ಯಡ್ರಾಮಿ: ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಶ್ರೀ ಗ್ರಾಮದೇವತೆ ಜಾತ್ರಾ ಉತ್ಸವದಲ್ಲಿ ಸ್ಥಳೀಯ ದಲಿತ ಮುಖಂಡನ ಮೇಲೆ ಕೆಲ ಪೊಲೀಸ್ ಸಿಬ್ಬಂದಿ ನಡೆಸಿದ ಹಲ್ಲೆ ಖಂಡಿಸಿ ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಗುರುವಾರ ಪಿಎಸ್ಐ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಅಮರನಾಥ ಕುಳಗೇರಿ ಮಾತನಾಡಿ, ಶ್ರೀ ಗ್ರಾಮದೇವತೆ ಜಾತ್ರೆಯಲ್ಲಿ ಪಟ್ಟಣದ ದಲಿತ ಮುಖಂಡ ಶ್ರೀಶೈಲ ದೊರಿ ಎಲ್ಲರಂತೆ ಜಾತ್ರೆಯಲ್ಲಿ ಭಾಗಿಯಾಗಿದ್ದ. ಜನರ ಗದ್ದಲದಲ್ಲಿ ಆತನ ಕಾಲು ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಆಕಸ್ಮಿಕವಾಗಿ ತಾಕಿದ್ದನ್ನೇ ನೆಪ ಮಾಡಿಕೊಂಡು, ಪೊಲೀಸ್ ಸಿಬ್ಬಂದಿ ಠಾಣೆಗೆ ಎಳೆದು ತಂದು ಮಾರಣಾಂತಿಕ ಹಲ್ಲೆ ಮಾಡಿದ್ದು ಖಂಡನೀಯವಾಗಿದೆ ಎಂದರು.
ಕೂಡಲೇ ಹಲ್ಲೆ ಮಾಡಿದ ಪೊಲೀಸ್ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇವೆಯಿಂದ ಅಮಾನತುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
ಶ್ರವಣಕುಮಾರ ಡಿ. ನಾಯಕ, ಚಂದ್ರು ಮಲ್ಲಾಬಾದ, ದೊಡೇಶ ಕಾಚಾಪೂರ, ನದೀಮ, ಮರೆಪ್ಪ ನಾಯಕ, ತಾಯಪ್ಪ ನಾಯಕ, ಮರೆಪ್ಪ ಪ್ಯಾಟಿ, ಲಾಳೇಸಾಬ ಮನಿಯಾರ, ಅಮರ ಕುಸ್ತಿ, ವಿವಿಧ ಸಂಘಟನೆಗಳ ಮುಖಂಡರಿದ್ದರು.