Advertisement

ಉಪ್ಪಿನಂಗಡಿ ಸರಕಾರಿ ಮಾದರಿ ಶಾಲೆಗೆ 183ರ ಹರೆಯ

06:13 PM Nov 08, 2019 | Team Udayavani |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1836 ಶಾಲೆ ಆರಂಭ
ಪ್ರಸ್ತುತ 357 ವಿದ್ಯಾರ್ಥಿಗಳು

ಉಪ್ಪಿನಂಗಡಿ: ಸ್ವಾತಂತ್ರ್ಯ ಪೂರ್ವದಲ್ಲಿ ಉಪ್ಪಿನಂಗಡಿ ದ.ಕ. ಜಿಲ್ಲೆಯ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು, ತಾಲೂಕು ಕೇಂದ್ರವೂ ಆಗಿತ್ತು. ಜಿಲ್ಲೆಯ ಜೀವ ನದಿಗಳಾದ ನೇತ್ರಾವತಿ ಕುಮಾರಧಾರಾ ನದಿಗಳಿಂದಾಗಿ ಜಲ ಮಾರ್ಗದ ವ್ಯವಹಾರ ನಡೆಯುತ್ತಿದ್ದ ಕಾಲಘಟ್ಟದಲ್ಲಿ ಜಿಲ್ಲೆಯ ಪ್ರಮುಖ ವಿದ್ಯಾಕ್ಷೇತ್ರವಾಗಿಯೂ ಉಪ್ಪಿನಂಗಡಿ ಗಮನ ಸೆಳೆದಿತ್ತು. 1836ರಲ್ಲಿ ಊರ ದಾನಿಗಳ ನೆರವಿನಿಂದ ಸ್ವಂತ ಭೂಮಿಯಲ್ಲಿ ಅಸ್ತಿತ್ವ ಕಂಡ ಇಲ್ಲಿನ ಸರಕಾರಿ ಮಾದರಿ ಶಾಲೆಗೆ ಪ್ರಸಕ್ತ 183ರ ಹರೆಯ.

ಮೊದಲು 1ರಿಂದ 5ನೇ ತರಗತಿಯ ವರೆಗೆ ತರಗತಿಗಳಿದ್ದು, ಲೋವರ್‌ ಎಲಿಮೆಂಟರಿ ಶಾಲೆಯಾಗಿತ್ತು. 1923ರಲ್ಲಿ ಹೈಯರ್‌ ಎಲಿಮೆಂಟರಿ ಶಾಲೆಯಾಗಿ ಪರಿವರ್ತನೆಗೊಂಡಿತಾದರೂ ಅದೇ ವರ್ಷ ಉಕ್ಕಿ ಹರಿದ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳಿಂದಾಗಿ ಭೀಕರ ನೆರೆಗೆ ಸಿಲುಕಿ ಜನಜೀವನ ಅಸ್ತವ್ಯಸ್ತಗೊಂಡಾಗ ಶಾಲೆಯೂ ಮುಚ್ಚಿತ್ತು. ಕೆಲವು ಸಮಯದ ಬಳಿಕ ಶಾಲೆ ಪುನರಾರಂಭಗೊಂಡು, 1929ರಲ್ಲಿ ಮತ್ತೆ ಹೈಯರ್‌ ಎಲಿಮೆಂಟರಿ ಶಾಲೆಯಾಗಿ ರೂಪುಗೊಂಡಿತು. 1935ರಲ್ಲಿ ಈ ಶಾಲೆಯಲ್ಲಿ ಶಿಕ್ಷಕರಾಗಿ ಅನಂತರ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿದ ಟಿ. ಲಕ್ಷ್ಮೀನಾರಾಯಣ ರಾವ್‌ ಅವರಿಂದಾಗಿ ಶಾಲೆ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಂಡಿತು. ಊರಿನ ಅಭಿವೃದ್ಧಿಯಲ್ಲಿ ಈ ಶಾಲಾ ವಿದ್ಯಾರ್ಥಿಗಳ ನೇತೃತ್ವ ಸಾಮಾನ್ಯವಾಗಿತ್ತು.

