ಬೆಂಗಳೂರು: ರಾಜ್ಯ ಸರ್ಕಾರ ಮತ್ತು ಬಿಜೆಪಿ ಹೈಕಮಾಂಡ್ ನಡುವೆ ಯಾವುದೇ ಹೊಂದಾಣಿಕೆ ಇಲ್ಲ. ರಾಜ್ಯದಲ್ಲಿ ಬೇಕಾಬಿಟ್ಟಿ ವರ್ಗಾವಣೆ ಆಗುತ್ತಿದೆ. ಸರ್ಕಾರವನ್ನು ನೋಡಿದರೆ ಮಧ್ಯಂತರ ಚುನಾವಣೆ ನಡೆಯುತ್ತೆ ಅನ್ನಿಸುತ್ತಿದೆ ಎಂದು ಮಾಜಿ ಸಚಿವ ಎಂಬಿ ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಮಾಡಿದ್ದನ್ನು ಅನುಭವಿಸಲೇಬೇಕು. ನಮ್ಮನ್ನು ಬಿಟ್ಟು ಹೋದ 17 ಜನ ಸ್ನೇಹಿತರ ಪರಿಸ್ಥಿತಿ ನೋಡಿದರೆ ಗೊತ್ತಾಗುತ್ತದೆ ಎಂದರು.
2020ರ ಮೊದಲ 6 ತಿಂಗಳ ಒಳಗೆ ಚುನಾವಣೆ ನಡೆಯುತ್ತೆ ಅಂತ ಎಲ್ಲರೂ ಮಾತನಾಡ್ತಿದ್ದಾರೆ. ಪರಿಸ್ಥಿತಿ ನೋಡಿದರೆ ಹಾಗೇ ಅನ್ನಿಸುತ್ತಿದೆ. ವರ್ಗಾವಣೆ ದಂಧೆ ಬಗ್ಗೆಯೂ ಒಂದು ತನಿಖೆ ನಡೆಯಲಿ ಎಂದು ಆಗ್ರಹ ಮಾಡಿದರು.
ಎಂಬಿ ಪಾಟೀಲ್ ಮೇಲೆ ಬಿಎಸ್ ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆಂಬ ಆರೋಪ ವಿಚಾರದಲ್ಲಿ ಮಾತನಾಡಿದ ಅವರು, ನನ್ನ ಮೇಲೆ ಯಡಿಯೂರಪ್ಪನವರಿಗೆ ಯಾವುದೇ ದ್ವೇಷವಿಲ್ಲ. ಯಡಿಯೂರಪ್ಪಗೆ ನನ್ನ ಮೇಲೆ ಅಂತಹ ಅಭಿಪ್ರಾಯವಿಲ್ಲ ಎಂದರು.
ಬೆಳಗಾವಿ ಸುವರ್ಣ ಸೌಧದಲ್ಲಿ ಈ ಬಾರಿ ಚಳಿಗಾಲದ ಅಧಿವೇಶನವನ್ನು ರಾಜ್ಯ ಸರಕಾರ ನಡೆಸುವುದಿಲ್ಲ ಎಂಬ ವರದಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವರು, ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಮಾಡಬೇಕು. ಅಲ್ಲಿ ಅಧಿವೇಶನ ಮಾಡಿದ್ರೆ ಸಂತ್ರಸ್ಥರು ಬಂದು ಕೂರ್ತಾರೆ ಅನ್ನೋ ಭಯ ಬಿಜೆಪಿಗಿದೆ. ಹಾಗಾಗ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದರು.