Advertisement

ಆನೆಗಳ ಮನ ಕರಗಿಸುವ ವಿಸ್ಮಯಕಾರಿ ಮಾತೃ ವಾತ್ಸಲ್ಯ

06:00 AM Jan 14, 2018 | |

ವನ್ಯಜೀವಿಗಳಿಗೆ ನಮ್ಮ ಇರುವಿಕೆಯ ಅರಿವಿಲ್ಲದಿದ್ದರೆ, ಅವುಗಳ ನೈಸರ್ಗಿಕ ನಡವಳಿಕೆಯೇ ಬೇರೆ. ಅದನ್ನು ಲಕ್ಷ ಕೊಟ್ಟು, ನಿಶ್ಯಬ್ದವಾಗಿ ಗಮನಿಸಿದರೆ ಒಂದು ನಿಗೂಢವಾದ, ಆದರೆ ಅದ್ಭುತವಾದ  ಪ್ರಪಂಚವೇ ತೆರೆದುಕೊಳ್ಳುತ್ತದೆ. ಅದರಲ್ಲೂ ಆನೆಗಳು ಹಿಮಾಲಯವಿದ್ದ ಹಾಗೆ. ಎಷ್ಟು ನೋಡಿದರೂ ತೃಪ್ತಿಯಾಗದಷ್ಟು ಸೌಂದರ್ಯ, ನಿಗೂಢತೆ ಉಳ್ಳಂಥವು. ಮತ್ತೂ ಕೆಲವೊಮ್ಮೆ ಹೆದರಿಕೆಯಾಗುವ ಗಾತ್ರ, ನಮ್ಮ ಕಲೆ ಸಂಸ್ಕೃತಿಯಲ್ಲಿ ಬೆರೆತು ಹೋಗಿರುವ ಅದ್ಭುತ ಜೀವಿ. ಸಮುದ್ರಕ್ಕೆ ಸಮುದ್ರವೇ ಹೋಲಿಕೆಯೆಂದ ಹಾಗೆ, ಆನೆಗಳಿಗೆ ಆನೆಗಳೇ ಹೋಲಿಕೆ.  ದುರಾದೃಷ್ಟವಶಾತ್‌ ಅವುಗಳ ನೆಲೆಯನ್ನು ನಮ್ಮ ಕೈಯಾರೆ ಹಾಳುಗೆಡುವುತ್ತಿದ್ದೇವೆ.

Advertisement

ಒಂದು ಬೇಸಿಗೆಯ ಅಪರಾಹ್ನ ನಾಗರಹೊಳೆಯ ಕಾಡಿನಲ್ಲಿ ನೀರಿನ ಕಟ್ಟೆಯ ಬಳಿ ಕುಳಿತಿದ್ದೆ. ನಾನು ಕುಳಿತಿದ್ದ ವೀಕ್ಷಣಾ ಗೋಪುರದ 180 ಡಿಗ್ರಿ ಕೋನದಲ್ಲಿ ಸುಮಾರು ಹದಿನೈದು ಮೀಟರ್‌ನಷ್ಟು ಅಗಲಕ್ಕೆ ಪೊದೆಗಳನ್ನು ಸವರಿ ವನ್ಯಜೀವಿ ವೀಕ್ಷಣೆಗೆ ಅನುಕೂಲವಾಗುವ ಹಾಗೆ ನಾಲ್ಕು ವೀಕ್ಷಣಾ ಗೆರೆಗಳನ್ನು ನಿರ್ಮಿಸಲಾಗಿತ್ತು. ಈ ಗೆರೆಗಳಿಗೆ ಇಂಗ್ಲಿಷ್‌ನಲ್ಲಿ ವ್ಯೂ ಲೈನ್‌ ಎಂದು ಕರೆಯುತ್ತಾರೆ. ಮಧ್ಯದಲ್ಲಿದ್ದ ವ್ಯೂ ಲೈನ್‌ನಲ್ಲಿ ಪುಟ್ಟದೊಂದು ಕೆರೆ. ಈ ಕೆರೆ, ಬೇಸಿಗೆಯ ಸಮಯದಲ್ಲಿ ವನ್ಯಜೀವಿಗಳನ್ನು ಅಯಸ್ಕಾಂತದ ಹಾಗೆ ಸೆಳೆಯುತ್ತದೆ. ಆದರೆ ಅಂದು ನಾಲ್ಕಾರು ತಾಸು ಕಳೆದರೂ ಕೆಲವು ಜಿಂಕೆಗಳನ್ನು ಬಿಟ್ಟರೆ ಯಾವ ಪ್ರಾಣಿಯ ಕುರುಹೂ ಇರಲಿಲ್ಲ.  ನನ್ನ ಅದೃಷ್ಟವೇನೋ ಸರಿಯಿಲ್ಲ ಇನ್ನು ಸ್ವಲ್ಪ ಸಮಯ ಕಾದು ಹಿಂದಕ್ಕೆ ಹೋಗುವುದೆಂದು ನಿರ್ಧರಿಸಿದ್ದೆ. ಕಾಡು ಯಾವಾಗಲೂ ನಿಗೂಢ. ಎಲ್ಲಿಂದ, ಹೇಗೆ ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳಲಿಕ್ಕೆ ಆಗುವುದಿಲ್ಲ. 

ಸುಮಾರು ಮೂರೂವರೆ ಗಂಟೆಯ ವೇಳೆಗೆ ಹನ್ನೊಂದು ಆನೆಗಳ ಗುಂಪೊಂದು ಒಂದರ ಹಿಂದೆ ಒಂದಂತೆ ನಾನಿರುವ ಹೊಂಡದ ಹತ್ತಿರ ಬರುತ್ತಿದ್ದವು. ಮನುಷ್ಯರ ಹಾಗೆ ಆನೆಗಳು ಸಹ ತಮ್ಮದೇ ಕಾಲ್ದಾರಿಯಲ್ಲಿ ನಡೆದು ಬಂದವು. ಅವುಗಳಲ್ಲಿ ಸುಮಾರು ಎರಡು ವರ್ಷದ ಪುಟ್ಟದೊಂದು ಮತ್ತು ಸುಮಾರು ಹತ್ತು ವರ್ಷದ ಗಂಡಾನೆ ಬಿಟ್ಟರೆ ಇನ್ನೆಲ್ಲವೂ ಹೆಣ್ಣಾನೆಗಳು. ಬಹುಶಃ ಒಂದು ವರ್ಷದಿಂದ ನಲವತ್ತು ವರ್ಷ ವಯಸ್ಕ ಆನೆಗಳು ಆ ಗುಂಪಿನಲ್ಲಿದ್ದವು. ಕುಟುಂಬದವರೆಲ್ಲರೂ ಜೊತೆಗೂಡಿ ಪಿಕ್ನಿಕ್‌ ಹೊರಟಿದ್ದ ಹಾಗಿತ್ತು.

