Advertisement

ನಗರ ಪ್ರಸೂತಿ ಕೇಂದ್ರದಲ್ಲಿಲ್ಲ ಆಂಬ್ಯುಲೆನ್ಸ್‌!

04:24 PM Sep 05, 2021 | Team Udayavani |

ರಾಯಚೂರು: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲ ನಗರ ಭಾಗದಲ್ಲೂ ಆರೋಗ್ಯ ವ್ಯವಸ್ಥೆ ಸುಧಾರಿಸಿಲ್ಲ. ಅದಕ್ಕೊಂದು ತಾಜಾ ಉದಾಹರಣೆ ಇಲ್ಲಿನ ನಗರ ಪ್ರಸೂತಿ ಆರೋಗ್ಯ ಕೇಂದ್ರ.

Advertisement

30 ಬೆಡ್‌ಗಳ ಈ ಪ್ರಸೂತಿ ಆಸ್ಪತ್ರೆಗೆ ಒಂದೇ ಒಂದು ಆಂಬ್ಯುಲೆನ್ಸ್‌ ವ್ಯವಸ್ಥೆ ಕೂಡ ಇಲ್ಲ. ಸರ್ಕಾರ ಜಿಲ್ಲೆಗೊಂದರಂತೆ ನಗರ ಪ್ರಸೂತಿ ಆರೋಗ್ಯ ಕೇಂದ್ರಗಳನ್ನು ತೆರೆದಿದೆ. ನಗರದ ಮಾವಿನ ಕೆರೆ ಹತ್ತಿರವೂ ಇಂಥ ಆಸ್ಪತ್ರೆ ಇದೆ. ಸುಸಜ್ಜಿತ ಕಟ್ಟಡವಿದ್ದು, 30 ಬೆಡ್‌ ಹೊಂದಿರುವ ಈ ಆಸ್ಪತ್ರೆಗೆ ನಗರ ಸೇರಿದಂತೆ ಗ್ರಾಮೀಣ ಭಾಗದಿಂದ ಜನರ ಹೆರಿಗೆಗಾಗಿ, ಪ್ರಾಥಮಿಕ ಚಿಕಿತ್ಸೆಗಾಗಿ ಬರುತ್ತಾರೆ. ಇಲ್ಲಿ ತಿಂಗಳಿಗೆ ಸರಾಸರಿ 50-60 ಹೆರಿಗೆ ಗಳಾಗುತ್ತವೆ. ಲಾಕ್‌ ಡೌನ್‌ ಪೂರ್ವದಲ್ಲಿ ಇಲ್ಲಿ ಒಂದು ತಿಂಗಳಲ್ಲಿ 90ಕ್ಕೂ ಅಧಿಕ ಹೆರಿಗೆ ಮಾಡಿಸಿದ್ದನ್ನು ಹೆಮ್ಮೆಯಿಂದ ಹೇಳುತ್ತಾರೆ ಇಲ್ಲಿನ ಸಿಬ್ಬಂದಿ. ಇಂಥ ಆಸ್ಪತ್ರೆಗೆ ಮುಖ್ಯವಾಗಿ ಬೇಕಿರುವ ಆಂಬ್ಯುಲೆನ್ಸ್‌ ವ್ಯವಸ್ಥೆ ಇಲ್ಲದಿರುವುದು ವಿಪರ್ಯಾಸ.

