Advertisement

ಹದಿಹರೆಯದ ಪ್ರತಿ ಹತ್ತರಲ್ಲಿ ಓರ್ವ ಭಾರತೀಯ ಸೈಬರ್‌ ಬುಲ್ಲೀಯಿಂಗ್‌

09:39 AM Mar 19, 2020 | mahesh |

ಭಾರತದಲ್ಲಿ ಸೈಬರ್‌ ಬುಲ್ಲೀಯಿಂಗ್‌ (ಇಂಟರ್‌ನೆಟ್‌ ಕಿರುಕುಳ) ಪ್ರಕರಣ ಹೆಚ್ಚಾಗುತ್ತಿದ್ದು, ಪ್ರತಿ ಹತ್ತರಲ್ಲಿ ಓರ್ವ ಹದಿಹರೆಯದ ವ್ಯಕ್ತಿ ಒಂದಲ್ಲ ಒಂದು ರೂಪದಲ್ಲಿ ಇದಕ್ಕೆ ಒಳಗಾಗುತ್ತಿದ್ದಾನೆ ಎಂದು ಚೈಲ್ಡ್‌ ರೈಟ್ಸ್‌ ಆ್ಯಂಡ್‌ ಯೂ (ಸಿಆರ್‌ವೈ) ವರದಿ ಹೇಳಿದೆ. ಏನಿದು ಸೈಬರ್‌ ಬುಲ್ಲೀಯಿಂಗ್‌? ದೇಶದಲ್ಲಿ ದಾಖಲಾದ ಪ್ರಕರಣ ಗಳೆಷ್ಟು? ಈ ಕುರಿತಾದ ಮಾಹಿತಿ ಇಲ್ಲಿದೆ.

Advertisement

ಏನಿದು ಸೈಬರ್‌ ಬುಲ್ಲೀಯಿಂಗ್‌ ?
ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಸ್ಮಾರ್ಟ್‌ ಫೋನ್‌ ಮತ್ತು ಟ್ಯಾಬ್ಲೆಟ್‌ಗಳಂತಹ ಡಿಜಿಟಲ್‌ ಸಾಧನಗಳ ಮೂಲಕ ನೀಡುವ ಕಿರುಕುಳವನ್ನು ಸೈಬರ್‌ ಬುಲ್ಲೀಯಿಂಗ್‌ ಅಥವಾ ಇಂಟರ್‌ನೆಟ್‌ ಕಿರುಕುಳ ಎಂದು ವ್ಯಾಖ್ಯಾನಿಸಲಾಗಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ, ಸಾರ್ವಜನಿಕ ಚಾಟ್‌ ರೂಂಗಳಲ್ಲಿ ಮತ್ತು ಆನ್‌ಲೈನ್‌ ಗೇಮಿಂಗ್‌ ಪ್ಲಾರ್ಟ್‌ಫಾರ್ಮ್ಗಳಲ್ಲಿ ಅಧಿಕ ಪ್ರಮಾಣದಲ್ಲಿ ನಡೆಯುತ್ತದೆ.

ಶೇ.25ರಷ್ಟು ಹೆಚ್ಚಳ
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ)ದ ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ ಒಟ್ಟಾರೆಯಾಗಿ ದಾಖಲಾಗುವ ಸೈಬರ್‌ ಅಪರಾಧ ಪ್ರಕರಣಗಳಲ್ಲಿ 2017-18ರ ಅವಧಿಯಲ್ಲಿ ಶೇ.25ರಷ್ಟು ಹೆಚ್ಚಳವಾಗಿದೆ. 2018ರಲ್ಲಿ ಒಟ್ಟು 27,248 ಪ್ರಕರಣಗಳು ವರದಿಯಾಗಿದ್ದು, 2017ರಲ್ಲಿ 21,796 ಪ್ರಕರಣಗಳು ದಾಖಲಾಗಿದ್ದವು.

197 ಪ್ರಕರಣ ಹೆಚ್ಚಳ
2018ರಲ್ಲಿ ಮಹಿಳೆಯರನ್ನು ಮತ್ತು ಮಕ್ಕಳನ್ನು ಬೆದರಿಸುವ 739 ಪ್ರಕರಣಗಳು ಮತ್ತು 2017ರಲ್ಲಿ 542 ಪ್ರಕರಣಗಳು ದಾಖಲಾಗಿದ್ದವು. ಒಂದು ವರ್ಷ ದಲ್ಲಿ 197 ಪ್ರಕರಣಗಳು ಹೆಚ್ಚಾಗಿವೆ.

