Advertisement

ಅವ್ಯವಸ್ಥೆ… ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ

08:25 AM May 18, 2024 | Team Udayavani |

ಶಿವಮೊಗ್ಗ: ಇತಿಹಾಸಕಾರರ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕೆಳದಿ ಸಾಮ್ರಾಜ್ಯದ ಶಾಸನವೊಂದು ಉತ್ತದ ಪ್ರದೇಶದ ಕಾಶಿಯಲ್ಲಿ ಬಟ್ಟೆ ಒಗೆಯಲು, ಕಾಲು ಸಂಕವಾಗಿ ಬಳಕೆಯಾಗುತ್ತಿದ್ದು ಕೆಳದಿ ರಾಜರ ವಂಶಸ್ಥರು ಹಾಗೂ ಸಾವರ್ಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಡಿಗೆ, ದೇಶಕ್ಕೆ ಅನೇಕ ಧಾರ್ಮಿಕ ಕೊಡುಗೆ ನೀಡಿರುವ ಕೆಳದಿ ಶಿವಪ್ಪನಾಯಕ ಅವರಿಗೆ ಸೇರಿದ ಶಾಸನವನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ.

Advertisement

“ಕರ್ನಾಟಕದ ಒಂದು ಶಾಸಕ ಕಪಿಲಧಾರ ಸರೋವರದಲ್ಲಿ ಬಟ್ಟೆ ಒಗೆಯಲು, ಕಾಲು ಸಂಕವಾಗಿ ಬಳಸುತ್ತಿದ್ದಾರೆ. ಇದು ಕನ್ನಡ ನಾಡಿಗೆ, ಕನ್ನಡ ಭಾಷೆಗೆ ಕಳಂಕ. ಅತಿ ಹೆಚ್ಚು ಕನ್ನಡದ ಶಾಸನಗಳು ಸಿಗುವುದು ಕೆಳದಿ ಅರಸರ ಕಾಲದಲ್ಲಿ. ಉತ್ತರ ಭಾರತದಲ್ಲಿ ಅತಿ ಹೆಚ್ಚು ಧಾರ್ಮಿಕ ಕೊಡುಗೆಗಳನ್ನು ಕೊಟ್ಟವರಲ್ಲಿ ಕೆಳದಿ ಶಿಪಪ್ಪನಾಯಕ, ಅವನ ಅಜ್ಜ ಸಂಕಣ್ಣ ನಾಯಕ ಪ್ರಮುಖರು. ಕಾಶಿ ಜಂಗಮವಾಡಿ ಮಠ ಪಂಚಪೀಠದಲ್ಲಿ ಒಂದು ಶ್ರೇಷ್ಠವಾದ ಮಠ. ಅದಕ್ಕೆ ಕೆಳದಿ ಅರಸರು ನಡೆದುಕೊಳ್ಳುತ್ತಿದ್ದರು. ಯುವರಾಜರು ವಿದ್ಯಾಭ್ಯಾಸಕ್ಕೆ ಅಲ್ಲಿಗೆ ಹೋಗುತ್ತಿದ್ದರು. 1558-60ರ ಅವಧಿಯಲ್ಲಿ ಸಂಕಣ್ಣ ನಾಯಕ ಅಲ್ಲಿ ಐದು ದೇವಸ್ಥಾನಗಳನ್ನು ಅಭಿವೃದ್ಧಿಪಡಿಸುತ್ತಾನೆ. ಅದರಲ್ಲಿ ಪ್ರಮುಖವಾದದ್ದು ಕಪಿಲಧಾರ ಸರೋವರ. ನಂತರ ಸಿದ್ದಪ್ಪನ ನಾಯಕ ಮಗ ಕೆಳದಿ ಮಲ್ಲರಸ ನಾಯಕರ ಶ್ರೇಷ್ಠ ದೊರೆ ಕಪಿಲಧಾರ ಸರೋವರನ್ನು ಅಭಿವೃದ್ಧಿಪಡಿಸುತ್ತಾರೆ. ಅದರ ಶಾಸನವನ್ನು ಅಲ್ಲಿ ಹಾಕಿದ್ದರು. ಅದು ಈಗ ಕಾಲು ಸಂಕವಾಗಿದೆ. ಈ ಶಾಸನಕ್ಕೆ ಹೋಲಿಕೆ ಇರುವ ಸಂಸ್ಕೃತ ಭಾಷೆಯಲ್ಲಿ ಇರುವ ಶಾಸನ, ಆ ಕಾಲದಲ್ಲಿ ದೆಹಲಿ ಸುಲ್ತಾನರ ಆಡಳಿತ ಇದ್ದಿದ್ದರಿಂದ ಪರ್ಷಿಯನ್ ಭಾಷೆಯಲ್ಲಿ ಒಂದು ಶಾಸನ ಕೂಡ ಇದೆ. ಸಂಸ್ಕೃತ, ಪರ್ಷಿಯನ್ ಶಾಸನಗಳು ಉತ್ತಮ ಸ್ಥಿತಿಯಲ್ಲಿ ಇವೆ. ಕನ್ನಡ ಶಾಸನ ಮಾತ್ರ ದುಸ್ಥಿತಿಯಲ್ಲಿ ಇದೆ. ಇಂತಹ ಒಂದು ಶಾಸನವನ್ನು ಭಾರತೀಯ ಪುರಾತತ್ವ ಇಲಾಖೆ ಹಾಗೂ ಕರ್ನಾಟಕ ಸರಕಾರ ಇದನ್ನು ಸಂರಕ್ಷಿಸಬೇಕು” ಎಂದು ಕೆಳದಿ ಶಿವಪ್ಪ ನಾಯಕನ ಕುಟುಂಬಸ್ಥರೇ ಆದ ಕಲ್ಯಾಣ್ ಕುಮಾರ್ ಆಗ್ರಹಿಸಿದರು.

