Advertisement

ತಾನು ಬದುಕಿದ್ದೇನೆ ಎಂದು ಪತ್ನಿಗೆ ತಿಳಿಸಲು ಭಾರತೀಯ ಯೋಧನ 100 ರೂ. ಟ್ರಿಕ್!

04:06 PM Apr 08, 2020 | Hari Prasad |

ಶ್ರೀನಗರ: ದೂರದ ಊರಿನಲ್ಲಿ ಕೆಲಸದಲ್ಲಿರುವವರು ತಮ್ಮ ಕ್ಷೇಮ ಸಮಾಚಾರವನ್ನು ತಮ್ಮ ಮನೆಯವರಿಗೆ ತಿಳಿಸಲು ಮೊಬೈಲ್ ಫೋನ್, ಪತ್ರ ವ್ಯವಹಾರ ಅಥವಾ ಇನ್ನಿತರ ಮಾಧ್ಯಮಗಳನ್ನು ಬಳಸಿಕೊಳ್ಳುವ ಈ ಕಾಲದಲ್ಲಿ ಇಲ್ಲೊಬ್ಬ ಯೋಧ ತಾನು ಸುರಕ್ಷಿತವಾಗಿದ್ದೇನೆ ಎಂದು ತನ್ನ ಪತ್ನಿಗೆ ತಿಳಿಸಲು ನೂರು ರೂಪಾಯಿ ನೋಟನ್ನು ಬಳಸುತ್ತಿದ್ದಾರೆ. ಆಶ್ಚರ್ಯವಾಗುತ್ತಿದೆಯೇ? ಹೌದು, ಆಶ್ಚರ್ಯವಾದರೂ ನೀವಿದನ್ನು ನಂಬಲೇಬೇಕು.

Advertisement

ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ಧತಿ ಬಳಿಕ ಕಣಿವೆ ರಾಜ್ಯದಲ್ಲಿ ಅನಿರ್ಧಷ್ಟಾವಧಿ ಕರ್ಫ್ಯೂ ವಿಧಿಸಲಾಗಿದೆ ಮಾತ್ರವಲ್ಲದೇ ಮೊಬೈಲ್ ಸಂಪರ್ಕ ಸಹಿತ ಎಲ್ಲಾ ರೀತಿಯ ಸಂವಹನ ವ್ಯವಸ್ಥೆಗಳನ್ನು ಸ್ಥಗಿತಗೊಳಿಸಲಾಗಿದೆ.

ಇದರ ಬಿಸಿ ಅಲ್ಲಿನ ಸ್ಥಳಿಯರಿಗೆ ಮಾತ್ರವಲ್ಲದೇ ಆ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತೀಯ ಯೋಧರಿಗೂ ತಟ್ಟಿದೆ. ಕಣಿವೆ ರಾಜ್ಯದ ವಿವಿಧ ಕಡೆಗಳಲ್ಲಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಯೋಧರು ತಮ್ಮ ಕುಟುಂಬ ಸದಸ್ಯರನ್ನು ಸಂಪರ್ಕಿಸಲು ಸಾಧ್ಯವಾಗದೇ ಪರದಾಡುವಂತಾಗಿದೆ. ಇದಕ್ಕೆ ಯೋಧರೊಬ್ಬರು ವಿಶಿಷ್ಟ ಉಪಾಯ ಒಂದನ್ನು ಕಂಡುಕೊಂಡಿದ್ದಾರೆ.

ಬಾರಾಮುಲ್ಲಾದ ಖ್ವಾಜಾ ಭಾಗ್ ಪ್ರದೇಶದಲ್ಲಿ ಕರ್ತವ್ಯ ನಿರತರಾಗಿರುವ ಭಾರತೀಯ ಸೇನೆಯ ಯೋಧರೊಬ್ಬರು ಪ್ರತೀದಿನ ಎಟಿಎಂಗೆ ಹೋಗಿ ನೂರು ರೂಪಾಯಿಗಳನ್ನು ತೆಗೆಯುತ್ತಾರೆ. ಹೀಗೆ ಮಾಡುವುದರಿಂದ ಅವರ ಕುಟುಂಬದವರಿಗೆ ಈ ಯೋಧನ ಕ್ಷೇಮದ ಕುರಿತು ಹೇಗೆ ಮಾಹಿತಿ ಸಿಗುತ್ತದೆ ಎಂದು ಆಶ್ಚರ್ಯವಾಗುತ್ತಿದೆಯೇ?