ಅಪ್ರಾಪ್ತರದ್ದೇ ಹೆಚ್ಚಿನ ಪಾಲು
ಯುನಿಸೆಫ್ನ 2016ರ ವರದಿಯ ಪ್ರಕಾರ ಜಾಗತಿಕವಾಗಿ ಮೂರರಲ್ಲಿ ಒಂದು ಮಗು ಅಂದರೆ ಶೇ.33ರಷ್ಟು ಮಕ್ಕಳು ಇಂಟರ್‌ನೆಟ್‌ ಬಳಕೆ ಮಾಡುತ್ತಾರೆ. ಇಂಡಿಯಾ ಇಂಟರ್‌ನೆಟ್‌ ವರದಿ 2019ರ ಪ್ರಕಾರ ಭಾರತದಲ್ಲಿ ಮೂವರು ಇಂಟರ್‌ನೆಟ್‌ ಬಳಕೆದಾರರಲ್ಲಿ ಇಬ್ಬರು 12ರಿಂದ 29 ವರ್ಷ ವಯಸ್ಸಿನವರು.

Advertisement

ಒಬ್ಬರಿಗೆ 2 ಖಾತೆಗಳು
ಶೇ.80ರಷ್ಟು ಹುಡುಗರು ಮತ್ತು ಶೇ.59ರಷ್ಟು ಹುಡುಗಿಯರು ಎಲ್ಲ ರೀತಿಯ ಸಾಮಾಜಿಕ ಖಾತೆಗಳನ್ನು ಹೊಂದಿದ್ದು, ಶೇ.31ರಷ್ಟು ಯುವಜನತೆ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿದ್ದಾರೆ.

ಬೆದರಿಕೆ ಪ್ರಕರಣಗಳಲ್ಲಿ ಇಳಿಕೆ
ವರದಿಯ ಅಂಕಿಅಂಶಗಳ ಪ್ರಕಾರ ಬೆದರಿಕೆ ಪ್ರಕರಣ ಗಳು 311ರಿಂದ 223ಕ್ಕೆ ಇಳಿದಿದ್ದು, ಒಟ್ಟು ಪ್ರಮಾಣದಲ್ಲಿ ಶೇ.28.3ರಷ್ಟು ಕಡಿಮೆಯಾಗಿದೆ. ಆದರೆ ಸಮೀಕ್ಷಾಕಾರರು ಮತ್ತು ಅಪರಾಧ ತನಿಖಾ ತಜ್ಞರು ಹೇಳುವಂತೆ ಒಟ್ಟು ಪ್ರಕರಣಗಳ ಪೈಕಿ ಅರ್ಧದಷ್ಟು ಮಾತ್ರ ಘಟನೆಗಳು ದಾಖಲಾಗುತ್ತಿದ್ದು, ಉಳಿದ ಅರ್ಧ ಭಾಗದಷ್ಟು ವರದಿ ಆಗುತ್ತಿಲ್ಲ.

ರಾಜ್ಯದಲ್ಲಿ ದುಪ್ಪಟ್ಟು ಹೆಚ್ಚಳ
2018-19ನೇ ಸಾಲಿನಲ್ಲಿ 5,838 ಇಂಟರ್‌ನೆಟ್‌ ಅಪರಾಧ ಪ್ರಕರಣಗಳು ದಾಖಲಾಗಿದ್ದು, 3 ವರ್ಷಗಳಲ್ಲಿ ಇದರ ಪ್ರಮಾಣ ದುಪ್ಪಟ್ಟಾಗಿದೆ. 2016ರಲ್ಲಿ 1,101 ಮತ್ತು 2017ರಲ್ಲಿ 3,174 ಪ್ರಕರಣಗಳು ದಾಖಲಾಗಿದ್ದವು. ಒಟ್ಟು ಸೈಬರ್‌ ಬುಲ್ಲೀಯಿಂಗ್‌ ಪ್ರಕರಣಗಳ ಪೈಕಿ ಅತೀ ಹೆಚ್ಚು ವಂಚನೆ, ಸುಲಿಗೆ ಮತ್ತು ಲೈಂಗಿಕ ಕಿರುಕುಳ ಉದ್ದೇಶಕ್ಕಾಗಿ ನಡೆದಿವೆ. ವಂಚನೆ – 5,441, ಸುಲಿಗೆ – 97, ಲೈಂಗಿಕ ಕಿರುಕುಳ – 85 ಪ್ರಕರಣಗಳು ದಾಖಲಾಗಿವೆ.

