್ಥಿತಿ ಇಲ್ಲ. ಜತೆಗೆ ರಸ್ತೆ ಬದಿ ಬಾವಿಯ ಕಡೆಗೆ ನಿರಂತರ ಕುಸಿತವೂ ಉಂಟಾಗುತ್ತಿದೆ.

Advertisement

ಸೇತುವೆ ರಸ್ತೆಯಲ್ಲಿ ಕುಸಿತ
ಶೇಖಮಲೆ ಅಟಲ್ ನಗರದ ಬಳಿ ಇರುವ ಸೇತುವೆಯಲ್ಲಿ ಸಾಗುವ ರಸ್ತೆಯ ಎರಡೂ ಮುಕ್ತಾಯಗಳಲ್ಲಿ ಒಂದೆರಡು ಅಡಿಯಷ್ಟು ಡಾಮರು ಸಹಿತ ರಸ್ತೆ ಕುಸಿತಗೊಂಡು ಹೊಂಡ ನಿರ್ಮಾಣವಾಗಿದೆ. ವೇಗವಾಗಿ ಬರುವ ದ್ವಿಚಕ್ರ ವಾಹನಗಳಂತೂ ಹೊಂಡಕ್ಕೆ ಬಿದ್ದು, ಆಳೆತ್ತರಕ್ಕೆ ಜಿಗಿಯುತ್ತವೆ. ಸೇತುವೆಯೂ ಕಿರಿದಾಗಿರುವುದರಿಂದ ಮತ್ತು ತಿರುವಿನ ರಸ್ತೆ ಆಗಿರುವುದರಿಂದ ಸವಾರರಿಗೆ ಮಾರಣಾಂತಿಕವಾಗಿ ಪರಿಣಮಿಸಿವೆ.

ತಡೆಬೇಲಿ ಆಗಬೇಕು
ರಸ್ತೆ ಬದಿಯ ತೆರೆದ ಬಾವಿ ಕಂಡಾಗ ಭಯ ಉಂಟಾಗುತ್ತದೆ. ರಾತ್ರಿ ಸಂಚಾರವಂತೂ ಅಪಾಯಕಾರಿ. ತತ್‌ಕ್ಷಣ ತಡೆಬೇಲಿ ನಿರ್ಮಿಸಬೇಕು.
– ದಿವಾಕರ ನನ್ಯ, ನಿತ್ಯ ಪ್ರಯಾಣಿಕ

ಶೀಘ್ರ ಕ್ರಮ ಕೈಗೊಳ್ಳುತ್ತೇವೆ
ಹಿಂದೆ ರಸ್ತೆ ನಿರ್ವಹಿಸುತ್ತಿದ್ದ ಕೆಆರ್‌ಡಿಸಿಎಲ್ ಬಾವಿ ಮುಚ್ಚದೆ ಏಕೆ ಬಿಟ್ಟಿದೆ ಗೊತ್ತಿಲ್ಲ. ರಸ್ತೆಗೆ ಸಂಬಂಧಪಟ್ಟಂತೆ ಜಾಗ ಸ್ವಾಧೀನ ಆಗಿದೆಯೋ ಪರಿಶೀಲಿಸುತ್ತೇವೆ. ಹೆದ್ದಾರಿಯ 40 ಕಿ.ಮೀ. ಮರು ಡಾಮರು ಕಾಮಗಾರಿಗೆ 14 ಕೋಟಿ ರೂ. ಮಂಜೂರಾಗಿದೆ. ಕಾಮಗಾರಿ ನಡೆಸುವ ಸಂದರ್ಭ ಬಾವಿ ಮುಚ್ಚುತ್ತೇವೆ ಅಥವಾ ಪರ್ಯಾಯ ಕ್ರಮ ಕೈಗೊಳ್ಳುತ್ತೇವೆ. ಹೆದ್ದಾರಿ ವ್ಯಾಪ್ತಿಯ 5-6 ಸೇತುವೆ ಅಭಿವೃದ್ಧಿಗೂ ಅಂದಾಜು ಪಟ್ಟಿ ತಯಾರಿಸಲು ಸೂಚನೆ ಬಂದಿದ್ದು, ಶೀಘ್ರ ಪ್ರಸ್ತಾವನೆ ಸಲ್ಲಿಸಲಿದ್ದೇವೆ.
– ನಾಗರಾಜ್‌, ಸಹಾಯಕ ಎಂಜಿನಿಯರ್‌, ಹೆದ್ದಾರಿ ಇಲಾಖೆ

ರಾಜೇಶ್‌ ಪಟ್ಟೆ

 

Advertisement

Udayavani is now on Telegram. Click here to join our channel and stay updated with the latest news.

Next