ಮಹಾನಗರ: ಮಂಗಳೂರು ಪಾಲಿಕೆ ವ್ಯಾಪ್ತಿಯ ಶ್ವಾನಗಳಲ್ಲಿ ಮೆದುಳು ಜ್ವರ ಲಕ್ಷಣದ ಸಾಂಕ್ರಾಮಿಕ ರೋಗ ಹರಡುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. “ಕ್ಯಾನೈನ್ ಡಿಸ್ಟೆಂಪರ್’ ಹೆಸರಿನ ಈ ಮಾರಣಾಂತಿಕ ಕಾಯಿಲೆ ನಗರದ ಹಲವು ನಾಯಿಗಳಿಗೆ ಈಗಾಗಲೇ ಹಬ್ಬಿದೆ.
ಒಂದು ನಾಯಿಯಿಂದ ಮತ್ತೂಂದಕ್ಕೆ ಗಾಳಿಯ ಮೂಲಕ ಈ ಕಾಯಿಲೆ ಹರಡುವ ಈ ಕಾಯಿ ಲೆ ಕೈಕಂಬ, ಹರಿಪದವು, ಮೇರಿಹಿಲ್, ಪಡೀಲ್, ಬಜಾಲ್, ಸುರತ್ಕಲ್, ಕಾನ ಸಹಿತ ವಿವಿಧ ಭಾಗಗಳಲ್ಲಿ ನಾಯಿಗಳಿಗೆ ಕಂಡುಬರುತ್ತಿದೆ. ಮನೆಗಳಲ್ಲಿ ಸಾಕು ನಾಯಿಗಳಿಗಿಂತಲೂ ಹೆಚ್ಚಾಗಿ ಬೀದಿ ನಾಯಿಗಳಲ್ಲಿ ಹರಡುತ್ತಿದೆ. ಎನಿಮಲ್ ಕೇರ್ ಟ್ರಸ್ಟ್ ಅಧಿಕಾರಿಗಳ ಪ್ರಕಾರ ಸದ್ಯ ನಗರದ ಸುಮಾರು ಶೇ.30ರಿಂದ 40ರಷ್ಟು ಬೀದಿ ನಾಯಿಗಳಲ್ಲಿ ಈ ರೋಗವಿದೆ. ಸರಿಯಾದ ಚಿಕಿತ್ಸೆ ಸಿಗದಿದ್ದರೆ ಈ ಅಂಕಿ ಅಂಶ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ರೋಗ ನಿರೋಧಕ ಶಕ್ತಿ ಹೆಚ್ಚಿರುವ ನಾಯಿಗಳಿಗೆ ಮತ್ತು ಈ ಹಿಂದೆ ಈ ರೋಗಕ್ಕೆ ತುತ್ತಾದ ಶ್ವಾನಗಳಲ್ಲಿ ಅಷ್ಟೊಂದಾಗಿ ಈ ಕಾಯಿ ಲೆ ಬಾಧಿಸುವುದಿಲ್ಲ. ನಾಯಿಗಳಿಗೆ ವರ್ಷಂಪ್ರತಿ ಲಸಿಕೆ ಹಾಕುವ ಮೂಲಕ ಈ ರೋಗ ಬಾರದಂತೆ ತಡೆಗಟ್ಟಬಹುದು. ಆದರೆ ಬೀದಿ ನಾಯಿಗಳಿಗೆ ಲಸಿಕೆ ನೀಡುವುದು ಸವಾಲಾಗಿದೆ. ಈ ರೋಗಕ್ಕೆಂದು ಪ್ರತ್ಯೇಕ ಲಸಿಕೆ ಇಲ್ಲ. ಬಲದಾಗಿ, ಸುಮಾರು ಏಳು ರೋಗಗಳಿಗೆ ಹೊಂದಿಕೊಳ್ಳುವಂತೆ ಡಿಎಚ್ ಪಿಪಿಐ ಲಸಿಕೆ ನೀಡಲಾಗುತ್ತದೆ.
ಸರಕಾರಿ ಪಶು ಆಸ್ಪತ್ರೆಗಳಲ್ಲಿ ಈ ಲಸಿಕೆ ಸಿಗುವುದಿಲ್ಲ. ಖಾಸಗಿಯಾಗಿ ನೀಡುವುದಾದರೆ ಲಸಿಕೆಗೆ ಸುಮಾರು 600ರಿಂದ 800 ರೂ. ವರೆಗೆ ಇದೆ. ಎನಿಮಲ್ ಕೇರ್ ಟ್ರಸ್ಟ್‌ನ ಸುಮಾ ನಾಯಕ್ “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, “ನಗರದ ಹೆಚ್ಚಿನ ಬೀದಿ ನಾಯಿಗಳಲ್ಲಿ “ಕ್ಯಾನೈನ್ ಡಿಸ್ಟೆಂಪರ್’ ರೋಗ ಕಾಣಿಸಿಕೊಳ್ಳುತ್ತಿದೆ. ಎನಿಮಲ್ ಕೇರ್ ಟ್ರಸ್ಟ್ ನಿಂದ ಈಗಾಗಲೇ ಕೆಲವು ನಾಯಿಗಳನ್ನು ರಕ್ಷಣೆ ಮಾಡಿದ್ದೇವೆ. ಎನಿಮಲ್ ಕೇರ್ ನಲ್ಲಿ ಐಸೋಲೇಶನ್ ವಾರ್ಡ್‌ನಲ್ಲಿ ಈಗಾಗಲೇ 40ಕ್ಕೂ ಹೆಚ್ಚು ನಾಯಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಅದರಲ್ಲಿ ಹೆಚ್ಚಿನವು ಗುಣಮುಖವಾಗಿದೆ’ ಎನ್ನುತ್ತಾರೆ.
