Advertisement

ಸಿದ್ಧಸೂತ್ರಗಳೊಂದಿಗೆ ಬರುವ ಪ್ರಭೃತಿಗಳ ಬಗ್ಗೆ ಎಚ್ಚರವಿರಲಿ…

10:12 AM Nov 13, 2017 | Team Udayavani |

ಆತ ಪ್ರತಿ “ಆತ ಪ್ರತಿ ಮಧ್ಯಾಹ್ನದ ಹೊತ್ತು ಶ್ರದ್ಧೆಯಿಂದ ತನ್ನ ಚೀಲ ತೆರೆದು ತನ್ನ ವೃತ್ತೀಯ ಸರಕುಗಳನ್ನು ಬಿಡಿಸಿಡುತ್ತಾನೆ? ಒಂದು ಡಜನ್‌ ಕವಡೆ, ಒಂದು ಮಸುಕಾದ, ನಿಗೂಢ ಕುಂಡಲಿಗಳುಳ್ಳ ಚೌಕಾಕಾರದ ಬಟ್ಟೆ, ಒಂದು ನೋಟ್‌ ಪುಸ್ತಕ ಹಾಗೂ ಒಂದು ತಾಳೆ ಗರಿಯ ಕಟ್ಟು. ಆತನ ಹಣೆ ವಿಭೂತಿ ಮತ್ತು ಅರಿಶಿನಗಳಿಂದ ಲೇಪಿಸಲ್ಪಟ್ಟಿದ್ದು, ಕಣ್ಣುಗಳು ಗ್ರಾಹಕರಿಗಾಗಿ ಹುಡುಕಾಡುತ್ತಿರುವ ತೀಕ್ಷ್ಣವಾದ ನೋಟದಿಂದ ಹೊಳೆಯುತ್ತಿದ್ದು ಮುಗ್ಧ ಗ್ರಾಹಕರು ಅದನ್ನು ಯಾವುದೋ ದಿವ್ಯ ಜ್ಯೋತಿಯೆಂದೇ ತಿಳಿದುಕೊಂಡು ನೆಮ್ಮದಿಪಟ್ಟುಕೊಳ್ಳುತ್ತಿದ್ದರು. ಆತನ ಕಣ್ಣುಗಳ ಶಕ್ತಿಯು, ಬಣ್ಣಬಳಿದ ಹಣೆ ಮತ್ತು ಕೆನ್ನೆಗಳಿಂದ ಕೆಳಕ್ಕಿಳಿಯುವ 

Advertisement

ಕಪ್ಪು ಹುರಿಮೀಸೆಯ ನಡುವಿನ ಅದರ ಸ್ಥಾನದಿಂದ ಸಾಕಷ್ಟು ಉದ್ದೀಪನ­ಗೊಂಡಿದ್ದವು. ಅಂತಹ ಸಜ್ಜಿಕೆಯಲ್ಲಿ ಯಾವುದೇ ಮಂದಬುದ್ಧಿ­ಯವನ ಕಣ್ಣುಗಳೂ ಹೊಳೆಯದಿರದು. ಇದಕ್ಕೆಲ್ಲ ಕಿರೀಟವಿಟ್ಟಂತೆ ಒಂದು ಕೇಸರಿ ಬಣ್ಣದ ಮುಂಡಾಸನ್ನು ತನ್ನ ತಲೆಗೆ ಸುತ್ತಿದ್ದನು. ಈ ವರ್ಣ ಸಂಯೋಜನೆ ಎಂದೂ ತಪ್ಪುತ್ತಿರಲಿಲ್ಲ. ಡೇಲಿಯಾ ಹೂವಿ­ನಿಂದ ಆಕರ್ಷಿತವಾದ ಜೇನ್ನೊಣಗಳಂತೆ 

ಜನರು ಆತನೆಡೆಗೆ ಆಕರ್ಷಿತ­ರಾಗುತ್ತಿದ್ದರು. ಟೌನ್‌ ಹಾಲ್‌ ಮಾರ್ಗವನ್ನು ಆವರಿಸಿಕೊಂಡಂತಿರುವ ಹುಳಿಮರದ ಕೊಂಬೆ ಗಳಡಿಯಲ್ಲಿ ಅವನು ಕೂರುವನು……’