ಹೌದು, ಆ ಯೋಧ ಕೊಟ್ಟ ಮಾಹಿತಿ ಪ್ರಕಾರ ಅವರ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರನ್ನು ಅವರ ಪತ್ನಿ ಬಳಸುತ್ತಿದ್ದಾರಂತೆ. ಹೀಗಾಗಿ ಪ್ರತೀ ದಿನ ಇವರು ಎಟಿಎಂನಿಂದ ಹಣ ತೆಗೆದ ಕೂಡಲೇ ಅವರ ಪತ್ನಿಯ ಮೊಬೈಲ್ ಗೆ ಸಂದೇಶ ಹೋಗುತ್ತದೆ. ಇದನ್ನು ನೋಡಿದ ತಕ್ಷಣ ಈ ಯೋಧನ ಪತ್ನಿಗೆ ಮತ್ತು ಅವರ ಕುಟುಂಬದವರಿಗೆ ಇವರು ಕ್ಷೇಮವಾಗಿದ್ದಾರೆ ಎಂಬ ಸಂದೇಶ ತಲುಪುತ್ತದೆ. ಎಟಿಂನಲ್ಲಿ ಕನಿಷ್ಠ 100 ರೂಪಾಯಿಗಳನ್ನು ತೆಗೆಯಲು ಸಾಧ್ಯವಾಗುವುದರಿಂದ ಇವರು ಪ್ರತೀ ದಿನ ಎಟಿಎಂಗೆ ಹೋಗಿ 100 ರೂಪಾಯಿಗಳನ್ನು ವಿತ್ ಡ್ರಾ ಮಾಡುತ್ತಾರೆ.

Advertisement

ಬಾಹ್ಯ ಜಗತ್ತಿನೊಂದಿಗೆ ಸಂಪರ್ಕವನ್ನು ಕಳೆದುಕೊಂಡಿರುವ ಕಾಶ್ಮೀರ ಕಣಿವೆಯಲ್ಲಿ ಸಂವಹನ ಎಷ್ಟು ಕಷ್ಟಸಾಧ್ಯವಾಗಿದೆ ಎಂಬುದನ್ನು ಈ ಒಂದು ಘಟನೆ ಸಾರಿ ಹೇಳುತ್ತಿದೆ. ಮನೆಯವರಿಗೆ ತನ್ನ ಕ್ಷೇಮ ಸಮಾಚಾರವನ್ನು ತಿಳಿಸಲು ಈ ಯೋಧ ಅನುಸರಿಸಿರುವ ಈ ವಿಶಿಷ್ಟ ವಿಧಾನವನ್ನು ಕೇಳಿ ಎಟಿಎಂ ಭದ್ರತಾ ಸಿಬ್ಬಂದಿ ಮತ್ತು ಅಲ್ಲಿದ್ದ ಸ್ಥಳೀಯರು ಒಂದರೆಕ್ಷಣ ಭಾವುಕರಾಗಿದ್ದಾರೆ. ‘ಇಂಡಿಯನ್ ಆರ್ಮಿ ಫ್ಯಾನ್ಸ್’ ಎಂಬ ಫೇಸ್ಬುಕ್ ಪುಟದಲ್ಲಿ ಈ ಘಟನೆಯನ್ನು ಹಂಚಿಕೊಳ್ಳಲಾಗಿದೆ. ಮತ್ತು ಈ ಪೋಸ್ಟ್ ಅನ್ನು 7 ಸಾವಿರ ಮಂದಿ ಶೇರ್ ಮಾಡಿಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next