Related Articles
ಲಕ್ಷಣಗಳೇನು?
“ಕ್ಯಾನೈನ್ ಡಿಸ್ಟೆಂಪರ್’ ರೋಗಕ್ಕೆ ತುತ್ತಾದ ಶ್ವಾನಗಳಲ್ಲಿ ಕಂಡುಬರುವ ಪ್ರಾಥಮಿಕ ಲಕ್ಷಣ ಗಳಂತೆ ಆ ನಾಯಿಗಳು ಮೂಗು, ಕಣ್ಣಿನಿಂದ ಸಿಂಬಳ ಸುರಿಸುತ್ತವೆ, ಊಟ ಬಿಡುತ್ತವೆ, ನಿಶಕ್ತಿಯಿಂದ ಕೂಡಿದ್ದು, ಫಿಟ್ಸ್ ಬಂದಂತೆ ವರ್ತಿಸುತ್ತದೆ, ಜೊಲ್ಲು ಸುರಿಸಲು ಆರಂಭಿಸುತ್ತವೆ. ಈ ರೋಗ ಉಲ್ಬಣಗೊಂಡರೆ ಈ ವೈರಸ್ ಶ್ವಾನಗಳ ಮೆದುಳು ಮತ್ತು ಶ್ವಾಸಕೋಶ, ಚರ್ಮಗಳಿಗೆ ದಾಳಿಯಿಡುತ್ತದೆ, ಕೊನೆಯಲ್ಲಿ ಸಾವನ್ನಪ್ಪುವ ಸಾಧ್ಯತೆ ಇದೆ. ದೇಸಿ ಮತ್ತು ಪಾಶ್ಚಾತ್ಯ ತಳಿಗಳಲ್ಲಿಯೂ ಈ ರೋಗ ಕಾಣಿಸಿಕೊಳ್ಳುತ್ತದೆ. ಒಮ್ಮೆ ರೋಗ ಬಂದರೆ ಆ ಪ್ರದೇಶದ ಶ್ವಾನಗಳಲ್ಲಿ ಈ ರೋಗ ಗುಣ ಮುಖವಾಗಲು ಸುಮಾರು 4ರಿಂದ 5 ತಿಂಗಳು ತಗಲುತ್ತದೆ ಎನ್ನುತ್ತಾರೆ ವೈದ್ಯರು.
ಮನುಷ್ಯರಿಗೆ ತಗಲುವುದಿಲ್ಲ
“ಕ್ಯಾನೈನ್ ಡಿಸ್ಟೆಂಪರ್’ ಹೆಸರಿನ ಈ ರೋಗ ಸಾಮಾನ್ಯವಾಗಿ ವರ್ಷದ ಎಲ್ಲ ಋತುವಿನಲ್ಲಿ ಇರುತ್ತದೆ. ಆದರೆ ಚಳಿಗಾಲ, ಮಳೆ ಬಿಡುವು ನೀಡಿದ ಸಮಯದಲ್ಲಿ ವೈರಸ್ ತೀವ್ರತೆ ಜಾಸ್ತಿ ಇರುತ್ತದೆ. ಒಂದು ಶ್ವಾನದಿಂದ ಮತ್ತೂಂದು ಶ್ವಾನಕ್ಕೆ ಗಾಳಿಯ ಮೂಲಕ ಈ ವೈರಸ್ ಹರಡುತ್ತದೆ. ಇದರಿಂದ ಮನುಷ್ಯರಿಗೆ ಹರಡುವುದಿಲ್ಲ ಅಲ್ಲದೆ, ಯಾವುದೇ ರೀತಿಯ ತೊಂದರೆ ಇಲ್ಲ’ ಎನ್ನುತ್ತಾರೆ ಪಶು ವೈದ್ಯರು.
ಸಮರ್ಪಕ ಚಿಕಿತ್ಸೆ: ಅಗತ್ಯ ನಗರದಲ್ಲಿ ಶ್ವಾನಗಳಲ್ಲಿ “ಕ್ಯಾನೈನ್ ಡಿಸ್ಟೆಂಪರ್’ ರೋಗ ಹರಡುತ್ತಿರುವ ಬಗ್ಗೆ ಮಾಹಿತಿ ಇದೆ. ಈ ರೋಗಕ್ಕೆ ಸರಕಾರದಿಂದ ಉಚಿತ ಔಷಧ ಸಿಗುವುದಿಲ್ಲ. ಆದರೆ ರೇಬಿಸ್‌ಗೆ ಕ್ಯಾಂಪ್ ಮಾಡಿ ಔಷಧ ನೀಡುತ್ತಿದ್ದೇವೆ. ಒಂದು ಶ್ವಾನದಿಂದ ಮತ್ತೂಂದು ಶ್ವಾನಗಳಿಗೆ ಈ ಕಾಯಿಲೆ ಹರಡುತ್ತದೆ. ಸಮರ್ಪಕ ಚಿಕಿತ್ಸೆ ಸಿಗದಿದ್ದರೆ ಶ್ವಾನಗಳು ಮರಣ ಹೊಂದುವ ಸಂಭವವೂ ಇರುತ್ತದೆ. – ಅರುಣ್‌ಕುಮಾರ್ ಶೆಟ್ಟಿ, ಉಪನಿರ್ದೇಶಕರು, ಪಶು ಪಾಲನಾ ಇಲಾಖೆ. ದ.ಕ. ಜಿಲ್ಲೆ
-ನವೀನ್ ಭಟ್ ಇಳಂತಿಲ