ಆರ್‌.ಕೆ. ನಾರಾಯಣ್‌ ಬರೆದ ‘An astroler’s day’ಎಂಬ ಕತೆ ಈ ರೀತಿ ಆರಂಭವಾಗುತ್ತದೆ. ಇದು ಜೋಯಿಸರ ಒಂದು ವರ್ಣನೆ. ನಮ್ಮೆಲ್ಲರ ಮನದಲ್ಲೂ ಇಂತಹ ಬೇರೆ ಬೇರೆ ಚಿತ್ರಣಗಳಿರಬಹುದು. ಯಾಕೆಂದರೆ, ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಜೋಯಿಸರ ಜೊತೆ ಅನುಭವವನ್ನು ಹೊಂದಿದವರೇ ಆಗಿರುತ್ತೇವೆ. ನಮ್ಮ ಜನ್ಮಕುಂಡಲಿ ನೋಡಿಯೋ, ಕವಡೆಗಳನ್ನು ಮಗುಚಿಯೋ, ಅಥವಾ ಬರೇ ಪ್ರಶ್ನೆ ಕೇಳಿದ ಸಮಯವನ್ನು ನೋಡಿಯೋ ನಮಗೆ ಮುಂದಾಗಬಹುದಾದ ವಿಪತ್ತುಗಳನ್ನೂ, ಪರಿಹಾರವನ್ನೂ ಜೋಯಿಸ‌ರು ತಿಳಿಸುತ್ತಾರೆ. ಮುಂಬರುವ ದಿನಗಳಲ್ಲಿ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು, ಏನು ಮಾಡಬಹುದು, ಏನು ಮಾಡಬಾರದು ಎಂಬಿತ್ಯಾದಿ ಚೆಕ್‌-ಲಿಸ್ಟ್‌ ಕೊಡುತ್ತಾರೆ. ಶನಿ, ಕುಜ, ರಾಹುಗಳ ಕ್ಷುದ್ರ ದೃಷ್ಟಿಗಳಿಂದ ಪಾರಾ­ಗುವ ಸೂತ್ರಗಳನ್ನು ತಿಳಿಸಿ ಅರೋಗ್ಯ, ಧನ-ಕನಕಾದಿಗಳ ಅಭಿವೃದ್ಧಿಯ ಉಪಾಯಗಳನ್ನು ಸೂಚಿಸುತ್ತಾರೆ. ಯಾವ ದೇವನ ನಾಮ ಸ್ಮರಣೆ ನಿಮ್ಮ ಭಾಗ್ಯದ ಬಾಗಿಲನ್ನು ತೆರೆಯುವ ಪಾಸ್‌ವರ್ಡ್‌ ಎಂಬ ರಹಸ್ಯವನ್ನೂ ಗ್ರಹಗಳ ಸಧ್ಯದ ಟ್ರಾಫಿಕ್ಕನ್ನು ಪರಿಶೀ­ಲಿಸಿ ಹೇಳಿಕೊಡುತ್ತಾರೆ. ಬಹುತೇಕ ಭಾರತೀಯರು ಇಂತಹ ವಿಷಯ­ಗಳಲ್ಲಿ ಅಗಾಧ ನಂಬಿಕೆ ಇಟ್ಟುಕೊಂಡಿರುತ್ತಾರೆ. ಆದರೆ, ಕೆಲವರು ಇವೆಲ್ಲ ಗೊಡ್ಡು ಸಂಪ್ರದಾಯ, “ಮಂಬೊ-ಜಂಬೊ’ ಎಂದು ಇಲ್ಲದೆ ಮೂಗು ಮುರಿಯುತ್ತಾರೆ.

