ಆತ ಒಳ್ಳೆಯ ಹುಡುಗ. ತಾನಾಯಿತು ತನ್ನ ಕೆಲಸವಾಯಿತು ಎಂದುಕೊಂಡೇ ಶಿಕ್ಷಣ ಮುಗಿಸಿದ ಆತನಿಗೆ ಸರ್ಕಾರಿ ನೌಕರಿಯೂ ಸಿಗುತ್ತದೆ. ಅದೆಷ್ಟೋ ಹುಡುಗಿಯರು ಪ್ರೀತಿ, ಪ್ರೇಮ, ಪ್ರಣಯ ಎಂದು ಆತನ ಹಿಂದೆ ಬಿದ್ದರೂ ಆತ ಮಾತ್ರ ಅವರೆಲ್ಲರನ್ನೂ ತಿರಸ್ಕರಿಸಿ, ಮದುವೆಯಾಗಿ ಬರುವ ಹುಡುಗಿಗೆ ನಿಷ್ಠನಾಗಿರುತ್ತಾನೆ. ಹೇಗೋ ಮದುವೆಯೂ ಆಗಿಬಿಡುತ್ತದೆ. ಆದರೆ, ಒಳ್ಳೆಯ ಹುಡುಗನಿಗೆ ಎಲ್ಲವೂ ಒಳ್ಳೆಯದೇ ಆಗಬೇಕೆಂಬ ಯಾವ ನಿಯಮವೂ ಇಲ್ಲ.
ಮದುವೆಯ ಮೊದಲ ರಾತ್ರಿಯಿಂದಲೇ ಆತ ಕೊರಗಲು ಆರಂಭಿಸುತ್ತಾನೆ. ಸಂಸಾರದಲ್ಲೂ ಬಿರುಗಾಳಿ ಬೀಸುತ್ತದೆ. ಅದಕ್ಕೆ ಕಾರಣ ಆತನಲ್ಲಿರುವ ಸಮಸ್ಯೆ. ಹಾಗಾದರೆ ಆ ಸಮಸ್ಯೆಯಿಂದ ಒಳ್ಳೆ ಹುಡುಗ ಹೊರ ಬರುತ್ತಾನಾ ಎಂಬ ಕುತೂಹಲವಿದ್ದರೆ ನೀವು “ಬ್ರಹ್ಮಚಾರಿ’ ಸಿನಿಮಾ ನೋಡಬಹುದು. ಮನುಷ್ಯನಲ್ಲಿರುವ ಸಮಸ್ಯೆಗಳನ್ನಿಟ್ಟುಕೊಂಡು ಈಗಾಗಲೇ ಅನೇಕ ಸಿನಿಮಾಗಳು ಬಂದಿವೆ. “ಬ್ರಹ್ಮಚಾರಿ’ ಕೂಡಾ ಸಮಸ್ಯೆಯೊಂದರ ಸುತ್ತ ಸಾಗುವ ಸಿನಿಮಾ.
ಸುಖ ಸಂಸಾರದ ಕನಸು ಕಂಡ ಹುಡುಗನೊಬ್ಬನ ಬಾಳಿನಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಯನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಈ ಸಿನಿಮಾದ ಮುಖ್ಯ ಉದ್ದೇಶ ಮನರಂಜನೆ. ಹಾಗಂತ ಇಡೀ ಸಿನಿಮಾ ಕೇವಲ ಅಷ್ಟಕ್ಕೇ ಸೀಮಿತವಾಗಿಲ್ಲ. ಅದರಾಚೆ ಸೂಕ್ಷ್ಮ ಸಂದೇಶವೊಂದನ್ನೂ ಹೇಳುತ್ತಾ ಸಾಗುವುದು ಪ್ಲಸ್. ದಾಂಪತ್ಯದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಯಿಂದ ಅದೆಷ್ಟೋ ಜೋಡಿಗಳು ದೂರವಾಗುತ್ತಿದ್ದಾರೆ. ಇಂಥವರಿಗೆ ಈ ಚಿತ್ರದಲ್ಲೊಂದು ತಿಳಿ ಹೇಳುವ ಪ್ರಯತ್ನ ಮಾಡಲಾಗಿದೆ.