ನನ್ನ ಎಡಭಾಗದಲ್ಲಿದ್ದ ವ್ಯೂ ಲೈನ್‌ ನಿಂದ ಬಂದ ಆನೆಗಳು ಪೊದೆಗಳೊಳಗೆ ನುಸುಳಿ ಕೆರೆಯಿದ್ದ ಎರಡನೇ ವ್ಯೂ ಲೈನ್‌ ಗೆ ಬಂದವು. ಗುಂಪಿನಲ್ಲಿ ಬಹು ವಯಸ್ಸಾಗಿರುವ ಆನೆ ಮುಂದಿದ್ದರೆ, ಅದರ ಹಿಂದೆ ಮರಿಯಾನೆಗಳು, ಅವುಗಳ ಹಿಂದೆ ಇತರ ಆನೆಗಳು. ಪೊದೆಯಿಂದಾಚೆ ಕಾಡಿನ ತೆರೆದ ಭಾಗಕ್ಕೆ ಬಂದೊಡನೆ ಪುಟ್ಟ ಮರಿಗಳು ತಮ್ಮ ಸೊಂಡಿಲನ್ನು ಎತ್ತಿ ಅತ್ತಿತ್ತ ತಿರುಗಿಸಿ ಅಲ್ಲಿ ಎಲ್ಲವೂ ಸುರಕ್ಷಿತ ತಾವು ಮುಂದುವರೆಯಬಹುದು ಎಂದು ಮಾಡುತಿದ್ದ ತಪಾಸಣೆ ಬಹು ಮುದ್ದಾಗಿ ಕಾಣುತಿತ್ತು. ಬಹುಶಃ ಗುಂಪಿನಲ್ಲಿದ್ದ ಹಿರಿಯ ಆನೆಗಳು ಸುರಕ್ಷತೆಯ ಬಗ್ಗೆ ಕಲಿಸಿದ್ದ ಪಾಠವನ್ನು ಮರಿಗಳು ಸ್ವಂತವಾಗಿ ಈಗ ಪ್ರಯೋಗಿಸುತ್ತಿದ್ದವೇನೋ ಎಂದೆನಿಸುತ್ತಿತ್ತು.ಎರಡನೇ ವ್ಯೂ ಲೈನ್‌ಗೆ ಬಂದ ಆನೆಗಳು ಹಾಕುತ್ತಿದ್ದ ಹೆಜ್ಜೆಯ ವೇಗಕ್ಕೆ ಕೆರೆಗೆ ಹೋಗಬಹುದೆಂಬ ನನ್ನ ಅಂದಾಜು ತಪ್ಪಾಗಿಸಿ ಆನೆಗಳೆಲ್ಲ ಅಲ್ಲಿದ್ದ ಉಪ್ಪಿನಗುಂಡಿಯತ್ತ ತಲೆ ಹಾಕಿದವು. ಚಾಕ್ಲೇಟ್‌ ಕಂಡ ಮಕ್ಕಳಂತೆ ಆತುರದಲ್ಲಿ ಆನೆಗಳು ನೈಸರ್ಗಿಕವಾಗಿ ಲವಣಮಿತ  ಮಣ್ಣು ತಿನ್ನಲು ಉಪ್ಪಿನ ಗುಂಡಿ ಸೇರಿದವು. ಆಲ್ಲಿಯವರಗೆ ಮಣ್ಣಿನಲ್ಲಿದ್ದ ಉಪ್ಪನ್ನು ಸಂತೋಷವಾಗಿ  ಹೆಕ್ಕುತ್ತಿದ್ದ ಹತ್ತಾರು ಹಸಿರು ಪಾರಿವಾಳಗಳು ಹಾಗೂ ಕೆಂಪು ತಲೆಯ ಗಿಳಿಗಳು ತಮಗಿನ್ನು ಇಲ್ಲಿ ಅವಕಾಶವಿಲ್ಲವೆಂದು ನಿರ್ಧರಿಸಿ ಪುರ್ರೆಂದು ಹಾರಿದವು. ಕಾಡಿನ ನಿಶ್ಯಬ್ದತೆಯ ಮಧ್ಯೆ ಅವುಗಳು ಹಾರಿದ ಶಬ್ದ ಗಾಬರಿ ತರಿಸುವಂತಿತ್ತು.

ಗುಂಪಿನ ನಾಯಕಿಯು, ತನ್ನ ನೆಲಹರುಹಿನಲ್ಲಿ ಯಾವ ಯಾವ ಋತುವಿನಲ್ಲಿ ಎಲ್ಲೆಲ್ಲಿ, ಯಾವ ಯಾವ ಕೆರೆಯಲ್ಲಿ ನೀರಿರುತ್ತದೆ, ಕಾಡಿನ ಯಾವ ಪ್ರದೇಶದಲ್ಲಿ ಆಹಾರವಿರುತ್ತದೆ ಎಂಬ ಮಾನಸಿಕ ಭೂಪಟವನ್ನು ಇಟ್ಟಿರುತ್ತದೆ. ಇದರಿಂದ ಅದು ತನ್ನ ಗುಂಪನ್ನು ಕಾಡಿನ ವಿವಿಧ ಭಾಗಗಳಿಗೆ ಸಮಯಾನುಸಾರ ಕರೆದುಕೊಂಡುಹೋಗುತ್ತದೆ. ಇದೆಲ್ಲವನ್ನು ಯಾವುದೇ ಗೂಗಲ್‌ ಮ್ಯಾಪ್‌ ನ ಸಹಾಯವಿಲ್ಲದೆ ತಿಳಿದುಕೊಂಡಿರುತ್ತದೆ. ಈ ವಿದ್ಯೆಯನ್ನು ಅದು ತನ್ನ ತಾಯಿಯಿಂದ ಕಲಿತಿರುತ್ತದೆ ಹಾಗೂ ತನ್ನ ಮಕ್ಕಳು ಮೊಮ್ಮಕ್ಕಳುಗಳಿಗೆ ತಿಳಿಸಿಕೊಡುತ್ತದೆ. ಇದೇ ಗುಂಪಿನ ನಾಯಕಿ ತನ್ನ ಮಕ್ಕಳಿಗೆ ಬಿಟ್ಟು ಹೋಗುವ ಆಸ್ತಿ.