2 ಆಂಬ್ಯುಲೆನ್ಸ್‌ ಮೂಲೆ ಗುಂಪು: ಆಸ್ಪತ್ರೆಗೆ ಆಂಬ್ಯುಲೆನ್ಸ್‌ ನೀಡಿಯೇ ಇಲ್ಲವೆಂದಲ್ಲ. ಹಿಂದೆ ಎರಡು ಆಂಬ್ಯುಲೆನ್ಸ್‌ ನೀಡಲಾಗಿತ್ತು. ಕಾಲಕ್ರಮೇಣ
ಅವು ಬಳಕೆಯಾಗಿ ನಿರುಪಯುಕ್ತವಾಗಿದೆ. ಅವುಗಳನ್ನು ಸ್ಯಾಬ್‌ಗಳೆಂದು ಪರಿಗಣಿಸಿದ್ದು, ಕಚೇರಿ ಆವರಣದಲ್ಲೇ ಮೂಲೆಗುಂಪಾಗಿವೆ. ಅದಾದ ಬಳಿಕ ತಾಲೂಕಿನ ಜೇಗರಕಲ್‌ ಆಸ್ಪತ್ರೆಗೆ ನೀಡಿದ್ದ ಆಂಬ್ಯುಲೆನ್ಸ್‌ ಇಲ್ಲಿಗೆ ತಂದು ಬಳಸಲಾಗುತ್ತಿತ್ತು. ಕೆಲ ದಿನಗಳ ಬಳಿಕ ಅಲ್ಲಿನ ಅಧಿಕಾರಿಗಳು ಅದನ್ನು ಮರಳಿ ಪಡೆದರು. ಈಗ ಆಮೇಲೆ ಜೇಗರಕಲ್‌ಗೆ ಹೊಸ ಆಂಬ್ಯುಲೆನ್ಸ್‌ ಮಂಜೂರಾ ಗಿದ್ದು, ಅಲ್ಲಿ ಎರಡು ಆಂಬ್ಯುಲೆನ್ಸ್‌ಗಳಿವೆ. ಆದರೆ, ನಗರ ಪ್ರಸೂತಿ ಆರೋಗ್ಯ ಕೇಂದ್ರಕ್ಕೆ ಮಾತ್ರ ಒಂದೂ ಲಭ್ಯವಿಲ್ಲ.

ಇದನ್ನೂ ಓದಿ:ಕೋಚ್ ರವಿ ಶಾಸ್ತ್ರೀಗೆ ಕೋವಿಡ್ ಪಾಸಿಟಿವ್: ಶಾಸ್ತ್ರೀ ಸೇರಿ ನಾಲ್ಕು ಮಂದಿ ಐಸೋಲೇಶನ್ ಗೆ

ಸರ್ಕಾರದ ಆದೇಶ ಗಾಳಿಗೆ: ಯಾವುದೇ ಸರ್ಕಾರಿ ಆಸ್ಪತ್ರೆಗಳಿಗೆ ಗರ್ಭಿಣಿಯರು ದಾಖಲಾದರೆ ಅವರ ಹೆರಿಗೆ ಬಳಿಕ ತಾಯಿ ಮಗುವನ್ನು ಅವರ ಮನೆಗೆ ಬಿಟ್ಟು ಬರಬೇಕು ಎಂದು ಸರ್ಕಾರ ಆದೇಶಿಸಿದೆ. ಅಲ್ಲದೇ, ಸರ್ಕಾರಿ ಆಸ್ಪತ್ರೆಯಲ್ಲಿ ತಾಯಂದಿರಿಗೆ ಕಿಟ್‌ ಕೂಡ ನೀಡಲಾಗುತ್ತಿದೆ. ಇಲ್ಲಿ ಮಾತ್ರ ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಯಾವುದೋ ಖಾಸಗಿ ವಾಹನದಲ್ಲಿ ಕರೆ ತರುತ್ತಾರೆ. ಹೆರಿಗೆ ಬಳಿಕವೂ ತಮ್ಮದೇ ವಾಹನಗಳಲ್ಲಿ ಮನೆಗೆ ತೆರಳುವಂತೆ ತಿಳಿಸಲಾಗುತ್ತದೆ. ಸಾಕಷ್ಟು ಬಡವರು ಇದಕ್ಕಾಗಿ ಮತ್ತೆ 2-3 ಸಾವಿರ ರೂ. ಖರ್ಚು ಮಾಡಿಕೊಳ್ಳುವ ಸ್ಥಿತಿ ಇದೆ. ಹಣವಿಲ್ಲ ಎಂದು ಒಂದೆರಡು ದಿನ ಆಸ್ಪತ್ರೆಗಳಲ್ಲಿ ಹೆಚ್ಚಿದ್ದರೂ ಸಿಬ್ಬಂದಿ ಬೇಗ ಬಿಡುಗಡೆ ಹೊಂದಿ ಬೇರೆಯವರು ಬರುತ್ತಾರೆ ಎಂದು ತಾಕೀತು ಮಾಡುತ್ತಾರೆ.

