Advertisement

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಕಂಪನ್ನು ಪಸರಿಸಿದ ಸಾಧಕ ರೈತ

09:37 PM Jan 07, 2020 | mahesh |

ಹೆಸರು: ಜೂಲಿಯನ್‌ ದಾಂತಿ
ಏನೇನು ಕೃಷಿ: ಭತ್ತ, ತೆಂಗು, ಅಡಿಕೆ, ಹೈನುಗಾರಿಕೆ, ಕಾಳು ಮೆಣಸು, ಗೇರು, ದವಸ ಧಾನ್ಯ, ವಿವಿಧ ತರಕಾರಿಗಳು
ಎಷ್ಟು ವರ್ಷ: 40 ವರ್ಷಗಳಿಂದ
ಕೃಷಿ ಪ್ರದೇಶ: 8 ಎಕರೆ
ಸಂಪರ್ಕ: 9964024082

Advertisement

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಸರಕಾರದಿಂದ ಪ್ರಶಸ್ತಿ -ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಕಟಪಾಡಿ: 2ನೇ ಸುಗ್ಗಿ ಭತ್ತದ ಬೆಳೆಯನ್ನು ಒಂದು ಎಕರೆ ಪ್ರದೇಶದಲ್ಲಿ ಬೆಳೆದು ಉದ್ಯಾವರ-ಕುತ್ಪಾಡಿ ಕೃಷಿ ಮಣ್ಣಿನ ಕಂಪಿನ ಫಸಲನ್ನು ಕಳೆದ 50 ವರ್ಷಗಳಿಂದಲೂ ರಾಷ್ಟ್ರೀ ಅಂತಾರಾಷ್ಟ್ರೀಯ ಇಗರ್ಜಿಗಳಿಗೆ ಕನ್ಯಾ ಮರಿಯಮ್ಮನ ಜನ್ಮದಿನದಂದು (ಸೆ.8) ಆಚರಿಸುವ ತೆನೆ (ಕದಿರು)ಕಟ್ಟಲು ಹಾಗೂ ದೇಗುಲಗಳು, ಸಂಘ, ಸಂಸ್ಥೆಗಳು, ಕೌಟುಂಬಿಕವಾಗಿಯೂ ಫಸಲು ಭರಿತ ತೆನೆಯನ್ನು ಒದಗಿಸುತ್ತಾ ಬಂದಿರುವ ಉಡುಪಿ ತಾಲೂಕು ಮಟ್ಟದ ರೈತ ಸಾಧಕ ಪ್ರಶಸ್ತಿ ಪುರಸ್ಕೃತ ರೈತ ಕುತ್ಪಾಡಿಯ ಜೂಲಿಯನ್‌ ದಾಂತಿ ಸಮಗ್ರ ಕೃಷಿಕರಾಗಿ ಗುರುತಿಸಿಕೊಂಡಿರುತ್ತಾರೆ.

ಅವಿಭಕ್ತ ಕುಟುಂಬದ 8 ಎಕರೆ ಜಮೀನಿನಲ್ಲಿ ಭತ್ತ, ತೆಂಗು, ಅಡಿಕೆ, ಹೈನುಗಾರಿಕೆ, ಕಾಳು ಮೆಣಸು, ಗೇರು, ಅನಾನಸು, ಮಾವು, ಹುಣಿಸೆ, ದವಸ ಧಾನ್ಯ, ವಿವಿಧ ತರಕಾರಿಗಳು, ಬಾಳೆಹಣ್ಣು, ತಾಳಿಬೊಂಡ, ಬಿದಿರು ಬೆಳೆಯನ್ನು ಬೆಳೆಯುವ ಬಿ.ಕಾಂ. ಎಲ್‌ಎಲ್‌ಬಿ ಪದವೀಧರ ಜೂಲಿಯನ್‌ ದಾಂತಿ ಕೃಷಿ ಸಂಶೋಧಕನಾಗಿ ನೂರಾರು ಮಂದಿಗೆ ಮಾಹಿತಿ ಮಾರ್ಗದರ್ಶಕರಾಗಿ ಗುರುತಿಸಿಕೊಂಡಿದ್ದಾರೆ.