Advertisement

ಮರಿಗಳು ತಾಯಿಯ ಸೊಂಡಿಲಿನಿಂದ ಜಗಳವಾಡಿ ಉಪ್ಪನ್ನು ಕಿತ್ತುಕೊಂಡು ತಿನ್ನುವುದು, ದೊಡ್ಡ ಆನೆಗಳು ಹೆಚ್ಚು ಲವಣ ಸಿಗುವ ಜಾಗಕ್ಕಾಗಿ ಒಂದನ್ನು ತಳ್ಳಿ ಇನ್ನೊಂದು ಕೆಲ ನಿಮಿಷಗಳವರೆಗೆ ಮೇಲಗೈ ಸಾಧಿಸುವುದು… ಹೀಗೆ ಅವುಗಳ ಸಂಜೆಯ ಟೀ ಪಾರ್ಟಿ ನಡೆಯುತಿತ್ತು. ಸುಮಾರು ಎಂಟತ್ತು ವರ್ಷದ ಗಂಡಾನೆಯೊಂದು ಉಳಿದ ಮರಿಗಳನ್ನು ಉಪ್ಪುಗುಂಡಿಯಿಂದ ಆಚೆ ತಳ್ಳುವ ತರಲೆಯನ್ನು ಸಹಿಸದ ತಾಯಿ ಆನೆಯೊಂದು ಅದನ್ನು ಹಣೆಯಿಂದ ಆಚೆ ತಳ್ಳಿ ಕಟ್ಟುನಿಟ್ಟಾದ ಎಚ್ಚರಿಕೆ ನೀಡಿತು. ಇವುಗಳ ಮಧ್ಯದಲ್ಲಿ ಗುಂಪಿನ ನಾಯಕಿ ಬಹು ಗಾಂಭೀರ್ಯದಿಂದ ತನ್ನಷ್ಟಕ್ಕೆ ತಾನು ಒಂದು ಮೂಲೆಯಲ್ಲಿ ಉಪ್ಪನ್ನು ಆಸ್ವಾದಿಸುತ್ತಿತ್ತು.

ಸುಮಾರು ಇಪ್ಪತ್ತು ನಿಮಿಷಗಳ ಕಾಲ ಉಪ್ಪು ಆಸ್ವಾದಿಸಿದ ನಂತರ ನಾಯಕಿಯು ಮೂರನೇ ವ್ಯೂ ಲೈನ್‌  ನತ್ತ ನಡೆಯಿತು. ಅದರ ಹಿಂದೆ ಹೊರಟ ಗುಂಪು, ಅಲ್ಲಿದ್ದ ಇನ್ನೊಂದು ಉಪ್ಪಿನಗುಂಡಿಗೆ ಲಗ್ಗೆಯಿಟ್ಟವು. ಅಷ್ಟರೊಳಗಾಗಲೇ ಸೂರ್ಯನ ಬೆಳಕು ಕೂಡ ಚಿನ್ನದ ಬಣ್ಣಕ್ಕೆ ತಿರುಗಿತ್ತು. ಉಪ್ಪಿನಗುಂಡಿಗಳಲ್ಲಿ ಒಂದೆರೆಡು ಘಂಟೆ ಕಳೆದ ಮೇಲೆ ಗುಂಪಿನ ನಾಯಕಿ ಕತ್ತಲಾಗುವ ಸಮಯವಾಗುತ್ತಿದೆ ಇನ್ನು ಹೊರಡಬೇಕು ಎಂಬ ಆದೇಶ ನೀಡಿದಂತಿತ್ತು. ಎಲ್ಲಾ ಆನೆಗಳು ಒಂದರ ಹಿಂದೆ ಒಂದಂತೆ ಸಾಲಾಗಿ ಹೊರಡಲು ಪ್ರಾರಂಭಿಸಿದವು. ಹೊರಟ ಆನೆಗಳ ಗುಂಪು ನನ್ನ ಬಲ ಬದಿಯಲ್ಲಿದ್ದ ನಾಲ್ಕನೇ ವ್ಯೂ ಲೈನ್‌ ಗೆ ಬಂದು ಒಂದರ ಹಿಂದೆ ಒಂದಂತೆ ಸಾಲಿನಲ್ಲಿ ಗಾಂಭೀರ್ಯದಿಂದ ನಡೆದು ಹೋಗುತ್ತಿದ್ದವು. 

