ಕೋಲಾರ: ಕೆರೆ ಒತ್ತುವರಿ ತೆರುವುಗೊಳಿಸುವಂತೆ ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಳಿನಿ ಮಾಡಿದ ಮನವಿಗೆ ಕೆರಳಿದ ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ, ನಾನು ಕೆಟ್ಟವನಿದ್ದೇನೆ, ಹೇ ಬಾಯಿ ಮುಚ್ಚು… ರಾಸ್ಕಲ್ ಇತ್ಯಾದಿ ಪದಗಳಿಂದ ಬೆದರಿಕೆ ಹಾಕಿದ್ದಲ್ಲದೆ, ಪೊಲೀಸರಿಗೆ ಆಕೆಯನ್ನು ಎಳೆದೊಯ್ಯುವಂತೆ ಸೂಚಿಸಿದ ಘಟನೆ ತಾಲೂಕಿನ ಎಸ್. ಅಗ್ರಹಾರ ಕೆರೆಯ ವೀಕ್ಷಣೆ ಸಂದರ್ಭದಲ್ಲಿ ಬುಧವಾರ ಸಂಜೆ ಜರುಗಿತು.
ಕೆ.ಸಿ.ವ್ಯಾಲಿಯೋಜನೆಯಕಾಮಗಾರಿಗಳನ್ನು ವೀಕ್ಷಣೆಗೆಂದು ಬುಧವಾರ ಮಧ್ಯಾಹ್ನ ಜಿಲ್ಲೆಗೆ ಆಗಮಿಸಿದ್ದ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ, ರೈತ ಸಂಘದ ನಳಿನಿ ವಿರುದ್ಧ ಅಧಿಕಾರಿ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಹರಿಹಾಯ್ದ ಪೊಲೀಸ್ ಬಲ ಪ್ರಯೋಗಿಸಿ ಬಾಯಿ ಮುಚ್ಚಿಸುವಂತೆ ಮಾಡಿದರು.
ಕೆ.ಸಿ. ವ್ಯಾಲಿ ನೀರು ಹರಿಯುವ ಕಾಲುವೆ ಯಲ್ಲಿ ಕೋಟ್ಯಂತರ ರೂ. ಸರ್ಕಾರಿ ವೆಚ್ಚದಲ್ಲಿಯೇ ಚೆಕ್‌ಡ್ಯಾಂಗಳನ್ನು ನಿರ್ಮಾಣ ಮಾಡಿ ಕೆಲವರ ಅನುಕೂಲಕ್ಕಾಗಿ ಅವುಗಳನ್ನು ಒಡೆದು ಹಾಕುತ್ತಿರುವುದನ್ನು ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ನಳಿನಿ ಸಚಿವ ಮಾಧುಸ್ವಾಮಿ ಗಮನಕ್ಕೆ ತರಲು ಪ್ರಯತ್ನಿಸಿ, 1022 ಎಕರೆ ಇರುವ ಎಸ್.ಆಗ್ರಹಾರ ಕೆರೆಯ ಅಂಗಳದಲ್ಲಿ 100 ಎಕರೆಗೆ ಹೆಚ್ಚು ಒತ್ತುವರಿಯಾಗಿದೆ, ಅಧಿಕಾರಿಗಳೇ ಪಹಣಿ ಮಾಡಿಕೊಟ್ಟಿದ್ದಾರೆ.
ಈ ಒತ್ತುವರಿಯನ್ನು ತೆರವುಗೊಳಿಸುವವರು ಯಾರು ಎಂದು ಸಚಿವರನ್ನು ಪ್ರಶ್ನಿಸಿದರು. ರೈತ ಸಂಘದ ಈ ಪ್ರಶ್ನೆಗೆ ಕೆರಲಿ ಕೆಂಡಾಮಂಡಲರಾದ ಸಚಿವ ಮಾಧುಸ್ವಾಮಿ, ನಾನು ಕೆಟ್ಟವನಿದ್ದೇನೆ, ನನ್ನ ಬಳಿ ಅಹವಾಲು ಮಾತ್ರವೇ ಮಾಡಿಕೊಳ್ಳಬೇಕು ಎಂದು ಸಹನೆ ಕಳೆದುಕೊಂಡರು. ಅಲ್ಲಣ್ಣ ನಾನು ಅಹವಾಲು ಮಾಡಿಕೊಳ್ಳುತ್ತಿರುವುದು ಎಂದು ರೈತ ಸಂಘದ ನಳಿನಿ ಹೇಳುತ್ತಿದ್ದರೂ ಕೇಳದೆ ಬಾಯಿ ಮುಚ್ಚು, ರ್ಯಾಸ್ಕಲ್ ಎಂದು ಗದರಿಸಿ ಈಕೆಯನ್ನು ಎಳೆದೊಯ್ಯಿರಿ ಎಂದು ಪೊಲೀಸರಿಗೆ ತಾಕೀತು ಮಾಡಿದರು.
ಸಚಿವರ ಆದೇಶಕ್ಕಾಗಿಯೇ ಕಾಯುತ್ತಿದ್ದ ಪೊಲೀಸ್ ಅಧಿಕಾರಿಗಳು ನಳಿನಿಯನ್ನು ಎಳೆದಾಡಿದರು. ನಳಿನಿ ಪೊಲೀಸರಿಂದ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗ ಮಹಿಳಾ ಸಿಬ್ಬಂದಿಯನ್ನು ಕರೆಯಿಸಿ ಆಕೆಯನ್ನು ಪಕ್ಕಕ್ಕೆ ಸರಿಸುವಲ್ಲಿ ಯಶಸ್ವಿಯಾದರು. ಕೇಸು ಹಾಕಿ ಹುಟ್ಟಡಗಿಸುವ ಬೆದರಿಕೆ ಹಾಕಿದರು.
ಇಷ್ಟೆಲ್ಲಾ ಘಟನಾವಳಿಗಳು ಜಿಲ್ಲೆಯ ಜನಪ್ರತಿನಿಧಿಗಳಾದ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಸಂಸದ ಎಸ್.ಮುನಿಸ್ವಾಮಿ, ಜಿಲ್ಲಾಧಿಕಾರಿ ಸಿ.ಸತ್ಯ ಭಾಮ ನಳಿನಿಯ ಸಹಾಯಕ್ಕೆ ಆಗಮಿಸಲಿಲ್ಲ. ಕೆರೆ ಒತ್ತುವರಿ ತೆರವು ಹಾಗೂ ಚೆಕ್ ಡ್ಯಾಂಗಳ ಹೊಡೆಯುವ ಮೂಲಕ ಸರಕಾರಿ ಹಣವನ್ನು ಪೋಲು ಮಾಡುತ್ತಿರುವ ರೈತ ಸಂಘದ ಮನವಿಯನ್ನು ಸಚಿವರು ಕಡೆಗೂ ಸ್ಪೀಕರಿಸಲೇ ಇಲ್ಲ.