ಉದಾರಿಗಳಿಂದ ಭೂದಾನ
1955ರಲ್ಲಿ ಈ ಶಾಲಾ ಹಳೆ ವಿದ್ಯಾರ್ಥಿಗಳ ಸಂಘ ಸ್ಥಾಪನೆಯಾಗಿ ಜಿಲ್ಲೆಯಲ್ಲೇ ಅತ್ಯುತ್ತಮ ಸಂಘ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. 1969ರಲ್ಲಿ ಮಾದರಿ ಶಾಲೆಯಾಗಿ ಪರಿವರ್ತನೆಗೊಂಡು 2004-05ನೇ ಸಾಲಿನಲ್ಲಿ 8ನೇ ತರಗತಿಯನ್ನೂ ಒಳಗೊಂಡು ಉನ್ನತ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿತು. ಶಾಲೆಯ ಭೂಮಿ ಪಟ್ಟಣಶೆಟ್ಟಿ ಎಂಬ ಬಿರುದಾಂಕಿತ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ವ್ಯಕ್ತಿಯಿಂದ ಉದಾರವಾಗಿ ದೊರೆತಿದ್ದರೆ, ಕೈಮಗ್ಗ ತರಗತಿಗಾಗಿ ಅಗತ್ಯವಾದ ಭೂಮಿಯನ್ನು ಇಲ್ಲಿನ ಶ್ರೀ ಲಕ್ಷ್ಮೀವೆಂಕಟರಮಣ ದೇವಾಲಯದಿಂದ ಲಭಿಸಿದೆ.

Advertisement

ಸ್ವಾತಂತ್ರ್ಯ ಹೋರಾಟದಲ್ಲಿ ಆತ್ಮಾರ್ಪಣೆ
ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಚಳವಳಿ ತೀವ್ರವಾದಾಗ ದಾಸ್ಯ ವಿಮುಕ್ತಿಗಾಗಿ ಕ್ರಾಂತಿಯ ಪಥದಿಂದ ಹೋರಾಟ ನಡೆಸಿದ ಉಪ್ಪಿನಂಗಡಿಯ ಮಂಜನನ್ನು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಸತತ 4 ದಿನಗಳ ಕಾಲ ನೇಣುಗಂಬದಲ್ಲಿ ತೂಗು ಹಾಕಿರುವ ಅಮಾನುಷ ನಡೆ ಜಿಲ್ಲೆಯನ್ನು ತಲ್ಲಣಗೊಳಿಸಿತ್ತು. ಇಂತಹ ಮಹಾನ್‌ ಕ್ರಾಂತಿಕಾರಿಯನ್ನು ನೀಡಿರುವ ಶಾಲೆಯೂ ಇದೇ ಆಗಿದೆ.

ಉನ್ನತ ಹುದ್ದೆಗೆ ಏರಿದರು
ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ಅನೇಕರು ಉನ್ನತ ವ್ಯಾಸಂಗ ಮಾಡಿ ದೇಶ-ವಿದೇಶಗಳಲ್ಲಿ ಉನ್ನತ ಸ್ಥಾನಗಳಲ್ಲಿ ಸಾಧನೆಗೈದಿದ್ದಾರೆ. ಸಾಹಿತಿ ರಾಜಕಾರಣಿ ಬಿ.ಎಂ. ಇದಿನಬ್ಬ, ಮಂಗಳೂರಿನ ಪ್ರಖ್ಯಾತ ವೈದ್ಯ ಡಾ| ಅಬ್ದುಲ್‌ ಮಜೀದ್‌, ಡಾ| ಎಂ.ಆರ್‌. ಶೆಣೈ, ಡಾ| ಎಂ.ಎನ್‌. ಭಟ್‌ ಹೀಗೆ ಹಲವಾರು ವೈದ್ಯರು, ಎಂಜಿನಿಯರ್‌ಗಳನ್ನು ಈ ಶಾಲೆ ಸಮಾಜಕ್ಕೆ ನೀಡಿದೆ.

ಪಾರಂಪರಿಕ ಶಾಲೆ
ಶತಮಾನೋತ್ಸವ ಕಂಡ ಶಾಲೆಗಳನ್ನು ರಾಜ್ಯ ಸರಕಾರ ಪಾರಂಪರಿಕ ಶಾಲೆ ಎಂದು ಘೋಷಿಸಿ ಶಾಲಾ ಅಭಿವೃದ್ಧಿಗೆ ಧನಸಹಾಯ ಒದಗಿಸಿದೆ. ಶಾಲಾ ಗೋಡೆಗಳಲ್ಲಿ ಪ್ರಾಕೃತಿಕ ಸೊಬಗಿನ ಚಿತ್ತಾರಗಳು ರಚನೆಯಾಗಿ ಶಾಲೆ ಕಾನನದೊಳಗಿದೆಯೋ ಎನ್ನುವ ಭಾವನೆಯನ್ನು ಮೂಡಿಸುತ್ತಿದೆ.

