Advertisement

ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಬೇಕಿದೆ ಕಾಯಕಲ್ಪ

02:22 PM Sep 15, 2022 | Team Udayavani |

ಗದಗ: ಕ್ರಿ.ಶ. 8ನೇ ಶತಮಾನದಿಂದ 17ನೇ ಶತಮಾನದವರೆಗಿನ ಗದಗ, ಬಾಗಲಕೋಟೆ ಸೇರಿದಂತೆ ವಿಜಯಪುರದ 400ಕ್ಕೂ ಹೆಚ್ಚು ಪ್ರಾಚ್ಯವಸ್ತುಗಳನ್ನು ಹೊಂದಿರುವ ನಗರದ ಸರ್ಕಾರಿ ವಸ್ತು ಸಂಗ್ರಹಾಲಯವು ಪುರಾತತ್ವ ಇಲಾಖೆ ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದ ಅನಾಥವಾಗಿದೆ.

Advertisement

ರಾಜ್ಯ ಸರ್ಕಾರದ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವ್ಯಾಪ್ತಿಗೊಳಪಡುವ ವಸ್ತು ಸಂಗ್ರಹಾಲಯ ಗದಗ-ಬೆಟಗೇರಿ ಅವಳಿ ನಗರದಲ್ಲಿರುವ ಕುರಿತು ಸೂಕ್ತ ನಿರ್ವಹಣೆ, ಮಾಹಿತಿ ಫಲಕಗಳಿಲ್ಲದೆ ಪ್ರಚಾರದ ಕೊರತೆಯಿಂದ ಪ್ರವಾಸಿಗರು ಹಾಗೂ ಇತಿಹಾಸಕಾರರಿಂದ ದೂರ ಉಳಿದಿದೆ.

ರಾಜ್ಯದ 15 ಪ್ರಾಚ್ಯವಸ್ತು ಸಂಗ್ರಹಾಲಯಗಳ ಲ್ಲೊಂದಾಗಿರುವ ಗದಗ ನಗರದ ಸರ್ಕಾರಿ ವಸ್ತು ಸಂಗ್ರಹಾಲಯ 1995ರಲ್ಲಿ ರಾಮೇಶ್ವರ ದೇವಾಲಯದಲ್ಲಿ ಮೊದಲು ಆರಂಭಗೊಂಡಿತ್ತು. 1998ರಲ್ಲಿ ಹಳೇ ಕೋರ್ಟ್‌ ಎದುರಿಗೆ ಸ್ವಂತ ಕಟ್ಟಡದಲ್ಲಿ ಕಾರ್ಯಾರಂಭ ಮಾಡಿತು. ಅಲ್ಲಿಂದ ಇಲ್ಲಿಯವರೆಗೆ ಸಮರ್ಪಕ ಮಾಹಿತಿ, ಸೂಚನಾ ಫಲಕ ಹಾಗೂ ಪ್ರಚಾರವಿಲ್ಲದ ಕಾರಣ ಪ್ರವಾಸಗರ ಕೊರತೆ ಕಾಡುತ್ತಿದೆ. ಜತೆಗೆ ಕೆಲಸಗಾರರಿಲ್ಲದೆ ನಿರ್ವಹಣೆ ಕೊರತೆಯಿಂದ ಪುರಾತನ ಶಿಲ್ಪಕಲೆಗಳು ಕಸದ ಮಧ್ಯೆ ಅನಾಥವಾಗಿವೆ.

ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ವಾಸ್ತು ಮತ್ತು ಮೂರ್ತಿ ಶಿಲ್ಪಗಳ ನೆಲೆವೀಡಾಗಿ ಪ್ರಾಚೀನ ಕಾಲದಿಂದಲೂ ಪ್ರಸಿದ್ಧಿ ಪಡೆದ ಗದಗ ನಗರವನ್ನು ಕೃತಪುರ, ಕರ್ತುಕ, ಕರ್ದುಗು, ಕಳ್‌ದುಗು, ಕರದುಗು, ಗಲದುಗ್‌, ಗರ್ದುಗ, ಗದಗು ಎಂಬ ವಿವಿಧ ಹೆಸರುಗಳಿಂದ ಶಾಸನಗಳಲ್ಲಿ ಉಲ್ಲೇಖೀಸಲಾಗಿದೆ. ಅಲ್ಲದೇ ಶಿಲಾಯುಗದ ಅನೇಕ ನೆಲೆಗಳು ದೊರೆತಿವೆ.

ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಕಳಚೂರಿ, ಹೊಯ್ಸಳರು ಹಾಗೂ ಸೇವುಣರ ಕಾಲದ ಶಾಸನಗಳು, ಮೂರ್ತಿಶಿಲ್ಪಗಳನ್ನು ಹೊಂದಿರುವ ವಸ್ತು ಸಂಗ್ರಹಾಲಯಕ್ಕೆ ಸೂಕ್ತ ಪ್ರಚಾರದ ಅವಶ್ಯಕತೆಯಿದೆ ಎಂಬುದು ಇತಿಹಾಸ ತಜ್ಞರ ಅಭಿಪ್ರಾಯವಾಗಿದೆ.

Advertisement

ವಿವಿಧ ಶಿಲ್ಪಗಳು: ಶೈವ, ವೈಷ್ಣವ, ಜೈನ ಧರ್ಮಗಳನ್ನು ಪ್ರತಿಬಿಂಬಿಸುವ ಆದಿನಾಥ, ಪಾರ್ಶ್ವನಾಥ, ಕೃಷ್ಣ, ಕಾಲಭೈರವ, ವೀರಭದ್ರ, ಗೋವರ್ಧನ, ಲಕ್ಷ್ಮೀ, ಶಿವ ಹಾಗೂ ಸಪ್ತ ಮಾತೃಕೆಯರ ಶಿಲ್ಪಕಲೆಗಳು ಸಂಗ್ರಹಾಲಯದಲ್ಲಿವೆ. ಕ್ರಿ.ಶ. 9ನೇ ಶತಮಾನದ ರಾಷ್ಟ್ರಕೂಟರ ಕಾಲದ ಗಜ ಲಕ್ಷ್ಮೀ ಪಟ್ಟಿಕೆ, 11-12ನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದ ವೀರಭದ್ರ, ಉಮಾಮಹೇಶ್ವರ, ಮಹಿಷಾಸುರ ಮರ್ದಿನಿ, ಕುಬೇರ, ಗರುಡನ ಮೇಲೆ ಕುಳಿತಿರುವ ಲಕ್ಷ್ಮೀನಾರಾಯಣ ಮೂರ್ತಿಯ ಶಿಲ್ಪಗಳಿವೆ.

ಬೆಟಗೇರಿಯಲ್ಲಿ ದೊರೆತ ಪ್ರಾಚ್ಯವಸ್ತುಗಳಲ್ಲಿ ಧ್ಯಾನಮುದ್ರೆಯಲ್ಲಿ ಕುಳಿತ ಭಂಗಿಯಲ್ಲಿರುವ ಸಪ್ತ ಮಾತೃಕೆಯರ ಶಿಲ್ಪಗಳಿವೆ. ದಾನಚಿಂತಾಮಣಿ ಅತ್ತಿಮಬ್ಬೆಯು ಜೈನ ಬಸದಿ ಕಟ್ಟಿಸಲು ನೀಡಿದ ಶಾಸನ, ಡಂಬಳದಲ್ಲಿ ದೊರೆತ ಪಾರ್ಶ್ವನಾಥ ಶಿಲ್ಪ ಅದರ ಪಾದ ಪೀಠದ ಮೇಲೆ ಬಸದಿ ನಿರ್ಮಾಣ ಕುರಿತು ತಿಳಿಸುವ 10ನೇ ಶತಮಾನದ ಕನ್ನಡ ಶಾಸನವನ್ನು ಸಂಗ್ರಹಾಲಯ ಹೊಂದಿದೆ.

ಮರದ ಶಿಲ್ಪ-ಪ್ರಾಚ್ಯ ವಸ್ತುಗಳು: ಕ್ರಿ.ಶ. 17ನೇ ಶತಮಾನದಲ್ಲಿ ಮರದಿಂದ ಕೆತ್ತಲ್ಪಟ್ಟ ಗೋವರ್ಧನ ಹಾಗೂ ಲಕ್ಷ್ಮೀ ಮೂರ್ತಿಗಳು ವಿಶೇಷವಾಗಿವೆ. ಇಲಾಖೆ ವತಿಯಿಂದ ಲಕ್ಕುಂಡಿ ಗ್ರಾಮದಲ್ಲಿ ಉತVನನದಲ್ಲಿ ದೊರೆತ ನೂತನ ಶಿಲಾಯುಗದ ಆಯುಧಗಳು, ಬೃಹತ್‌ ಶಿಲಾಯುಗದ ಮಣ್ಣಿನ ಪಾತ್ರೆಗಳು, ಶಾತವಾಹನರ ಕಾಲದ ಮಣ್ಣಿನ ಪಾತ್ರೆಗಳು ಹಾಗೂ ವಿವಿಧ ಆಕಾರ-ಬಣ್ಣದ ಮಣಿಗಳು ಸಂಗ್ರಹಾಲಯದಲ್ಲಿ ವೀಕ್ಷಣೆಗೆ ಲಭ್ಯವಿವೆ.