Advertisement

ಸ್ವಚ್ಛತೆಗಿಲ್ಲ ಕಿಂಚಿತ್ತೂ ಕಾಳಜಿ
ಹೆರಿಗೆ ಎಂದರೆ ಮಗುವಿನ ಜನನವಾದರೆ ತಾಯಿಗೆ ಮರುಜನ್ಮವಿದ್ದಂತೆ. ಹುಟ್ಟಿದಮಕ್ಕಳನ್ನು ಎಷ್ಟು ಜತನ ಮಾಡಿದರೂ ಸಾಲದು ಎನ್ನು ವಂತಿರುತ್ತದೆ. ಸುತ್ತಲಿನ ಪರಿಸರ ಕೂಡ ಅಷ್ಟೇ ಚನ್ನಾಗಿರಬೇಕು. ಆದರೆ, ಈ ಆಸ್ಪತ್ರೆ ಸುತ್ತಲಿನ ಪರಿಸರ ಕಂಡರೆ ಅಲ್ಲಿ ಒಂದು ಕ್ಷಣ ಕೂಡ ನಿಲ್ಲಲಾಗದು. ಪಕ್ಕದಲ್ಲೇ ಮಾವಿನಕೆರೆಯಿದ್ದು, ಘನ ತ್ಯಾಜ್ಯವನ್ನೆಲ್ಲ ಬೇಕಾಬಿಟ್ಟಿ ವಿಲೇವಾರಿ ಮಾಡುತ್ತಿದ್ದಾರೆ. ಕಚೇರಿ ಕಾಂಪೌಂಡ್‌ನ‌ಲ್ಲೇ ಕೊಚ್ಚೆ ಸೇರಿಕೊಂಡರೂ ಆಸ್ಪತ್ರೆ ಅಧಿಕಾರಿಗಳು ಸ್ವಚ್ಛತೆಗೆ ಕ್ರಮ ವಹಿಸಿಲ್ಲ. ಸೊಳ್ಳೆ ಕಾಟ ಹೆಚ್ಚಾಗಿದ್ದು, ಹುಟ್ಟಿದ ಹಸುಗೂಸುಗಳ ರಕ್ತ ಹೀರುತ್ತವೆ.ಕಚೇರಿ ಆವರಣದಲ್ಲೂ ಹುಲ್ಲು ಬೆಳೆದು ಹುಳು ಹುಪ್ಪಡಿ ಹೆಚ್ಚಾಗುವಂತಿದೆ. ಹುಟ್ಟಿದ ಮಕ್ಕಳಿಗೆ ಇರಬೇಕಾದ ಸ್ವಚ್ಛ, ಸುಂದರ, ಉತ್ತಮ ವಾತಾವರಣ ವಂತೂ ಇಲ್ಲಿಲ್ಲ

ರಾಯಚೂರು ನಗರದ ಪ್ರಸೂತಿ ಆರೋಗ್ಯ ಕೇಂದ್ರಕ್ಕೆ ಆಂಬ್ಯುಲೆನ್ಸ್‌ ಅಗತ್ಯತೆ ಇದೆ. ಈಗಾಗಲೇ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ. ಈಚೆಗೆ ತಾಲೂಕಿಗೆ ಆಂಬ್ಯುಲೆನ್ಸ್‌ ಬಂದರೂ ಇಲ್ಲಿಗೆ ಮಂಜೂರಾತಿ ನೀಡಿಲ್ಲ. ಜುರಾಲಾ ಯೋಜನೆಯಡಿ ಎರಡು ಆಂಬ್ಯುಲೆನ್ಸ್‌ ಬರುವ ನಿರೀಕ್ಷೆಯಿದ್ದು, ಅದರಲ್ಲೇ ಈ ಕೇಂದ್ರಕ್ಕೆ ನೀಡಲುಕೇಳಲಾಗಿದೆ.
-ಡಾ| ಶಕೀರ್‌,
ತಾಲೂಕು ಆರೋಗ್ಯಾಧಿಕಾರಿ

-ಸಿದ್ಧಯ್ಯಸ್ವಾಮಿ ಕುಕುನೂರು

Advertisement

Udayavani is now on Telegram. Click here to join our channel and stay updated with the latest news.

Next