ಇದ್ದಕ್ಕಿದ್ದ ಹಾಗೆ, ಗುಂಪಿನ ಮುಂದಿದ್ದ, ಹೆಚ್ಚು ವಯಸ್ಸಾದ ಹೆಣ್ಣಾನೆಯೊಂದು ಏನೋ ಜ್ಞಾಪಿಸಿಕೊಂಡಂತೆ ಹೋಗುತ್ತಿದ್ದಲ್ಲಿಯೇ ನಿಂತಿತು. ಅದನ್ನು ಗಮನಿಸದೆ, ಇನ್ನಿತರ ಆನೆಗಳೆಲ್ಲವೂ ಅದನ್ನು ದಾಟಿ ಮುಂದೆ ಹೋದವು. ಆನೆಗಳು ನಡೆಯುತ್ತಿದ್ದ ಹಾದಿಯ ಮಧ್ಯದಲ್ಲಿದ್ದ ಹತ್ತು ಜಿಂಕೆಗಳ ಗುಂಪೊಂದು ನಮಗ್ಯಾಕೆ ಉಸಾಬರಿ ಎಂಬಂತೆ ದಾರಿ ಮಾಡಿಕೊಟ್ಟು ಹಾದಿಯ ಬದಿಗೆ ಸರಿದವು. 

ನಿಂತ ಹೆಣ್ಣಾನೆಯು ನಾನು ಕುಳಿತಿದ್ದ ದಿಕ್ಕಿನತ್ತ ಮೆಲ್ಲಗೆ ಹೆಜ್ಜೆ ಹಾಕುತ್ತ ಬರಲು ಪ್ರಾರಂಬಿಸಿತು! ನನಗೆ ಆತಂಕ. ನನ್ನ ಇರುವಿಕೆ ಆನೆಗೇನಾದರೂ ತಿಳಿಯಿತೇನೋ? ಗಾಳಿಯ ದಿಕ್ಕು ಬದಲಾಗಿ ಆನೆಯೇನಾದರೂ ವಾಸನೆ ಹಿಡಿಯಿತೇ? ನನ್ನ ಬಟ್ಟೆಯ ಬಣ್ಣ ಸರಿಯಿಲ್ಲವೋ? ಹೀಗೆ ಹಲವು ಪ್ರಶ್ನೆಗಳು ಉದ್ಭವವಾದವು. ಆನೆಯಾಗಲೇ ನನ್ನಿಂದ ಐವತ್ತು ಮೀಟರ್‌ಗಿಂತಲೂ ಕಡಿಮೆ ಹತ್ತಿರಕ್ಕೆ ಬಂದಿತ್ತು. ಈ ದೂರವನ್ನು ಕ್ಷಣಾರ್ಧದಲ್ಲಿ ಕ್ರಮಿಸಬಲ್ಲ ಜೀವಿ ಅದು.
 
