ಬೆಂಗಳೂರು: ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಶುಕ್ರವಾರ ನಡೆದ ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ನುಗ್ಗಲು ಯತ್ನಿಸಿದ ಮೈಸೂರು ಮೂಲದ ಪರಶುರಾಮ್ ಎಂಬಾತನ ವಿರುದ್ಧ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಮತ್ತೂಂದೆಡೆ ಆರೋಪಿ ಪರಶುರಾಮ್‌ನ ವಿಚಾರಣೆ ವೇಳೆ ಈ ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಅವರ ಎದುರೇ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.
ಸದ್ಯ ಪರಶುರಾಮ್ ವಿರುದ್ಧ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡುವುದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಮೈಸೂರು ಮೂಲದ ಪರಶುರಾಮ್ 1993ರಲ್ಲಿ ಕೆಪಿಎಸ್‌ಸಿ ಪರೀಕ್ಷೆ ಬರೆದಿದ್ದರು. ಆದರೆ, ಪರೀಕ್ಷೆ ಫಲಿತಾಂಶವನ್ನು ಸರ್ಕಾರ ತಡೆಹಿಡಿದಿತ್ತು. ಅದರಿಂದ ಬೇಸತ್ತು ಮನವಿ ಕೊಡಲು ಪತ್ರಕರ್ತರ ಗ್ಯಾಲರಿಯಿಂದ ಜಿಗಿದು ಸಿಎಂ ಬಳಿ ನುಗ್ಗಲು ಯತ್ನಿಸಿದ್ದರು. ಮೊದಲು ಸಿದ್ದರಾಮಯ್ಯ ಅವರ ಗಮನ ಸೆಳೆಯಲು ಪತ್ರ ಪ್ರದರ್ಶಿಸಿದ್ದರು. ಸಿದ್ದರಾಮಯ್ಯ ಅವರು ಗಮನಿಸದಿದ್ದಾಗ ಮೈದಾನಕ್ಕೆ ನುಗ್ಗಲು ಪ್ರಯತ್ನಿಸಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು, ಪರುಶರಾಮನನ್ನು ವಶಕ್ಕೆ ಪಡೆದಿದ್ದರು.
ಆರೋಪಿ ಪರಶುರಾಮ್ ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದರೂ ಎಂಬುದು ಪ್ರಾಥಮಿಕ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ 2017ರ ಫೆ.16 ರಂದು ಜ್ಞಾನ ಜ್ಯೋತಿ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ಸರ್ಕಾರಿ ಕಾರ್ಯಕ್ರಮಕ್ಕೆ ನುಗ್ಗಿದ್ದ ಆರೋಪಿ, ಆಗ ಸಿಎಂ ಆಗಿದ್ದ ಸಿದ್ದರಾಮಯ್ಯನವರ ಎದುರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಆತನನ್ನು ವಶಕ್ಕೆ ಪಡೆದಿದ್ದ ಹಲಸೂರು ಗೇಟ್ ಪೊಲೀಸರು ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು. ಇದಾದ ಬಳಿಕ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಪಟಾಕಿ ಸಿಡಿಸಿ ಅವಂತಾರ ಸೃಷ್ಟಿಸಿದ್ದ. ಶುಕ್ರವಾರ ಗಣರಾಜ್ಯೋತ್ಸವದ ದಿನ ಸಿಎಂ ಭೇಟಿಯಾಗಲು ನಿರ್ಧರಿಸಿ ಪಾಕ್ಷಿಕ ಪತ್ರಿಕೆಯ ಸಂಪಾದಕನ ಹೆಸರಲ್ಲಿ ಕಾರ್ಯಕ್ರಮದ ಪಾಸ್ ಪಡೆದು ಕೊಂಡಿದ್ದ ಎಂದು ಪೊಲೀಸರು ಹೇಳಿದರು.