ಅದೇನೇ ಇರಲಿ. ಅದಕ್ಕೂ ಕಾಸು-ಕುಡಿಕೆಗೂ ಯಾವುದೇ ಸಂಬಂಧವಿಲ್ಲ. ಅವರವರ ನಂಬಿಕೆ ಅವರವರಿಗೆ. ನಮಗೆ ಸಂಬಂಧ­ವಿರುವುದು ಇಂತಹ ಫ‌ಲ ಜ್ಯೋತಿಷ್ಯ ನಮ್ಮ ವಿತ್ತ ಕ್ಷೇತ್ರವನ್ನು ಪ್ರವೇಶಿಸಿದಾಗ ಮಾತ್ರ. ಇಂದು ಯಾವುದೇ ಟಿವಿ ಚಾನೆಲ್‌, ಪತ್ರಿಕೆ­ಗಳನ್ನು ತೆರೆದು ನೋಡಿದರೂ ಆಧುನಿಕ ಶೇರು ಜೋಯಿಸರು ನಮ್ಮೆಲ್ಲರ ಏಳಿಗೆಗಾಗಿ ಅಹರ್ನಿಶಿ ದುಡಿಯುತ್ತಾರೆ. ಸೂಟು, ಬೂಟು, ಟೈ ಧಾರಿಗಳಾದ ಈ ಅವಧೂತಿಗಳು ನಿಮ್ಮ ಹೂಡಿಕೆಯ ಭವಿಷ್ಯ ನುಡಿಯುತ್ತಾರೆ. ಯಾವ ಶೇರು ಮೇಲೆ ಹೋದೀತು, ಯಾವುದು ಕೆಳಕ್ಕೆ ಇಳಿದೀತು, ಯಾವುದನ್ನು ಕೊಳ್ಳಬೇಕು, ಯಾವುದನ್ನು ಕೊಡಬೇಕು, ಮತ್ತು ಯಾವ ಬೆಲೆಗೆ, ಎಂದೆಲ್ಲ ಡಿಟೇಲ್‌ ಆಗಿ ಭವಿಷ್ಯ ನುಡಿಯುತ್ತಾರೆ. ದಿನಾ ಬೆಳಗ್ಗೆ ಏಳು ಗಂಟೆಗೆ ರಾಶಿ ಫ‌ಲ ಜೋಯಿಸರು ಒಂದು ಚಾನೆಲಿನಲ್ಲಿ ದಿನದ ರಾಶಿ ಫ‌ಲ ನುಡಿದು ಜನರನ್ನು ಪ್ರಾಣಭೀತಿಯಿಂದ ಬೆದರಿಸುತ್ತಿದ್ದರೆ ಇನ್ನೊಂದು ಚಾನೆಲಿನಲ್ಲಿ ಈ ಶೇರು ಅನಲಿಸ್ಟುಗಳು ದಿನದ ಶೇರುಭವಿಷ್ಯ ನುಡಿದು ನಿಮ್ಮನ್ನು ಆ ದಿನದ ಜೂಜಾಟಕ್ಕೆ ಹುರಿದುಂಬಿಸುತ್ತಾರೆ.

Advertisement

ಹತ್ತು ಗಂಟೆಗೆ ಮಾರುಕಟ್ಟೆ ತೆರೆದಂತೆಲ್ಲಾ ಇಂದಿನ ನಿಫ್ಟಿ, ಇಂದಿನ ಸೆನ್ಸೆಕ್ಸ್‌, ರಿಲಾಯನ್ಸ್‌, ಇನ್ಫೋಸಿಸ್‌, ಲಿವರ್‌, ಜೆ.ಪಿ ಅಸೊÕà ಇತ್ಯಾದಿ ಎಲ್ಲಾ ಶೇರುಗಳ ಕನಿಷ್ಟ, ಗರಿಷ್ಟ ಮಟ್ಟಗಳು, ಏರಿಳಿಕೆಗಳ ಪ್ರಮಾಣಗಳು ಎಲ್ಲಾ ಎಳೆ ಎಳೆಯಾಗಿ ನಿಮ್ಮೆದುರು ತೆರೆಯ­ಲ್ಪಡುತ್ತವೆ. ಮೊನ್ನೆ ತಾನೆ ಕಾಲೇಜಿಂದ ಮೊಟ್ಟೆಯೊಡೆದು ಹೊರ­‌­ಬಂದ ಪಟಪಟನೆ ಇಂಗ್ಲಿಷ್‌ ಉದುರಿಸುವ ಯುವಕ ಯುವತಿಯರು ಈ ಜೋಯಿಸರನ್ನು ನಿಮ್ಮ ಭಾಗ್ಯೋದಯಕ್ಕಾಗಿ ಮಾತನಾಡಿಸುತ್ತಾರೆ. ಅವರೆಲ್ಲರೂ ತಮ್ಮ ತಮ್ಮ ಆಫೀಸಿನಿಂದಲೇ ಕೆಮರಾಭಿಮುಖರಾಗಿ ತಮ್ಮ ತಮ್ಮ ದಿವ್ಯ ದೃಷ್ಟಿಯಲ್ಲಿ ಗೋಚರಿಸುವಂತೆ ಶೇರುಗಳ ಆ ದಿನದ ಗ್ರಹಚಾರ ಫ‌ಲವನ್ನು ನುಡಿಯುತ್ತಾರೆ. ಅಷ್ಟೇ ಏಕೆ? ಈ ಯುವ ಆಂಕರ್‌ಗಳು ಎಂತಹ ಮಾಯಾವಿಗಳೆಂದರೆ ಒಂದೇ ಬಾರಿಗೆ ಟಿವಿ ಸ್ಕಿ$›àನನ್ನು ಬಾಳೆಲೆ­ಯಂತೆ ಹತ್ತಾರು ಭಾಗಗಳಾಗಿ ಸೀಳಿ ಹಲವಾರು ಜೋಯಿಸರಿಗೆ ಏಕಕಾಲಕ್ಕೆ “ಅಷ್ಟಮಂಗಲ ಪ್ರಶ್ನೆ’ಯನ್ನು ಕೂಡಾ ಇಡಬಲ್ಲರು. – ವಾಲ್ಯೂ ಆಡೆಡ್‌ ಸರ್ವಿಸ್‌, ಯು ನೋ!!