ಸಿಬ್ಬಂದಿ ಕೊರತೆ: 1998ರಲ್ಲಿ ಆರಂಭವಾದ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿ ಉಚಿತ ಪ್ರವೇಶವಿದೆ. ಆದರೆ, ಪ್ರವಾಸಿಗರ ಕೊರತೆ ಕಾಡುತ್ತಿದೆ. ಕಟ್ಟಡದ ಹೊರಗಡೆ ಇರುವ ವಿವಿಧ ಮೂರ್ತಿ ಹಾಗೂ ಶಿಲ್ಪಕಲೆಗಳ ಕೆಳಗೆ ಬರೆದ ಮಾಹಿತಿ ಅಳಿಸಿ ಹೋಗಿವೆ. ಪ್ರತ್ಯೇಕ ಮಾರ್ಗದರ್ಶಿಯೂ ಇಲ್ಲ. ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿ ಸರ್ಕಾರವೇ ನಿಗದಿಪಡಿಸಿದ ಸಿಬ್ಬಂದಿಯಿಲ್ಲ. ಈ ಹಿಂದೆ ಇದ್ದ ಕ್ಯೂರೇಟರ್‌ ಕೂಡ ಬಡ್ತಿ ಹೊಂದಿ ಕಲಬುರಗಿ ಸರ್ಕಾರಿ ವಸ್ತು ಸಂಗ್ರಹಾಲಯದ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಸುತ್ತಿದ್ದಾರೆ. ಅಲ್ಲದೇ, ಹೆಚ್ಚುವರಿಯಾಗಿ ಗದಗ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲೂ ಕಾರ್ಯ ನಿರ್ವಹಿಸುವ ಮೂಲಕ ತಿಂಗಳಿಗೊಮ್ಮೆ ಇಲ್ಲಿಗೆ ಆಗಮಿಸಿ ಕಡತಗಳನ್ನು ಪರಿಶೀಲಿಸುತ್ತಿದ್ದಾರೆ. ಕೇವಲ ಇಬ್ಬರು ಗ್ರೂಪ್‌ ಡಿ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ಯೂರೇಟರ್‌ ಜತೆಗೆ ಕ್ಲರ್ಕ್‌, ಅಟೆಂಡರ್‌ ಹಾಗೂ ಒಬ್ಬ ಗ್ರೂಪ್‌ ಡಿ ನೌಕರರ ಕೊರತೆ ಕಾಡುತ್ತಿದೆ.

ಮೊದ ಮೊದಲು ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಹೊರತುಪಡಿಸಿ ತಿಂಗಳಿಗೆ 100ಕ್ಕೂ ಅಧಿಕ ಪ್ರವಾಸಿಗರು ವೀಕ್ಷಣೆಗೆ ಆಗಮಿಸುತ್ತಿದ್ದರು. ಕೋವಿಡ್‌ನಿಂದ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಪ್ರಥಮವಾಗಿ ನಗರದ ಪ್ರಮುಖ ಭಾಗಗಳಲ್ಲಿ ಸರ್ಕಾರಿ ವಸ್ತು ಸಂಗ್ರಹಾಲಯವನ್ನು ಸೂಚಿಸುವ ಫಲಕಗಳ ಅವಶ್ಯಕತೆಯಿದೆ. ಈ ಕುರಿತು ಕೇಂದ್ರ ಕಚೇರಿಗೆ ಮಾಹಿತಿ ನೀಡಲಾಗಿದೆ. –ಬಿ.ಸಿ. ರಾಜಾರಾಮ್‌, ಸಹಾಯಕ ನಿರ್ದೇಶಕರು, ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯ, ಕಲಬುರಗಿ

-ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next