ಏರುತ್ತಿದೆ ಮಕ್ಕಳ ಸಂಖ್ಯೆ
1982-83ರಲ್ಲಿ ಅತ್ಯಧಿಕವೆಂದರೆ 847 ವಿದ್ಯಾರ್ಥಿಗಳನ್ನು ಹೊಂದಿದ್ದ ಈ ಶಾಲೆ ಕಳೆದ ವರ್ಷ ಅತೀ ಕಡಿಮೆ ಅಂದರೆ 305 ವಿದ್ಯಾರ್ಥಿಗಳನ್ನು ಹೊಂದಿತ್ತು. ಆದರೆ ಈ ವರ್ಷದಿಂದ 1ನೇ ತರಗತಿಯಿಂದ ಆಂಗ್ಲ ಮಾಧ್ಯಮವನ್ನು ಸರಕಾರ ಅನುಷ್ಠಾನಿಸಿದ ಕಾರಣಕ್ಕೆ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. 1ರಿಂದ 8ನೇ ತರಗತಿಯವರೆಗೆ ಈ ಬಾರಿ 357 ವಿದ್ಯಾರ್ಥಿಗಳಿದ್ದಾರೆ. ಆದರೆ ಶಿಕ್ಷಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿಲ್ಲ. ವರ್ಗಾವಣೆಗೊಂಡು ಶಿಕ್ಷಕ ಸಂಖ್ಯೆ 8ಕ್ಕೆ ಇಳಿದಿದೆ.

ಎಲ್‌ಕೆಜಿ – ಯುಕೆಜಿ
ಉಪ್ಪಿನಂಗಡಿಯಲ್ಲಿ ಪ್ರಸಕ್ತ ಇರುವ 5 ಆಂಗ್ಲ ಮಾಧ್ಯಮಶಾಲೆಗೆ ಸಡ್ಡು ಹೊಡೆದಿರುವ ಇಲ್ಲಿನ ಎಸ್‌ಡಿಎಂಸಿ ಸರಕಾರಿ ಶಾಲೆಯಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ವಿಭಾಗವನ್ನು ತೆರೆದಿದೆ. ಈ ಬಾರಿ 85ಕ್ಕೂ ಹೆಚ್ಚಿನ ಮಕ್ಕಳು ಸೇರ್ಪಡೆಗೊಂಡಿದ್ದಾರೆ. ಈ ವಿಭಾಗದ ಶಿಕ್ಷಕರಿಗೆ ಸಂಬಳ ನೀಡುವ ಸಲುವಾಗಿ ವಿದ್ಯಾರ್ಥಿಗಳ ಹೆತ್ತವ‌ರಿಂದಲೇ ಮಾಸಿಕ 500 ರೂ. ಶುಲ್ಕ ವಿಧಿಸಿ ಈ ವಿಭಾಗವನ್ನು ನಡೆಸಲಾಗುತ್ತಿದೆ.

ಬ್ರಿಟಿಷ್‌ ಸೈನ್ಯವನ್ನು ಸೇರಿ ಹೋರಾಟ ನಡೆಸಿದ್ದರು
ಈ ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಬಾಬು ಹೆಗ್ಡೆ, ಫಿಲಿಫ್, ಜಾರ್ಜ್‌ ಜೋನಿ ಕೇಪು, ಯು. ಅಬ್ದುಲ್‌ ಖಾದರ್‌, ಇಬ್ರಾಹಿಂ, ಎಂ. ಚಂದಯ್ಯ, ಗುಂಡ್ಯ ಈಶ್ವರ ಗೌಡ ಅವರ ಸಹಿತ 22 ಮಂದಿ ಬ್ರಿಟಿಷ್‌ ಸೈನವನ್ನು ಸೇರಿ 2ನೇ ಮಹಾಯುದ್ದದಲ್ಲಿ ಭಾಗವಹಿಸಿದ್ದರು. ಈ ಪೈಕಿ ಹಲವರು ಹುತಾತ್ಮರಾಗಿದ್ದರು.