ಓದುಗರು ಕೇಳ ಬೇಕಾದ ಮೊತ್ತ ಮೊದಲನೆಯ ಪ್ರಶ್ನೆ ಏನೆಂದರೆ ಈ ಜೋಯಿಸರು ಫ‌ಲನುಡಿಯುವುದಾದರೂ ಹೇಗೆ? ಅವರ ಭವಿಷ್ಯನುಡಿಯ ಆಧಾರವಾದರೂ ಏನು?

ಅವರ ಬಳಿ ಆರ್‌.ಕೆ. ನಾರಾಯಣ್‌ ವಿವರಿಸಿದಂತೆ ತಾಳೆಗರಿ, ಪಂಚಾಂಗಗಳಿರುವುದಿಲ್ಲ. ಅವರ ಬಳಿ ಇರುವುದು ಬರೇ “ಟೆಕ್ನಿಕಲ್‌ ಚಾರ್ಟ್‌’ ಮಾತ್ರ. ಪ್ರತಿಯೊಂದು ಶೇರಿನ ಬಗ್ಗೆಯೂ ವಿವರವಾದ ಕುಂಡಲಿ ತಯಾರಿಸಿ ಇಡುತ್ತಾರೆ. ಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗದಂತಹ ರಾಹು, ಕೇತು, ಯೋಗ, ಚಾರ, ದೃಷ್ಟಿ, ಒಂಬತ್ತನೇ ಮನೆ, ಇಪ್ಪತ್ತೆçದನೇ ಮನೆ ಎಂಬ ರೀತಿಯ ಗೋಜಲು ಗೋಜಲಾದ ಪರಿಕಲ್ಪನೆಗಳಂತೆಯೇ ಇವರ ಬಳಿಯೂ ಕೂಡಾ ಈಲಿಯಟ್‌ ವೇವ್‌, ಡೈಲಿ ಮೂವಿಂಗ್‌ ಅವರೇಜ್‌, ಕ್ಯಾಂಡಲ್‌ ಸ್ಟಿಕ್‌, ಹೆಡ್‌ ಐನ್‌x ಶೋಲ್ಡರ್‌, ಥರ್ಡ್‌ ಪೀಕ್‌, ಇತ್ಯಾದಿ ಸಂಖ್ಯಾ ಶಾಸ್ತ್ರಾಧಾರಿತ ತಂತ್ರಗಳ ಬತ್ತಳಿಕೆಯೇ ಇದೆ. ಮನುಷ್ಯರು ಒಂದೇ ಪರಿಸ್ಥಿತಿಯಲ್ಲಿ ಬೇರೆ ಬೇರೆಯಾಗಿ ವರ್ತಿಸಿದರೂ ಒಟ್ಟಾರೆ ದೃಷ್ಟಿಯಲ್ಲಿ ನೋಡಿದಾಗ ಒಂದು ಗುಂಪು ಮೆಜೋರಿಟಿ ಜನರ ವರ್ತನೆಯನ್ನು ಪ್ರತಿಪಾದಿಸುತ್ತದೆ. ಅರ್ಥಶಾಸ್ತ್ರವಾಗಲಿ, ಶೇರುಶಾಸ್ತ್ರ ವಾಗಲಿ, ಮನುಷ್ಯನ ವರ್ತನೆಯನ್ನಾಧಾರಿತ ಯಾವುದೇ ವಿಜ್ಞಾ ನವೂ ಕೆಲವು assumptions ಅಥವಾ ಗ್ರಹೀತಗಳ ಮೇಲೆ ನಿಂತಿವೆ. ಮಾನವನ ಭಾವನೆಗಳಿಗೆ ಒಂದು ಲಯವಿರುತ್ತದೆ. 

