ಹುಬ್ಬಳ್ಳಿ: ಅತ್ಯುತ್ತಮ ಮಾಸ್ಕ್ ಗಳೆಂದು ದುಬಾರಿ ಬೆಲೆಗೆ ಕೊಂಡುಕೊಳ್ಳುವ ಬದಲು ಮನೆಯಲ್ಲಿ ದೊರೆಯುವ ನಿರುಪಯುಕ್ತ ವಸ್ತುಗಳಿಂದ ಯಾರೂ ಬೇಕಾದರೂ ಈ ಸ್ಮಾರ್ಟ್ ಮಾಸ್ಕ್ ತಯಾರಿಸಬಹುದಾಗಿದ್ದು, ಈ ನಿಟ್ಟಿನಲ್ಲಿ ಎಂಜಿನಿಯರ್ ಪದವೀಧರನೊಬ್ಬ ಸ್ಮಾರ್ಟ್ ಮಾಸ್ಕ್ ಅಭಿವೃದ್ಧಿ ಪಡಿಸಿದ್ದಾರೆ. ಸಂವಹನ ಕೊರತೆ ನೀಗಿಸುವ ಕಾರಣಕ್ಕೆ ಈ ಮಾಸ್ಕ್ಗೆ ಸ್ಪೀಕರ್ ಹಾಗೂ ಮೈಕ್ ವ್ಯವಸ್ಥೆ ಮಾಡಿದ್ದಾರೆ.
ಕೋವಿಡ್ ಸೋಂಕು ತಗುಲದಂತೆ ಸುರಕ್ಷತಾ ಕ್ರಮಗಳ ಜತೆಗೆ ಅಗತ್ಯ ಪರಿಕರಗಳ ಅಗತ್ಯವಿದೆ. ಪ್ರಮುಖವಾಗಿ ಸೋಂಕಿನಿಂದ ದೂರವಿರಲು ಮುಖ ಸುರಕ್ಷಿತವಾಗಿಡಲು ಹಲವು ಸಾಮಗ್ರಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಎನ್ 95 ನಂತಹ ಕೆಲ ಮಾಸ್ಕ್ಗಳು ಬಲು ದುಬಾರಿಯಾಗಿದ್ದು, ಸಾಮಾನ್ಯ ಜನರು ಇದನ್ನು ಬಳಸುವುದು ಅಷ್ಟೊಂದು ಸುಲಭವಲ್ಲ. ಹೀಗಾಗಿ ಜನಸಾಮಾನ್ಯರು ನಿರುಪಯುಕ್ತ ವಸ್ತು ಬಳಸಿ ಉತ್ತಮ ಮಾಸ್ಕ್ ತಯಾರಿಸಿದ್ದಾರೆ ಎಂಜಿನಿಯರ್ ಪದವೀಧರ ನವನಗರದ ಶ್ರೀನಿವಾಸ ಪರಡ್ಡಿ. 260ರೂ.ಗಳಲ್ಲಿ ಇದನ್ನು ಸಿದ್ಧಪಡಿಸಿದ್ದಾರೆ. ಶ್ರೀನಿವಾಸ ಇದೇ ಮಾಸ್ಕ್ ಬಳಸುತ್ತಿದ್ದು, ಜನರ ಕುತೂಹಲಕ್ಕೆ ಕಾರಣವಾಗಿದೆ.
ಮಾಸ್ಕ್ ವಿಶೇಷತೆ: ಇಡೀ ಮಾಸ್ಕ್ ತಯಾರಿಕೆಗೆ ಮೂರು ಜ್ಯೂಸ್ ಬಾಟಲ್ ಬಳಸಾಗಿದೆ. ಉಸಿರಾಟ, ಸಂವಹನ, ಫಿಲ್ಟರ್ ಕಾರ್ಯಗಳಿಗೆ ಅಗತ್ಯವಾಗುವಂತೆ ಬಳಸಿಕೊಳ್ಳಲಾಗಿದೆ. ಕೋವಿಡ್ ಸೋಂಕು ಸಾಮಾನ್ಯವಾಗಿ ದ್ರವದ ರೂಪದ ಮೂಲಕ ಹರಡುತ್ತದೆ. ಹೀಗಾಗಿ ಇದ್ದಲಿಗೆ ತೇವಾಂಶ ಹೀರಿಕೊಳ್ಳುವ ಗುಣ ಇರುವುದರಿಂದ ಫಿಲ್ಟರ್ ಸ್ಥಳಗಳಲ್ಲಿ ಇದ್ದಿಲು ಪುಡಿ ಹಾಕಲಾಗಿದ್ದು, ಮೂಗು-ಬಾಯಿಗೆ ಹೋಗದಂತೆ ಕಾಟನ್ ಬಟ್ಟೆ ಅಥವಾ ಹತ್ತಿ ಬಳಲಾಗಿದೆ.