1934ರಲ್ಲಿ ನಾನು 1ನೇ ತರಗತಿಗೆ ಸೇರ್ಪಡೆಗೊಂಡಿದ್ದೆ. ಇಲ್ಲಿ ಉತ್ತಮ ಶಿಕ್ಷಕರಿದ್ದರು. ಶಾಲೆಗೆ ಸೇರುವಾಗ 450 ಮಕ್ಕಳಿದ್ದರೂ 8ನೇ ತರಗತಿಗಾಗುವಾಗ ಸಂಖ್ಯೆ ಹತ್ತಿಪ್ಪತ್ತು ಮಾತ್ರ ಇರುತ್ತಿತ್ತು. ಅದಕ್ಕೆ ಬಡತನವೇ ಪ್ರಮುಖ ಕಾರಣವಾಗಿತ್ತು. ಅಂದು ಬಡತನ ವ್ಯಾಪಕವಾಗಿದ್ದರೂ ಮಾನವೀಯತೆ, ಸಹೋದರತ್ವ ಶ್ರೀಮಂತವಾಗಿತ್ತು. ನಮ್ಮ ಕಾಲದಲ್ಲಿ ಟಿ. ಲಕ್ಷ್ಮೀ ನಾರಾಯಣ ರಾವ್‌ ಜನ ಮೆಚ್ಚುಗೆ ಪಡೆದ ಮುಖ್ಯೋಪಾಧ್ಯಾಯರಾಗಿದ್ದರೆ, ಇಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಿ. ಐತ್ತಪ್ಪ ನಾೖಕ್‌ ಅವರು ಹೆಗ್ಗಳಿಕೆಯ ಮುಖ್ಯೋಪಾಧ್ಯಾಯರಾಗಿದ್ದಾರೆ.
-ವೈದ್ಯ ಕೆ.ಎಸ್‌. ಶೆಟ್ಟಿ, ಶಾಲೆಯ ಹಿರಿಯ ವಿದ್ಯಾರ್ಥಿ

ನಮ್ಮ ಕಾಲದಲ್ಲಿ ಈ ಶಾಲೆ ಎಲ್ಲ ವರ್ಗದ ಜನರು ಒಗ್ಗೂಡುವ ಸರ್ವ ಧರ್ಮದ ದೇಗುಲವಾಗಿತ್ತು. ಇಲ್ಲಿನ ಒಂದೊಂದು ಕಾರ್ಯಕ್ರಮವೂ ನಮ್ಮೂರಿಗೆ ಹಬ್ಬವಾಗಿತ್ತು. ಅಂದು ಸೌಲಭ್ಯ ಕಡಿಮೆ ಇತ್ತು. ಮಕ್ಕಳ ಸಂಖ್ಯೆ ಹೆಚ್ಚಿತ್ತು. ಆ ಕಾಲದಲ್ಲಿ ವಿದೇಶದಲ್ಲಿ ತಿರಸ್ಕೃತಗೊಂಡ ಗೋಧಿ ಸಜ್ಜಿಗೆ ನಮಗೆ ಶಾಲೆಯಲ್ಲಿ ದೊರೆಯುವ ಆಹಾರವಾಗಿತ್ತು. ಆದರೆ ಇದೀಗ ಶಾಲೆಯಲ್ಲಿ ಬೈಸಿಕಲ್‌ನಿಂದ ಹಿಡಿದು ಪಠ್ಯಪುಸ್ತಕ, ಸಮವಸ್ತ್ರ, ಬಿಸಿ ಹಾಲು, ಮಧ್ಯಾಹ್ನದ ಊಟ ಸಹಿತ ಎಲ್ಲ ವ್ಯವಸ್ಥೆಗಳು ಸರಕಾರವೇ ನಿಭಾಯಿಸುತ್ತಿದೆ.
-ಕೆಂಪಿ ಮುಸ್ತಾಫ‌,  ಉಪ್ಪಿನಂಗಡಿ ಮಾಲಿಕ್ಕುದ್ದೀನಾರ್‌ ಜುಮ್ಮಾ ಮಸೀದಿ ಅಧ್ಯಕ್ಷರು (ಶಾಲೆಯ ಹಿರಿಯ ವಿದ್ಯಾರ್ಥಿ)

   ಎಂ.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next