ಅವರ ಲೋಭ, ಅಂಜಿಕೆಗಳಲ್ಲಿ ಒಂದು ಸಿದ್ಧ ಏರಿಳಿತಗಳಿರುತ್ತವೆ ಎಂಬುದು ಅಂತಹ ಒಂದು ಗ್ರಹೀತ. ಈ ಶಾಸ್ತ್ರ ಅಂತಹ ಗುಂಪುವರ್ತನೆ ಅಥವ ಹರ್ಡ್‌ ಮೆಂಟಾಲಿಟಿಯನ್ನು ಹಿಡಿದಿಡುವ ಪ್ರಯತ್ನ ಮಾಡುತ್ತದೆ. ಮತ್ತು ಬೇರೆ ಬೇರೆ ಹಂತದಲ್ಲಿ ಜನರ ವರ್ತನೆಯನ್ನು ಪ್ರಡಿಕ್ಟ್ ಮಾಡು­ತ್ತಾರೆ. ಆ ರೀತಿ ಯಾವ ಹಂತದಲ್ಲಿ ಯಾವ ಶೇರು ಏರುತ್ತದೆ, ಯಾವುವು ಇಳಿಯುತ್ತವೆ ಎಂಬ ಭವಿಷ್ಯವನ್ನು ನುಡಿಯುತ್ತಾರೆ. ಮನುಷ್ಯನ ಗುಂಪು ವರ್ತನೆ
ಯನ್ನು ಆಧರಿಸಿ ಭವಿಷ್ಯ ನುಡಿಯುವ ಈ ಪದ್ಧತಿಯಲ್ಲಿ “ಹಿಂದೆ ನಡೆದಂತೆಯೇ ಮುಂದೆಯೂ ನಡೆಯುತ್ತದೆ’ ಎನ್ನುವುದು ಕೂಡಾ ಇನ್ನೊಂದು ಗ್ರಹೀತ. ಒಂದು ದೃಷ್ಟಿಯಲ್ಲಿ ಇದೊಂದು “ಡೆಸ್ಪರೇಟ್‌ ಸಯನ್ಸ್‌’. ಅಂದರೆ, ಬೇರೆ ಏನೇನೂ ಇಲ್ಲದಾಗ ಇದ್ದ ಬದ್ದ ಯಾವುದಾದರು ಆಧಾರ ಹಿಡಿದು­ಕೊಂಡು ಡೆಸ್ಪರೇಟ್‌ ಸ್ಥಿತಿಯಲ್ಲಿ ಭವಿಷ್ಯವನ್ನು ನೋಡುವ ಪ್ರಯತ್ನ. 