ಸ್ವಲ್ಪ ಮುಂದೆ ಬಂದ ಆನೆ ನಸುಗೆಂಪು ಬಣ್ಣದ ಹೂಬಿಟ್ಟಿದ್ದ ಎಕ್ಕದ ಗಿಡವೊಂದರ ಬಳಿ ಏನೋ ಯೋಚಿಸುತ್ತಿದ್ದ ಹಾಗೆ ನಿಂತಿತು. ಕೆಲ ಕ್ಷಣಗಳಾದ ಮೇಲೆ ಸೊಂಡಿಲು ಮೇಲೆತ್ತಿ ಎಡಕ್ಕೆ, ಬಲಕ್ಕೆ ಸಬ್‌ ಮರಿನ್‌ ನ ಪೆರಿಸ್ಕೋಪ್‌ ನ ಹಾಗೆ ತಿರುಗಿಸುತ್ತಿದೆ. ಏನೋ ಸಂಪರ್ಕಿಸುತ್ತಿದೆ ಎಂದೆನಿಸಿತು. ಅಧ್ಯಯನಗಳ ಪ್ರಕಾರ ಉಷ್ಣಾಂಶ ಬದಲಾಗುವ ಬೆಳಗ್ಗೆ ಮತ್ತು ಸಂಜೆಯ ವೇಳೆ ಆನೆಗಳು ತಮ್ಮ ಗುಂಪಿನ ಇತರ ಸದಸ್ಯರೊಡನೆ ಅಥವಾ ಇತರ ಗುಂಪುಗಳೊಡನೆ ಹೆಚ್ಚಾಗಿ ಸಂಪರ್ಕಿಸುತ್ತವೆ. ಇವುಗಳು ಪರಸ್ಪರ ಸಂಪರ್ಕಿಸಲು ಉಪಯೋಗಿಸುವ ಇನ್‌ಫ್ರಾ ಸೌಂಡ್‌ ತರಂಗಗಳು ಉಷ್ಣಾಂಶ ಬದಲಾಗುವ ಸಮಯದಲ್ಲೇ ಹೆಚ್ಚು ದೂರ ಕ್ರಮಿಸುತ್ತವೆ. ಗುಂಪಿನ ಕೆಲ ಸದಸ್ಯರುಗಳು ನೂರಾರು ಮೀಟರ್‌ ದೂರದ ಪ್ರದೇಶದಲ್ಲಿ ಸಹ ಚದುರಿಹೋಗಿರಬಹುದಾದ್ದರಿಂದ ಈ ವೇಳೆಯಲ್ಲಿ ಈ ರೀತಿಯ ಸಂಪರ್ಕ ಕಲ್ಪಿಸುವುದು ಅವುಗಳಿಗೆ ಸುಲಭ, ಬಹುಶಃ ಬಹುಮುಖ್ಯ ಕೂಡ. ಅಷ್ಟು ಹೊತ್ತಿಗಾಗಲೇ ಗುಂಪಿನ ಇತರ ಆನೆಗಳೆಲ್ಲ ಬಯಲು ದಾಟಿ, ಕಾಣದ ಹಾಗೆ ಕಾಡು ಸೇರಿದ್ದವು. ಅವುಗಳ ಸದ್ದೂ ಸಹ ಕೇಳಿಸುತ್ತಿರಲಿಲ್ಲ. 
  
