ಬೆಳಗಾವಿ: ವೈದ್ಯರು ಸಮಾಜದ ರಕ್ಷಕರಿದ್ದಂತೆ. ಹಗಲಿರುಳು ರೋಗಿಗಳ ಸೇವೆಯಲ್ಲಿಯೇ ತಮ್ಮ ಆಯುಷ್ಯ ಕಳೆಯುತ್ತಾರೆ ಆದ್ದರಿಂದ ವೈದ್ಯರಿಗೆ ಸಾಮಾಜಿಕ ಅತ್ಯುನ್ನತ ಮನ್ನಣೆಯು ಅವಶ್ಯಕ ಎಂದು ಯುಎಸ್‌ಎಂ ಕೆಎಲ್ಇಯ ನಿಯೋಜಿತ ನಿರ್ದೇಶಕ ಡಾ| ಅಶೋಕ ಪಾಂಗಿ ಹೇಳಿದರು.
ನಗರದ ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಲೋಕಮಾನ್ಯ ಮಲ್ಟಿಪರ್ಪಸ ಕೋ ಆಪರೇಟಿವ್ ಸೊಸೈಟಿಯ ವತಿಯಿಂದ ವೈದ್ಯರ ದಿನದ ಅಂಗವಾಗಿ ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ವೈದ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೈದ್ಯ ಮತ್ತು ಸಮಾಜ ಬೇರೆ ಬೇರೆಯಾಗಿಲ್ಲ. ವೈದ್ಯ ವೃತ್ತಿಯು ಸಮಾಜದ ಒಂದು ಅವಿಭಾಜ್ಯ ಅಂಗವಾಗಿದೆ. ಆದ್ದರಿಂದ ವೈದ್ಯರನ್ನು ನಿಮ್ಮಲ್ಲಿ ಒಬ್ಬರಂತೆ ಕಾಣಿರಿ ಎಂದರು.
ಲೋಕಮಾನ್ಯ ಮಲ್ಟಿಪರ್ಪಸ ಕೋ ಆಪರೇಟಿವ್ ಸೊಸೈಟಿಯ ಸಂಯೋಜಕ ವಿನಾಯಕ ಜಾಧವ ಮಾತನಾಡಿ, ವೈದ್ಯರು ತಮ್ಮ ಸ್ವಹಿತಾಸಕ್ತಿ ಮತ್ತು ತಮ್ಮ ಕೌಟುಂಬಿಕ ಜೀವನ ಕಡೆಗಣಿಸಿ ರೋಗಗಳ ಸೇವೆ ಮಾಡುತ್ತಾರೆ. ಆದ್ದರಿಂದ ಅವರು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ ಎಂದರು.
ಮಾಜಿ ಮೇಯರ ವಿಜಯ ಮೋರೆ ಮಾತನಾಡಿ, ಸಮಾಜದ ರಕ್ಷಣೆ ಮಾಡುತ್ತಿರುವ ವೈದ್ಯರಿಂದ ಪ್ರತಿಯೊಬ್ಬರೂ ರೋಗಗಳಿಂದ ಮುಕ್ತಿ ಪಡೆಯುವದರ ಜಿತೆಗೆ ಆರೋಗ್ಯಕರ ಜೀವನ ಪದ್ಧತಿಯನ್ನು ಅರಿಯುತ್ತಾನೆ ಎಂದರು. ಈ ವೇಳೆ 75 ವೈದ್ಯರನ್ನು ಸನ್ಮಾನಿಸಲಾಯಿತು. ಸಂತೋಷ ಮಮದಾಪುರ, ಸಂಜಯ ಸವ್ವಾಶೇರಿ, ಡಾ| ಬಿ.ಬಿ. ಪುಟ್ಟಿ ಹಾಗೂ ಡಾ| ಪಿ.ಎಸ್. ಅರಳಿಕಟ್ಟಿ ಉಪಸ್ಥಿತರಿದ್ದರು.
ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕ ಡಾ| ಎಸ್.ಸಿ. ಧಾರವಾಡ ಸ್ವಾಗತಿಸಿದರು. ಸಂತೋಷ ಇತಾಪೆ ನಿರೂಪಿಸಿದರು. ಅರುಣ ನಾಗಣ್ಣವರ ವಂದಿಸಿದರು.