ಅರ್ಥ ಶಾಸ್ತ್ರದಲ್ಲಿ ಎಲ್ಲಾ ಸಿದ್ಧಾಂತಗಳೂ ‘citeris paribus’ ಎನ್ನುವ ಮಾತಿನೊಂದಿಗೇ ಜನ್ಮ ತಾಳುತ್ತದೆ. ಅಂದರೆ ಆ ಸಿದ್ಧಾಂತ “ಬೇರೆಲ್ಲಾ ವಿಷಯಗಳು ಇದ್ದಂತೆ ತಟಸ್ಥವಾಗಿದ್ದಾಗ ಮಾತ್ರ’ ಲಾಗೂ ಆಗುತ್ತದೆ. ಬೇರೆ ಯಾವುದೇ ಒಂದು ವಿಷಯ ಪಲ್ಲಟವಾದರೂ ಈ ಸಿದ್ಧಾಂತ ಮುರಿದುಬೀಳುತ್ತದೆ. ಆದರೆ ನೈಜ ಜಗತ್ತಿನಲ್ಲಿ ಎಲ್ಲಾ ವಿಷಯಗಳೂ ಯಾವತ್ತೂ ಪಲ್ಲಟವಾಗುತ್ತಲೇ ಇರುತ್ತವೆ. ಇದು ನಿಜವಾದ ಚಾಲೆಂಜ್‌. ಆದ್ದರಿಂದ ಬೇರೆಲ್ಲಾ ವಿಷಯಗಳು ತಟಸ್ಥ­ವೆಂದು ನಂಬಿ ನಾಳೆ ವಿಪ್ರೋ ಎಷ್ಟು ಮೇಲೆ ಹೋಗುತ್ತದೆ ಎಂದು ನುಡಿಯುವುದು ಅತ್ಯಂತ ಅವೈಜ್ಞಾನಿಕವಾದೀತು. ಮೂವಿಂಗ್‌ ಅವರೇಜ್‌ ಎಷ್ಟೇ ಉತ್ತಮವಾಗಿದ್ದರೂ ರಾತ್ರೋ ರಾತ್ರೆ ಅಮೆರಿಕಲ್ಲಿ ಗೂಗಲ್‌ ಫ‌ಲಿತಾಂಶ ಗಣನೀಯವಾಗಿ ಕುಸಿದರೆ ಮರುದಿನ ಇಲ್ಲೂ ಇಡೀ ಮಾರುಕಟ್ಟೆ ಕುಸಿದೀತು. ಪೋಕ್ರಾನ್‌ ಅಣುನ್ಪೋಟ ಯಾವುದೇ ಶೇರು ಜೋಯಿಸರ ಚಾರ್ಟುಗಳಲ್ಲೂ ಬಂದಿರಲಿಲ್ಲ. ಮರುದಿನ ಮಾರುಕಟ್ಟೆ, ಇಸ್ಪೇಟ್‌ ಎಲೆಯಲ್ಲಿ ಕಟ್ಟಿದ ಮನೆ­ಯಂತೆ ಕುಸಿದು ಬಿತ್ತು. ಹಲವರು ಹಣ ಹೂಡಿ ಜೀವಕಳೆದುಕೊಂಡರು.

ಕಾಸುಕುಡಿಕೆಯ ಜಾಣ ಓದುಗರು ಕೇಳಬೇಕಾದ ಎರಡನೆಯ ಪ್ರಶ್ನೆ ಏನೆಂದರೆ, ಈವರೆಗೆ ಈ ಅನಲಿಸ್ಟ್‌ಗಳ ಭವಿಷ್ಯವಾಣಿ ಎಷ್ಟರ ಮಟ್ಟಿಗೆ ಸರಿಯಾಗಿದೆ? ಅವರ ಸಕ್ಸೆಸ್‌ ರೇಟ್‌ ಎಷ್ಟು? ಯಾವುದೇ ಪೂರ್ವಗ್ರಹವಿಲ್ಲದೆ ಪ್ರತಿಯೊಬ್ಬರೂ ಈ ಮಾತನ್ನು ಪರಿಶೀಲಿಸಲೇ ಬೇಕು. “ನೂರಕ್ಕೆ ನೂರು ಬ್ರಹ್ಮನಿಗೆ ಮಾತ್ರವೇ ಸಾಧ್ಯ; ನಾವಾದರೋ ಹುಲು ಮಾನವರು ಎಂಬ ವಾದವನ್ನು ಒಪ್ಪಬಹುದಾದರೂ ಜ್ಯೋತಿಷ್ಯದ ಮಾತು ಬಂದಾಗ ಕನಿಷ್ಟ 80-90%ಆದರೂ ಭವಿಷ್ಯ­ವಾಣಿ ಸರಿಬರದಿದ್ದರೆ ಅದಕ್ಕೆ ಯಾವುದೇ ಬೆಲೆ ಕೊಡಬೇಕಾಗಿಲ್ಲ. ಯಾಕೆಂದರೆ ಒಂದು ನಾಣ್ಯವನ್ನು ಚಿಮ್ಮಿದಾಗ ಹೆಡ್‌ ಬರುತ್ತದೋ, ಟೈಲ್‌ ಬರುತ್ತದೋ ಎಂದು 50%ಮಟ್ಟಿಗೆ ಸರಿಯಾಗಿ ಭವಿಷ್ಯ ನುಡಿಯಲು ಯಾವುದೇ ಜ್ಯೋತಿಷ್ಯದ ಅಗತ್ಯ ಇಲ್ಲ. ಉಂಟೇ? ಅದು ಬಿಟ್ಟು ಕಂಬಳದಲ್ಲಿ ಕೋಣಗಳನ್ನು ಓಡಿಸುವಂತೆ “ಬೈ ಬೈ’ ಎಂದು ಚೀರುತ್ತಾ ಐದು ನಿಮಿಷಗಳಲ್ಲಿ ಮಾರುಕಟ್ಟೆ ಕುಸಿದಾಗ “ಸೆಲ್‌ ಸೆಲ್‌’ ಎಂದು ಚೀರುತ್ತಾ ಮೆರೆದಾಡುವ ಫ‌ಲಜೋಯಿಸರ ಪರಿಣಿತಿಯ ಬಗ್ಗೆ ಏನೆಂದು ಹೇಳ್ಳೋಣ? 