ಇತ್ತ, ಎಕ್ಕದ ಗಿಡದ ಬಳಿ ನಿಂತಿದ್ದ ಆನೆ, ಸೊಂಡಿಲು ಇಳಿಸಿ ಏನೋ ನೀರಿಕ್ಷಿಸುತ್ತಿರುವ ಹಾಗೆ ಪೊದೆಗಳನ್ನೇ ನೋಡುತ್ತಾ ನಿಂತಿತು. ಐದಾರು ಕ್ಷಣ ಪೊದೆ ನೋಡಿದರೆ, ಇನ್ನೈದು ಕ್ಷಣ ನನ್ನ ದಿಕ್ಕಿನಲ್ಲಿ ನೋಡುತ್ತಿದೆ. ನನಗೊಳ್ಳೇ ಪೀಕಲಾಟ, ಅದರೊಡನೆ ಕುತೂಹಲ. ಕ್ಷಣಗಳು ಘಂಟೆಯಂತಾದವು. ಕೆಲವು ಕ್ಷಣಗಳಲ್ಲಿ ಪೊದೆಯ ಮಧ್ಯೆಯಿಂದ ಸುಮಾರು ಒಂದು ವರ್ಷದ ಹೆಣ್ಣಾನೆ ಮರಿಯೊಂದು ಆಚೆ ಬಂದಿತು. ಅದರ ಹಿಂದೆ ಸಮಾನ ವಯಸ್ಸಿನ, ಸುಮಾರು 8-9 ವರ್ಷದ, ಇನ್ನೆರೆಡು ಹೆಣ್ಣಾನೆಗಳೂ ಆಚೆ ಬಂದವು. ಮೂರು ಚಿಕ್ಕ ಆನೆಗಳು ತನ್ನ ಬಳಿಗೆ ಬಂದ ತಕ್ಷಣವೇ ಅವುಗಳ ಮೈಮೇಲೆ ಸೊಂಡಿಲಾಡಿಸಿದ ದೊಡ್ಡ ಹೆಣ್ಣಾನೆ ಏನೋ ಹೇಳಿದ ಹಾಗಿತ್ತು. ಬಹುಶಃ ಯಾಕಿಷ್ಟು ತಡ, ಎಷ್ಟೊತ್ತು ಆಡುವುದು, ಎಂದಿತೇನೊ? ನಾಲ್ಕೂ ಆನೆಗಳು ನನಗೆ ಬೆನ್ನು ಹಾಕಿ ಮತ್ತೆ ಒಂದರ ಹಿಂದೆ ಒಂದರಂತೆ, ಪುಟ್ಟ ಮರಿಯನ್ನು ಮಧ್ಯದಲ್ಲಿ ಸೇರಿಸಿಕೊಂಡು, ಸಾಲಾಗಿ ಕಾಡಿನತ್ತ ಸಾಗಿದವು. ಅವುಗಳನ್ನು ಹಿಂದಿನ ಕೋನದಿಂದ ನೋಡಿದರೆ, ಅವುಗಳ ದೊಡ್ಡ ಹೊಟ್ಟೆಗಳು ನಯವಾಗಿ ಅತ್ತಿತ್ತ ತೂಗಾಡುವುದು ನಾಜೂಕಿನಿಂದ ಬಳುಕುವ ಹಾಗೆ ಕಾಣುತ್ತದೆ. ಪುಟ್ಟ ಮರಿಯಾನೆಯ ಹೊಟ್ಟೆಯೂ ಕೂಡ ಬಳುಕುತಿತ್ತು.  ಅದೊಂದು ಮಂದಹಾಸ ತರುವ ದೃಶ್ಯ. ಅಷ್ಟು ದೊಡ್ಡ ದೇಹದಲ್ಲೂ ಎಷ್ಟು ಸೌಂದರ್ಯವಿದೆ ಎನಿಸುತ್ತದೆ.
 
ಆನೆಗಳ ಗುಂಪು ಉಪ್ಪಿನ ಗುಂಡಿ ಬಿಟ್ಟು ತಮ್ಮ ದಾರಿ ಹಿಡಿದ ಸಮಯದಲ್ಲಿ ಈ ಹೆಣ್ಣಾನೆಗೆ ಮರಿಗಳು ಗುಂಪಿನ ಜೊತೆಯಲ್ಲಿಲ್ಲವೇನೋ ಎಂಬ ಅರಿವಾಗಿರಬೇಕು. ಆ ಕಾರಣ, ಹಿಂದಕ್ಕೆ ಬಂದು ಚಿಕ್ಕ ಆನೆಗಳನ್ನು ಕರೆದು, ಅವುಗಳು ಬರುವವರೆಗೆ ಕಾದು ಕರೆದುಕೊಂಡು ಹೋಗಿರಬಹುದು. ಮೂರು ಆನೆಗಳು ಸಣ್ಣವಾಗಿದ್ದರಿಂದ ಕತ್ತಲಾದರೆ ಗುಂಪು ಸೇರುವುದು ಕಷ್ಟವಾಗಬಹುದೆಂದು ಅವುಗಳನ್ನು ಜೊತೆಗೆ ಕರೆದೊಯ್ಯಲು ಹಿಂದೆ ಬಂದಿರಬಹುದು. ಅತೀ ಸುಂದರ, ಭಾವಕೋಶಗಳನ್ನೆಲ್ಲಾ ವ್ಯಾಪಿಸಿಕೊಳ್ಳುವ, ಮನಸ್ಸಿಗೆ ನಾಟುವ ವನ್ಯಜೀವಿಗಳ ಪ್ರಪಂಚದ ಚಿಕ್ಕ ಸನ್ನಿವೇಶವೊಂದಕ್ಕೆ ನಾನೊಬ್ಬ ಅಪರೂಪದ ಪ್ರೇಕ್ಷಕನಾಗಿದ್ದೆ.
 