ಸಂವಹನ ಕೊರತೆಗೆ ಉಪಾಯ: ಹಿಂದೆ ಇದೇ ಮಾದರಿಯ ಒಂದು ಮಾಸ್ಕ್ ತಯಾರಿಸಿದ್ದು, ಪ್ರಾಯೋಗಿಕವಾಗಿ ಬಳಸಿದಾಗ ಸಂವಹನ ಕೊರತೆ ಹೆಚ್ಚಿತ್ತು. ಇದನ್ನು ನೀಗಿಸುವ ನಿಟ್ಟಿನಲ್ಲಿ ಮಾಸ್ಕ್ ಗೆ ಚಿಕ್ಕ ಗಾತ್ರದ ಎರಡು ಸ್ಪೀಕರ್ ಹಾಗೂ ಒಂದು ಮೈಕ್ ಬಳಸಿದ್ದಾರೆ. ಈ ವ್ಯವಸ್ಥೆ ಮಾಡಿರುವುದರಿಂದ ಸಂವಹನ ಪ್ರಕ್ರಿಯೆ ಸರಳವಾಗಿದೆ. ಇದಕ್ಕಾಗಿ 800 ಎಂಎಚ್ ರೀಚಾಜೇìಬಲ್ ಬ್ಯಾಟರಿ ಬಳಸಲಾಗಿದೆ. ಕನಿಷ್ಠ ಎರಡರಿಂದ ಮೂರು ದಿನ ಇದನ್ನು ಬಳಸಬಹುದಾಗಿದೆ.
ಸಂವಹನದ ಕೊರತೆ ನೀಗಿಸಲು ಬಳಸಲಾಗಿರುವ ಸರ್ಕ್ನೂಟ್ ಸರಳವಾಗಿದ್ದು, ಸಾಮಾನ್ಯ ಜನರು ಕೂಡ ಇದನ್ನು ತಯಾರಿಸಬಹುದಾಗಿದೆ. ಒಂದು ವೇಳೆ ಎಲೆಕ್ಟ್ರಾನಿಕ್ ವಸ್ತುಗಳ ಬಳಸದಿದ್ದರೆ ಯಾವುದೇ ಖರ್ಚಿಲ್ಲದೆ ತಯಾರಿಸಬಹುದಾಗಿದೆ. ಸಹೋದರಿ ಪೊಲೀಸ್ ಅಧಿಕಾರಿಯಾಗಿದ್ದು, ಕೋವಿಡ್ ವಿರುದ್ಧದ ಹೋರಾಟದಲ್ಲಿ ತೊಡಗಿರುವವರಿಗೆ, ಸಾಮಾನ್ಯರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಒಂದು ಕೊಡುಗೆ ನೀಡಬೇಕೆಂದು ಈ ಮಾಸ್ಕ್ ಅಭಿವೃದ್ಧಿ ಪಡಿಸಿದ್ದೇನೆ ಎನ್ನುತ್ತಾರೆ ಶ್ರೀನಿವಾಸ ಪರಡ್ಡಿ.
ಜನಸಾಮಾನ್ಯರು ಉತ್ತಮ ಮಾಸ್ಕ್ ಧರಿಸಬೇಕೆನ್ನುವ ಕಾರಣಕ್ಕೆ ಮನೆಯಲ್ಲೇ ದೊರೆಯುವ ವಸ್ತುಗಳಿಂದ ಇದನ್ನು ಅಭಿವೃದ್ಧಿ ಪಡಿಸಿದ್ದು, ಈಗಾಗಲೇ ಒಂದು ಮಾಸ್ಕ್ ತಯಾರಿಸಿ ಬಳಕೆ ಮಾಡುತ್ತಿದ್ದೇನೆ. ಬಳಕೆಗೆ ಅತ್ಯಂತ ಯೋಗ್ಯವಾಗಿದ್ದು, ಯಾರೂ ಬೇಕಾದರೂ ಇದನ್ನು ತಯಾರಿಸಬಹುದಾಗಿದೆ. ಸ್ಪೀಕರ್, ಮೈಕ್ ಅಳವಡಿಕೆ ಕಷ್ಟವಾದರೆ ಇವುಗಳ ಹೊರತಾಗಿಯೂ ಈ ಮಾಸ್ಕ್ ಧರಿಸಬಹುದಾಗಿದೆ.
– ಶ್ರೀನಿವಾಸ ಪರಡ್ಡಿ, ಎಂಜಿನಿಯರ್ ಪದವೀಧರ
– ಹೇಮರಡ್ಡಿ ಸೈದಾಪುರ