ಕೆಳದಿ ಸಂಸ್ಥಾನವು ಮಲೆನಾಡು, ಕರಾವಳಿ ಭಾಗವನ್ನು ಒಳಗೊಂಡಂತೆ ಆಡಳಿತ ನಡೆಸಿದ ದೊಡ್ಡ ರಾಜಮನೆತನ. ಕೆಳದಿ ಅರಸರ ಕಾಲದ ಕೊಡುಗೆಗಳು ದೇಶದ ಉದ್ದಗಲಕ್ಕೂ ದೊರೆಯುತ್ತವೆ. ಧಾರ್ಮಿಕ ಕ್ಷೇತ್ರಕ್ಕೆ ಮಹಾನ್ ಕೊಡುಗೆ ನೀಡಿರುವ ಕೆಳದಿ ಅರಸರಿಗೆ ಸೇರಿದ ಶಾಸನವನ್ನು ಉತ್ತರ ಪ್ರದೇಶ ಸರಕಾರದ ಜತೆ ಮಾತನಾಡಿ ರಕ್ಷಿಸಬೇಕೆಂದು ಮಲೆನಾಡಿನ ಜನರು ಆಗ್ರಹಿಸಿದ್ದಾರೆ.

ಕೆಳದಿ ಸಂಸ್ಥಾನದ ಕನ್ನಡ ಶಾಸನ ಕಾಶಿಯಲ್ಲಿ ಅನಾಥವಾಗಿ ಬಿದ್ದಿದೆ. ಶಾಸನವನ್ನು ಬಟ್ಟೆ ತೊಳೆಯಲು ಬಳಸುತ್ತಿದ್ದಾರೆ. ಕೂಡಲೇ ಸರ್ಕಾರ ಶಾಸನ ಸಂರಕ್ಷಣೆಗೆ ಮುಂದಾಗಬೇಕು ಎನ್ನುತ್ತಾರೆ ಪ್ರವೀಣ್ ಸಾಗರ.

Advertisement
Advertisement

Udayavani is now on Telegram. Click here to join our channel and stay updated with the latest news.

Next