ಕನಿಷ್ಠ ಜ್ಞಾನ ಇಲ್ಲ
ಸಾಮಾಜಿಕ ಮಾಧ್ಯಮ ಖಾತೆಯನ್ನು ರಚಿಸುವ ನಾಲ್ವರು ಹದಿಹರೆಯದವ‌ರ ಪೈಕಿ ಮೂವರಿಗೆ ಖಾತೆ ತೆರೆಯಲು ಇರಬೇಕಾದ ಕನಿಷ್ಠ ವಯಸ್ಸು ಮತ್ತು ಆರ್ಹತೆಯ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಫೇಸ್‌ಬುಕ್‌ ಖಾತೆಯನ್ನು ಹೊಂದಬೇಕಾದರೆ ಕಡ್ಡಾಯವಾಗಿ 13 ವರ್ಷ ಮತ್ತು ಇತರ ಖಾತೆಗಳನ್ನು ತೆರೆಯಬೇಕಾದರೆ 18 ವರ್ಷ ಆಗಿರಬೇಕು.

ವರದಿ ಆಗದಿರಲು ಕಾರಣ
· ಹೆಚ್ಚಿನ ಜನರಿಗೆ ಸೈಬರ್‌ ಬುಲ್ಲೀಯಿಂಗ್‌ ಅಪರಾಧಕ್ಕೆ ಸಂಬಂಧಪಟ್ಟಂತೆ ಇರುವ ಕಾನೂನಿನ ಮಾಹಿತಿ ಇಲ್ಲ.
· ಪ್ರತೀಕಾರ ಭಯ ಅಥವಾ ಮಾನಹಾನಿಯ ಅಂಜಿಕೆ .
· ತನಿಖೆ ನಡೆಸಲು ತರಬೇತಿ ಪಡೆದ ಅಧಿಕಾರಿಗಳಿದ್ದಾರೆಯೇ ಎಂಬ ಮಾಹಿತಿಯೂ ಖಚಿತವಾಗಿಲ್ಲ.
· ಒಟ್ಟಾರೆ ಸಿಆರ್‌ವೈ ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಕೇವಲ ಶೇ.35ರಷ್ಟು ಜನರಿಗೆ ಇಂಟರ್‌ನೆಟ್‌ ಸುರಕ್ಷಾ ಮಾರ್ಗಗಳ ಬಗ್ಗೆ ಅರಿವಿದೆ.

ದೇಶದಲ್ಲಿನ ಇಂಟರ್‌ನೆಟ್‌ ಅಪರಾಧಗಳ ಅಂಕಿಅಂಶ
20016 12,317
2017 21,796
2018 27,248

ಮಹಿಳೆಯರ, ಮಕ್ಕಳ ವಿರುದ್ಧ ನಡೆದ ಸೈಬರ್‌ ಬುಲ್ಲೀಯಿಂಗ್‌ ಪ್ರಕರಣಗಳು
2017 542
2018 739

ಮಹಿಳೆಯರ, ಮಕ್ಕಳ ವಿರುದ್ಧ ನಡೆದ ಇಂಟರ್‌ನೆಟ್‌ ಬೆದರಿಕೆ ಪ್ರಕರಣಗಳು
2017 311
2018 223

ಹುಡುಗರು 409
ಶೇ.9.5  - ಬೆದರಿಕೆ ಅನುಭವಿಸಿದವರು
ಶೇ.5.1  - ವರದಿಯಾದ ಪ್ರಕರಣ

ಹುಡುಗಿಯರು 221
ಶೇ.8.6 - ಬೆದರಿಕೆ ಅನುಭವಿಸಿದವರು
ಶೇ.3.6  - ವರದಿಯಾದ ಪ್ರಕರಣ

ಒಟ್ಟು ಪ್ರಕರಣ 630
ಶೇ.9.2  - ಬೆದರಿಕೆ ಅನುಭವಿಸಿದವರು
ಶೇ.4.6  - ವರದಿಯಾದ ಪ್ರಕರಣ

Advertisement

Udayavani is now on Telegram. Click here to join our channel and stay updated with the latest news.

Next