ವನ್ಯಜೀವಿಗಳಿಗೆ ನಮ್ಮ ಇರುವಿಕೆಯ ಅರಿವಿಲ್ಲದಿದ್ದರೆ, ಅವುಗಳ ನೈಸರ್ಗಿಕ ನಡವಳಿಕೆಯೇ ಬೇರೆ. ಅದನ್ನು ಲಕ್ಷÂ ಕೊಟ್ಟು, ನಿಶ್ಯಬ್ದವಾಗಿ ಗಮನಿಸಿದರೆ ಒಂದು ನಿಗೂಢವಾದ, ಆದರೆ ಅದ್ಭುತವಾದ  ಪ್ರಪಂಚವೇ ತೆರೆದುಕೊಳ್ಳುತ್ತದೆ. ಅದರಲ್ಲೂ ಆನೆಗಳು ಹಿಮಾಲಯವಿದ್ದ ಹಾಗೆ. ಎಷ್ಟು ನೋಡಿದರೂ ತೃಪ್ತಿಯಾಗದಷ್ಟು ಸೌಂದರ್ಯ, ನಿಗೂಢತೆ ಉಳ್ಳಂಥವು. ಮತ್ತೂ ಕೆಲವೊಮ್ಮೆ ಹೆದರಿಕೆಯಾಗುವ ಗಾತ್ರ, ನಮ್ಮ ಕಲೆ ಸಂಸ್ಕೃತಿಯಲ್ಲಿ ಬೆರೆತು ಹೋಗಿರುವ ಅದ್ಭುತ ಜೀವಿ. ಸಮುದ್ರಕ್ಕೆ ಸಮುದ್ರವೇ ಹೋಲಿಕೆಯೆಂದ ಹಾಗೆ, ಆನೆಗಳಿಗೆ ಆನೆಗಳೇ ಹೋಲಿಕೆ.  ದುರಾದೃಷ್ಟವಶಾತ್‌ ಅವುಗಳ ನೆಲೆಯನ್ನು ನಮ್ಮ ಕೈಯಾರೆ ಹಾಳುಗೆಡುವುತ್ತಿದ್ದೇವೆ.

ಬಹುಶಃ ಆನೆಗಳಂತಹ ವನ್ಯಜೀವಿಗಳಿಂದ ನಾವು ಕಲಿಯುವುದು ಸಾಕಷ್ಟಿದೆ. ಮೂರು ಮರಿಯಾನೆಗಳನ್ನು ಕರೆದೊಯ್ದ ಹೆಣ್ಣಾನೆಯು ಅವುಗಳ ತಾಯಿಯೋ, ಅಥವಾ ಆ ಮರಿಗಳಲ್ಲಿ ಒಂದು ಮರಿಯಾದರೂ ಅದರದೋ, ಯಾವುದೂ ತಿಳಿಯಲಿಲ್ಲ. ಆದರೂ ಮರಿಗಳು ಬಂದಿಲ್ಲವಲ್ಲ ಎಂಬ ಅರಿವಾಗಿ ಅವುಗಳನ್ನು, ಕರೆದು, ಬರುವವರೆಗೂ ಕಾದು, ಜೊತೆಯಲ್ಲಿ ಕರೆದುಕೊಂಡು ಹೋದ ದೃಶ್ಯ ನನಗೆ ವಿಸ್ಮಯವಾಯಿತು ಹಾಗೂ ಮನ ಕರಗಿತು!

ಆನೆಗಳ ಮಾತೃವಾತ್ಸಲ್ಯ ಕುರಿತ ಚಿತ್ರಸಂಪುಟ ಒಳಗೊಂಡ ವಿಡಿಯೋ ನೋಡಲು ಈ ಲಿಂಕ್‌ https://goo.gl/7dUVNy ಎಂದು ಟೈಪ್‌ ಮಾಡಿ.

– ಸಂಜಯ್‌ ಗುಬ್ಬಿ
UdayavaniVedike@manipalmedia.com

Advertisement

Udayavani is now on Telegram. Click here to join our channel and stay updated with the latest news.

Next