ಹಟ್ಟಿ ಗೊಬ್ಬರ ಕೃಷಿಯ ಬಂಡವಾಳ
ಹಟ್ಟಿ ಗೊಬ್ಬರ ಬಳಸಿ ನಡೆಸುವ ಕೃಷಿಯೇ ಇವರ ಕೃಷಿ ಬಂಡವಾಳವಾಗಿದ್ದು, ಕೋಣಗಳ ಮೂಲಕ ಗದ್ದೆ ಉಳುಮೆ ನಡೆಸುವ ಇವರ ಕೋಣಗಳು 2006ರಲ್ಲಿ ಕಟಪಾಡಿ ಜೋಡುಕರೆ ಕಂಬಳದಲ್ಲಿ ಸ್ಪರ್ಧಿಸಿದ್ದವು. ಮಳೆಗಾಲದ ಉಳುಮೆಗೆ ಬಾಡಿಗೆಗೆ ಕೋಣಗಳನ್ನು ಬಳಸುವ ಈ ರೈತ, ಹೆಚ್ಚಾಗಿ ಕೃಷಿ ನೌಕರರನ್ನೇ ಬಳಸಿಕೊಳ್ಳುತ್ತಿದ್ದು, ತೀರಾ ಆವಶ್ಯಕ ಸಂದರ್ಭದಲ್ಲಿ ಮಾತ್ರ ರಾಸಾಯನಿಕ ಗೊಬ್ಬರ, ಹಾಗೂ ಯಂತ್ರಗಳ ಬಳಕೆಯನ್ನು ಮಾಡುತ್ತಾರೆ.

Advertisement

ಅವಿಭಕ್ತ ಕುಟುಂಬವೇ ಇವರ ಕೃಷಿಯ ಸಂಪನ್ಮೂಲ
ಸ್ವತಃ ಪಂಪ್‌ಸೆಟ್‌, ಸ್ಪೆಯರ್‌, ಪವರ್‌ ವೀಡರ್‌ ಹಾಗೂ ಸ್ಪಿಕ್ಲರ್‌ ಬಳಕೆಯನ್ನು ಕೃಷಿ, ತೋಟಗಾರಿಕೆಗೆ ಬಳಸುತ್ತಿದ್ದಾರೆ. ಅವಿಭಕ್ತ ಕುಟುಂಬವೇ ಇವರ ಕೃಷಿಯ ಸಂಪನ್ಮೂಲವಾಗಿದೆ. ಉದ್ಯಾವರಭಾಗದಲ್ಲಿ 0.04 ಎಕರೆ, ಕುತ್ಪಾಡಿ ಗ್ರಾಮದಲ್ಲಿ 0.06 ಎಕರೆ ಮತ್ತು 0.08 ಎಕರೆ ಸ್ಥಳವನ್ನು ರಸ್ತೆ ನಿರ್ಮಾಣಕ್ಕೆ ಬಿಟ್ಟು ಕೊಟ್ಟಿದ್ದು, ಪ್ರತಿ ವರ್ಷವೂ ಇಲ್ಲಿನ ಯುವ ಜನತೆಯಲ್ಲಿ ಮಣ್ಣಿನ ಕೃಷಿ ಕಂಪನ್ನು ಪಸರಿಸಲು ಅನುಕೂಲವಾಗುವಂತೆ ಗ್ರಾಮೀಣ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟಕ್ಕೆ ತನ್ನ ಗದ್ದೆಯನ್ನು ಒದಗಿಸಿ ಬಳಿಕ ಭತ್ತದ ಬೆಳೆಯನ್ನು ಬೆಳೆಸುತ್ತಾರೆ. ಅದರೊಂದಿಗೆ ಉದ್ಯಾವರ ಮಹತೋಭಾರ ಶ್ರೀ ಸಿದ್ಧಿ ವಿನಾಯಕ ದೇವರ ಅವಭೃಥೋತ್ಸವ ದಿನದ ಸಾಂಸ್ಕೃತಿಕ ವೈಭವದ ಕಾರ್ಯಕ್ರಮಗಳಿಗೂ ತಮ್ಮ ಕೃಷಿ ಗದ್ದೆಯ ಪ್ರದೇಶದಲ್ಲಿ ಸ್ಥಳಾವಕಾಶವನ್ನು ಒದಗಿಸುತ್ತಿದ್ದಾರೆ.