“ಟೆಕ್ನಿಕಲ್‌ ಅನಾಲಿಸಿಸ್‌’ ಎಂಬ ಭಾರಿ ಘನಂದಾರಿ ಹೆಸರು ಹೊತ್ತ ಈ ಶೇರು ಜ್ಯೋತಿಷ್ಯದ ಇತಿಮಿತಿಗಳ ಬಗ್ಗೆ ಸರಿಯಾದ ಅರಿವಿರಲಿ. ಸೂಟು ಬೂಟು ಧರಿಸಿ ಟಿವಿ ಚಾನೆಲುಗಳಲ್ಲಿ ಇಂಗ್ಲಿಷ್‌ನಲ್ಲಿ ಟಸ್‌ ಪುಸ್‌ ಎಂದಾಕ್ಷಣ ಮರುಳಾಗದಿರಿ. ಅಂತಹ ಜೋಯಿ ಸರೂ ಹಾಗೂ ಅವರ ಹಿಂದೆ ಕೆಲಸ ಮಾಡುವ ಕಾಣದ ಕೈಗಳು ಕೋಟ್ಯಂತರ ರೂಪಾಯಿಗಳಲ್ಲಿ ಮುಗª ಹೂಡಿಕೆದಾರರನ್ನೂ ಹಿಂಡಿ ಹೀರುವುದು ಇಂದಿನ ಕಟುವಾಸ್ತವವೆಂಬ ಅರಿವಿರಲಿ.

ಹಾಗಿದ್ರೆ, ಭವಿಷ್ಯ ನೋಡುವುದಕ್ಕೆ ಅರ್ಥವೇ ಇಲ್ಲವೆ? ಮತ್ತೆ ನಾವೆಲ್ಲ ಶೇರು ಖರೀದಿಸುವುದಾದರೂ ಹೇಗೆ? ಎಂದು ನೀವು ಕೇಳಬಹುದು. ಇದೆ. ಭವಿಷ್ಯದ ಬಗ್ಗೆ ನೋಟ ಬೇಕು. ಆದರೆ ಟೆಕ್ನಿಕಲ್‌ ಚಾರ್ಟ್‌ಗಳಿಗಿಂತ ಜಾಸ್ತಿ ಕಂಪೆನಿಗಳ ಫ‌ಂಡಮೆಂಟಲ್‌ ವಿಷಯ­ಗಳಾಧಾರಿತ ವಿಶ್ಲೇಷಣೆ ಅಗತ್ಯ. ಮೂಲಭೂತವಾಗಿ, ದೀರ್ಘ‌ಕಾಲಿಕವಾಗಿ ಒಂದು ಕಂಪೆನಿಯ ಭವಿಷ್ಯವನ್ನು ಅದರ ಫ‌ಂಡಮೆಂಟಲ್‌ ಅನಾಲಿಸಿಸ್‌ ಮೂಲಕ ಮಾತ್ರವೇ ಸೆರೆ ಹಿಡಿಯಬಹುದು. ಏನಿದು ಫ‌ಂಡಮೆಂಟಲ್‌ ಅನಾಲಿಸಿಸ್‌? ಅದು ಹೇಗೆ ಕೆಲಸ ಮಾಡುತ್ತದೆ? ಅದನ್ನು ಇನ್ನೊಮ್ಮೆ ನೋಡೋಣ. ತಬ್‌ ತಕ್‌ ಕೆ ಲಿಯೇ, ವಾರನ್‌ ಬಫೆಟ್‌ನ ಮಾತನ್ನು ಮಾತ್ರ ಮರೆಯದಿರಿ. ಮರೆತು ಮರುಗದಿರಿ. ಮರುಗಿ ನಿರಾಶರಾಗದಿರಿ.

ಜಯದೇವ ಪ್ರಸಾದ ಮೊಳೆಯಾರ

jayadev.prasad@gmail.com

Advertisement

Udayavani is now on Telegram. Click here to join our channel and stay updated with the latest news.

Next