ಹಾಗಂತ ಚಿತ್ರದಲ್ಲಿ ಅತಿಯಾದ ಬೋಧನೆ ಇದೆ ಎಂದು ನೀವಂದುಕೊಳ್ಳುವಂತಿಲ್ಲ. ಈ ಚಿತ್ರದ ಮೂಲ ಉದ್ದೇಶ ಮನರಂಜನೆ. ಅದಕ್ಕೆ ನಿರ್ದೇಶಕರು ಇಲ್ಲಿ ಮೋಸ ಮಾಡಿಲ್ಲ. ಚಿತ್ರದ ಆರಂಭದಿಂದಲೂ ನಗಿಸುತ್ತಲೇ ಸಾಗಿದ್ದಾರೆ. ಹಣ, ಅಂತಸ್ತು ಏನೇ ಇದ್ದರೂ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿ ಇಲ್ಲದೇ ಹೋದರೆ ಒಬ್ಬ ವ್ಯಕ್ತಿ ಯಾವ ರೀತಿ ಕೊರಗುತ್ತಾನೆ ಎಂಬ ಅಂಶವನ್ನು ಇಲ್ಲಿ ಹೇಳಲಾಗಿದೆ. ಮೊದಲೇ ಹೇಳಿದಂತೆ ಇದೊಂದು ಕಾಮಿಡಿ ಚಿತ್ರ.
ಹಾಗಾಗಿ, ಇಲ್ಲಿ ಹಾಸ್ಯಕ್ಕೆ ಹೆಚ್ಚು ಒತ್ತು. ಹಾಗಂತ ಇಲ್ಲಿ ಅಶ್ಲೀಲ ದೃಶ್ಯಗಳಾಗಲೀ, ಫ್ಯಾಮಿಲಿ ಮಂದಿ ಮುಜುಗರ ಪಡುವಂತಹ ಸನ್ನಿವೇಶಗಳಾಗಲೀ ಇಲ್ಲ. ಆ ಮಟ್ಟಿಗೆ ಇದು ಫ್ಯಾಮಿಲಿ ಎಂಟರ್‌ಟೈನರ್. ಇನ್ನು, ಚಿತ್ರದ ಒಂದಷ್ಟು ದೃಶ್ಯಗಳಿಗೆ ಕತ್ತರಿ ಹಾಕಿ, ಸಿನಿಮಾದ ವೇಗ ಹೆಚ್ಚಿಸುವ ಅವಕಾಶ ನಿರ್ದೇಶಕರಿಗಿತ್ತು. ನೀನಾಸಂ ಸತೀಶ್ ಇಲ್ಲಿ ಒಳ್ಳೇ ಹುಡುಗ ರಾಮ್ ಆಗಿ ಕಾಣಿಸಿಕೊಂಡಿದ್ದಾರೆ.
ತುಂಬಾ ಗಂಭೀರವಾಗಿರುವ ಪಾತ್ರ. ಆ ಗಂಭೀರತೆಯಲ್ಲೇ ಪ್ರೇಕ್ಷಕರನ್ನು ನಗಿಸಲು ಪ್ರಯತ್ನಿಸಿದ್ದಾರೆ. ನಾಯಕಿ ಅದಿತಿ ಪ್ರಭುದೇವ ಅವರಿಗೆ ನಟನೆಗೆ ಅವಕಾಶವಿರುವ ಪಾತ್ರ ಸಿಕ್ಕಿದೆ. ತುಂಬಾ ಬೋಲ್ಡ್ ಅಂಡ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಶಿವರಾಜ್ ಕೆ.ಆರ್.ಪೇಟೆ, ದತ್ತಣ್ಣ, ಪದ್ಮಜಾ ರಾವ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಹಾಡು ಇಷ್ಟವಾಗುತ್ತದೆ.
ಚಿತ್ರ: ಬ್ರಹ್ಮಚಾರಿ
ನಿರ್ಮಾಣ: ಉದಯ್ ಮೆಹ್ತಾ
ನಿರ್ದೇಶನ: ಚಂದ್ರಮೋಹನ್
ತಾರಾಗಣ: ಸತೀಶ್ ನೀನಾಸಂ, ಅದಿತಿ ಪ್ರಭುದೇವ, ದತ್ತಣ್ಣ, ಅಚ್ಯುತ್ ಕುಮಾರ್ ಮತ್ತಿತರರು.
* ರವಿಪ್ರಕಾಶ್ ರೈ