40 ವರ್ಷಗಳ ಕೃಷಿ
ಕನಿಷ್ಠ ನೂರು ವರ್ಷಗಳಿಂದಲೂ ಕೃಷಿಯನ್ನು ಅವಲಂಭಿಸಿರುವ ಕುಟುಂಬವಾಗಿ ಗುರುತಿಸಿಕೊಂಡಿದ್ದು, ಜೂಲಿಯನ್‌ ದಾಂತಿ ಅವರು 40 ವರ್ಷಗಳಿಂದಲೂ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದು, 3 ಎಕರೆ ತೆಂಗು, ಅಡಿಕೆ, ಕಾಳು ಮೆಣಸು, ಅನಾನಸು, 4 ಎಕರೆ ಭತ್ತ, ದ್ವಿದಳ ಧಾನ್ಯ, ಹಾಗೂ 1 ಎಕರೆ ಪ್ರದೇಶದಲ್ಲಿ ಗೇರು, ಮಾವು, ಬಾಳೆ, ತರಕಾರಿಯನ್ನು ಹಟ್ಟಿಗೊಬ್ಬರ ಬಳಸಿ ಬೆಳೆಸುತ್ತಾ ಬಂದಿರುತ್ತಾರೆ. ಕೃಷಿ ಕಾರ್ಯಗಳಿಗೆ ಯಂತ್ರದ ಮೊರೆ ಹೋಗುವ ಬದಲು ಮಾನವ ನೌಕರರನ್ನೇ ಅನುಭವಿ ಕೃಷಿಕರೊಂದಿಗೆ ಬಳಸಿಕೊಳ್ಳುತ್ತಿದ್ದಾರೆ. 2018-19ನೇ ಸಾಲಿನ ಕೃಷಿ ಪ್ರಶಸ್ತಿ ಯೋಜನೆಯಡಿ ರೈತರ ದಿನಾಚರಣೆಯ ಸಂದರ್ಭ ಸಾಧಕ ರೈತರಿಗೆ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಮಗ್ರ ಕೃಷಿ ಪದ್ಧತಿಯಲ್ಲಿ ಜೂಲಿಯನ್‌ ದಾಂತಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಸ್ವಾವಲಂಬಿಗಳಾಗಿ
ಪ್ರಾಪಂಚಿಕ ವಿಷಮ ಸ್ಥಿತಿಯಲ್ಲಿ ನಮ್ಮ ಆಹಾರದಲ್ಲಿ ನಾವೇ ಸ್ವಾವಲಂಬಿಗಳಾಗಿ ಇರಬೇಕು.
ಹಾಗಾದಲ್ಲಿ ಉತ್ತಮ ಭವಿಷ್ಯದೊಂದಿಗೆ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಕೃಷಿಯ ಕುರಿತು ನಕಾರಾತ್ಮಕ ಭಾವನೆ ತಾಳದೆ ಬದುಕು ರೂಪಿಸಲು ಅತ್ಯಂತ ಶ್ರೇಷ್ಠ ಕಾಯಕವೆಂದು ಇಂದಿನ ಯುವ ಸಮುದಾಯ ಅರ್ಥೈಸಬೇಕಾಗಿದೆ.ನಮ್ಮ ಇದ್ದ ಕೃಷಿ ಭೂಮಿಯ ಇಂಚಿಂಚೂ ಫಲವತ್ತತೆಗೊಳಿಸಿ ಫಸಲು ಭರಿತವಾಗಿಸಬೇಕು. ಯಾಂತ್ರಿಕ ಕೃಷಿಗಿಂತಲೂ ನಾವೇ ಹೆಚ್ಚು ಕೃಷಿ ಚಟುವಟಿಕೆಗಳಲ್ಲಿ ತೊಡಗುವುದರಿಂದ ಕೃಷಿ ಫ‌ಲವತ್ತತೆ ಹೆಚ್ಚುವುದರೊಂದಿಗೆ ಅನುಭವಿ ಕೃಷಿಕರಾಗಲು ಸಾಧ್ಯ.
ಇಂದು ಕೃಷಿಯನ್ನು ಎಲ್ಲೆಡೆ ಬೆಂಬಲಿಸುತ್ತಿದ್ದು ಇಲಾಖಾ ಸೌಲಭ್ಯ, ಸವಲತ್ತುಗಳನ್ನು ಬಳಸಿ ಕೃಷಿಯನ್ನು ಎಲ್ಲರೂ ನಡೆಸುವ ಮೂಲಕ ದೇಶವನ್ನು ಮತ್ತಷ್ಟು ಸಂಪದ್ಭರಿತವಾಗಿಸೋಣ
-ಜೂಲಿಯನ್‌ ದಾಂತಿ, ಕುತ್ಪಾಡಿ, ಸಮಗ್ರ ಕೃಷಿಕ

ವಿಜಯ ಆಚಾರ್ಯ, ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next